Advertisement -Home Add

ಕ್ಷೇತ್ರದ ಯಾವುದೇ ಭಾಗಕ್ಕೂ ಅನ್ಯಾಯವಾಗದಂತೆ ಕೆಲಸ ನಿರ್ವಹಿಸುತ್ತಿದ್ದೇನೆ -ಲಕ್ಷ್ಮಿ ಹೆಬ್ಬಾಳಕರ್

80 ಲಕ್ಷ ರೂ. ವೆಚ್ಚದಲ್ಲಿ ಶಾಲಾ ಕೊಠಡಿಗಳ ನಿರ್ಮಾಣ

80 ಲಕ್ಷ ರೂ. ವೆಚ್ಚದಲ್ಲಿ ಶಾಲಾ ಕೊಠಡಿಗಳ ನಿರ್ಮಾಣ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – 80 ಲಕ್ಷ ರೂ. ವೆಚ್ಚದಲ್ಲಿ ವಿವಿಧ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಸೋಮವಾರ ಭೂಮಿ ಪೂಜೆ ನೆರವೇರಿಸಿದರು.
ಹಿಂದುಳಿದಿರುವ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವ ಹೆಬ್ಬಾಳಕರ್, ಶಾಲೆಗಳನ್ನು ಅಭಿವೃದ್ಧಿ ಪಡಿಸುವ  ದೃಷ್ಟಿಕೋನದಿಂದ ಹತ್ತಾರು ಯೋಜನೆಗಳಿಂದ ಅನುದಾನವನ್ನು ತರುತ್ತಿದ್ದಾರೆ. ಪ್ರವಾಹದಿಂದಾಗಿ ಒಂದಿಷ್ಟು ಹಿನ್ನಡೆ ಉಂಟಾಗಿದ್ದರೂ ಛಲ ಬಿಡದೆ ಮುನ್ನುಗ್ಗುತ್ತಿರುವ ಅವರು, ಮತ್ತೆ ಕ್ಷೇತ್ರವನ್ನು ಕಟ್ಟುತ್ತಿದ್ದಾರೆ.
ಕ್ಷೇತ್ರದ ಜನರಲ್ಲಿ ಆತ್ಮವಿಶ್ವಾಸ ತುಂಬುತ್ತ, ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿರುವ ಅವರು, ಸೋಮವಾರ  ನಬಾರ್ಡ್ ಅನುದಾನದ ಒಟ್ಟು  80 ಲಕ್ಷ ರೂ.ಗಳ ವೆಚ್ಚದಲ್ಲಿ ಗೋಜಗಾ ಗ್ರಾಮದ ಮರಾಠಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೆಚ್ಚುವರಿಯಾಗಿ ಐದು ಕೊಠಡಿಗಳ ನಿರ್ಮಾಣ, ಬೆಕ್ಕಿನಕೇರಿ ಗ್ರಾಮದ ಸರ್ಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಗೆ ಹೆಚ್ಚುವರಿ ಒಂದು ಕೊಠಡಿ ನಿರ್ಮಾಣ ಹಾಗೂ ತುರಮರಿ ಗ್ರಾಮದ ಸರ್ಕಾರಿ ಹಿರಿಯ ಮರಾಠಿ ಪ್ರಾಥಮಿಕ ಶಾಲೆಗೆ ಹೆಚ್ಚುವರಿ ಒಂದು ಕೊಠಡಿಯ ನಿರ್ಮಾಣದ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ನೆರವೇರಿಸಿದರು.
ಕ್ಷೇತ್ರದ ಯಾವುದೇ ಭಾಗಕ್ಕೂ ಅನ್ಯಾಯವಾಗದಂತೆ ಕೆಲಸ ನಿರ್ವಹಿಸುತ್ತಿದ್ದೇನೆ. ಜನರು ಈಗ ನಿಜವಾದ ಅಭಿವೃದ್ಧಿಯನ್ನು ಕಾಣುವಂತೆ ಮಾಡಿದ್ದೇನೆ. ಪ್ರವಾಹ, ಕೊರೋನಾ ಸಂಕಷ್ಟದ ಮಧ್ಯೆಯೂ ಎಡೆಬಿಡದೆ ಕೆಲಸ ನಿರ್ವಹಿಸಲು ಜನರು ನನಗೆ ಸಹಕಾರ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲೂ ಇದೇ ರೀತಿಯ ಸಹಕಾರವಿದ್ದರೆ ಕ್ಷೇತ್ರವನ್ನು ಅತ್ಯಂತ ಬೇಗ ಮಾದರಿ ಕ್ಷೇತ್ರವನ್ನಾಗಿಸಲು ಸಾಧ್ಯ ಎಂದು ಲಕ್ಷ್ಮಿ ಹೆಬ್ಬಾಳಕರ್ ಈ ಸಂದರ್ಭದಲ್ಲಿ ಹೇಳಿದರು.
ಈ ಸಂದರ್ಭದಲ್ಲಿ ಆಯಾ ಗ್ರಾಮಗಳ ಹಿರಿಯರು, ಕ್ಷೇತ್ರ ಶಿಕ್ಷಣಾಧಿಕಾರಿ ಜುಟ್ಟನವರ, ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಅರುಣ ಕಟಾಂಬಳೆ, ಎಪಿಎಂಸಿ ಅಧ್ಯಕ್ಷ ಯುವರಾಜ ಕದಂ, ಜಿಲ್ಲಾ ಪಂಚಾಯತ ಸದಸ್ಯೆ ಸರಸ್ವತಿ ಪಾಟೀಲ, ಶಾಲಾ ಸುಧಾರಣಾ ಸಮಿತಿಯವರು, ಆಯಾ ಗ್ರಾಮಗಳ ಪಂಚಾಯತಿಗಳ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸದಸ್ಯರು ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.