GIT add 2024-1
Laxmi Tai add
Beereshwara 33

ಸರ್ಕಾರಿ ಆಸ್ಪತ್ರೆಗಳಲ್ಲಿ ಸರ್ಕಾರೇತರ ಆಸ್ಪತ್ರೆಗಳಿಗಿಂತ ಉತ್ತಮ ಗುಣ ಮಟ್ಟದ ಚಿಕಿತ್ಸೆ – ಜಾರಕಿಹೊಳಿ

ದೂರವಾಣಿ ಮೂಲಕ ವೈದ್ಯಾಧಿಕಾರಿಗಳ ಸಭೆ ನಡೆಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ, ಗೋಕಾಕ: ಕೊರೋನಾ ಸೋಂಕಿತರ ಸುರಕ್ಷತೆಗಾಗಿ ಹೆಚ್ಚಿನ ಕಾಳಜಿ ಮಾಡಿ. ಕರ್ತವ್ಯದಲ್ಲಿ ಎಂದಿಗೂ ನಿರ್ಲಕ್ಷ್ಯ ಮಾಡಬೇಡಿ. ಬಡ ರೋಗಿಗಳಿಗೆ ನ್ಯಾಯ ದೊರಕಿಸುವ ಕೆಲಸ ಮಾಡಿ. ಗೋಕಾಕ -ಮೂಡಲಗಿ ತಾಲೂಕುಗಳ ಸೋಂಕಿತರಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಿ. ಅವರುಗಳನ್ನು ಗುಣಮುಖರನ್ನಾಗಿ ಮಾಡುವ ಜವಾಬ್ದಾರಿ ನಿಮ್ಮದಾಗಿದೆ ಎಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ವೈದ್ಯಾಧಿಕಾರಿಗಳಿಗೆ ಹೇಳಿದರು.
ಎನ್‌ಎಸ್‌ಎಫ್ ಅತಿಥಿಗೃಹದಲ್ಲಿ ನಡೆದ ಗೋಕಾಕ ಮತ್ತು ಮೂಡಲಗಿ ತಾಲೂಕಗಳ ಪಿಎಚ್‌ಸಿ ವೈದ್ಯಾಧಿಕಾರಿಗಳ ಸಭೆಯನ್ನು ದೂರವಾಣಿ ಮೂಲಕ ನಡೆಸಿ ಮಾತನಾಡಿದ ಅವರು, ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಕೆ ನೀಡಿದರು.
ಕಳೆದ ಮಾರ್ಚ ತಿಂಗಳಿನಿಂದ ಹರಡಿರುವ ಈ ಕೊರೋನಾ ರೋಗ ಇನ್ನೂ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಸೋಂಕಿತರ ಆರೈಕೆಗಾಗಿ ಗೋಕಾಕ ಮತ್ತು ಮೂಡಲಗಿ ತಾಲೂಕುಗಳ ಮೂರು ಸ್ಥಳಗಳಲ್ಲಿ ಕೋವಿಡ್ ಕಾಳಜಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಈ ಕೇಂದ್ರಗಳಲ್ಲಿ ಸೋಂಕಿತರಿಗೆ ಎಲ್ಲ ರೀತಿಯ ಅನುಕೂಲತೆಗಳನ್ನು ಕಲ್ಪಿಸಿಕೊಡಲಾಗುತ್ತಿದೆ. ಸೋಂಕಿತರಿಗೆ ಅಗತ್ಯವಿರುವ ಚಿಕಿತ್ಸೆ ನೀಡಿ ಅವರನ್ನು ಮೊದಲಿನಂತೆ ಗುಣಮುಖರನ್ನಾಗಿ ಮಾಡಬೇಕಾದ ಜವಾಬ್ದಾರಿ  ವೈದ್ಯರುಗಳದ್ದಾಗಿದೆ. ಈ ದಿಸೆಯಲ್ಲಿ ಸೋಂಕಿತರ ಸೇವೆ ಮಾಡಿ ಅವರ ಮನಸ್ಸನ್ನು ಗೆಲ್ಲುವಂತೆ ವೈದ್ಯರಿಗೆ ಸಲಹೆ ಮಾಡಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಸರ್ಕಾರೇತರ ಆಸ್ಪತ್ರೆಗಳಿಗಿಂತ ಸೋಂಕಿತರಿಗೆ ಉತ್ತಮ ಗುಣ ಮಟ್ಟದ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುತ್ತಿದೆ. ಸೋಂಕಿತರು ಸರ್ಕಾರೇತರ ಆಸ್ಪತ್ರೆಗಳಿಗೆ ಮುಖ ಮಾಡುತ್ತಿರುವುದು ವಿಪರ್ಯಾಸಯಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿನ ಮತ್ತು ಕೊರೊನಾ ಕಾಳಜಿ ಕೇಂದ್ರಗಳಲ್ಲಿರುವ ಉಚಿತ ವ್ಯವಸ್ಥೆಯನ್ನು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು. ಗೋಕಾಕ ಸರ್ಕಾರಿ ಆಸ್ಪತ್ರೆ, ಮಲ್ಲಾಪೂರ ಪಿಜಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಮೂಡಲಗಿಯ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಕೊರೊನಾ ಸೋಂಕಿತರಿಗೆ ಉಚಿತವಾಗಿ ಉತ್ತಮ ದರ್ಜೆಯ ಚಿಕಿತ್ಸೆ ನೀಡಲಾಗುತ್ತದೆ. ಹೆಚ್ಚಿನ ಸಂಖ್ಯೆಗಳಲ್ಲಿ ಕೊರೋನಾ ಪೀಡಿತರು ಕೊರೋನಾ ಕಾಳಜಿ ಕೇಂದ್ರಗಳಲ್ಲಿ ದಾಖಲು ಮಾಡಿಕೊಳ್ಳುವ ಸಮರ್ಪಕ ವ್ಯವಸ್ಥೆ ವೈದ್ಯರಿಂದ ನಡೆಯಬೇಕಿದೆ. ದುಬಾರಿ ವೆಚ್ಚದ ಸರ್ಕಾರೇತರ ಆಸ್ಪತ್ರೆಗಳಿಗಿಂತ ನಮ್ಮ ಸರ್ಕಾರಿ ಆಸ್ಪತ್ರೆಗಳಲ್ಲಿರುವ ಆರೈಕೆ ಕೇಂದ್ರಗಳಲ್ಲಿ ಎಲ್ಲ ವ್ಯವಸ್ಥೆಗಳನ್ನು ಒಳಗೊಂಡ ಚಿಕಿತ್ಸೆ ಉಚಿತವಾಗಿ ಸಿಗುತ್ತದೆ. ಇದರಿಂದ ಬಡ ರೋಗಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಸೋಂಕಿತರಿಗಾಗಿ ಮೂರು ಕಾಳಜಿ ಕೇಂದ್ರಗಳಲ್ಲಿ ಊಟೋಪಚಾರದ ವ್ಯವಸ್ಥೆ, ಡ್ರಾಯ್ ಫುಡ್ಸ್, ದುಬಾರಿ ವೆಚ್ಚದ ಇಂಜಕ್ಷನ್ ಜೊತೆಗೆ ಆಕ್ಸಿಜನ್ ಅಳವಡಿಸಲಾಗಿದೆ. ಈಗಾಗಲೇ ಗೋಕಾಕ ಕೊರೋನಾ ಕಾಳಜಿ ಕೇಂದ್ರದಲ್ಲಿ ೫ ವೆಂಟಿಲೇಟರ್ ಮತ್ತು ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಎರಡು ವೆಂಟಿಲೇಟರ್ ಅಳವಡಿಸಲುಕ್ರಮ ಕೈಗೊಳ್ಳಲಾಗಿದೆ. ಕೊರೋನಾ ಸೋಂಕಿತರು ಯಾವುದೇ ಭಯ ಪಡದೇ ನಮ್ಮ ಸರ್ಕಾರಿ ಆಸ್ಪತ್ರೆಗಳಲ್ಲಿರುವ ಕಾಳಜಿ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕೋರಿದ್ದಾರೆ.
ಗೋಕಾಕ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ, ಮೂಡಲಗಿ ತಹಶೀಲ್ದಾರ ದಿಲ್‌ಶಾದ ಮಹಾತ, ನಿವೃತ್ತ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ಆರ್.ಎಸ್.ಬೆಣಚಿನಮರಡಿ, ಗೋಕಾಕ ಸರ್ಕಾರಿ ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಡಾ: ರವೀಂದ್ರ ಅಂಟಿನ, ಮೂಡಲಗಿ ಬಿಇಓ ಅಜೀತ ಮನ್ನಿಕೇರಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ, ಉಭಯ ತಾಲೂಕುಗಳ ವೈದ್ಯಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Bottom Add3
Bottom Ad 2