Athani Takkennavar
Beereshwara13
GIT add4

ಕನ್ನಡ ಶಾಲೆಗೆ ಅನ್ಯಾಯ : ಲಿಂಗನಮಠ ಗ್ರಾಮಸ್ಥರಿಂದ ಪ್ರತಿಭಟನೆ

ಹಿರಿಯ ಅಧಿಕಾರಿಗಳು ಸಭೆ ನಡೆಸಿ ಚರ್ಚಿಸಿದ್ದಾರೆ. ಸಮಸ್ಯೆ ಪರಿಹಾರವಾಗುವ ವಿಶ್ವಾಸವಿದೆ ಎಂದ ಬಿಇಒ

KLE1099 Add

ಹಿರಿಯ ಅಧಿಕಾರಿಗಳು ಸಭೆ ನಡೆಸಿ ಚರ್ಚಿಸಿದ್ದಾರೆ. ಸಮಸ್ಯೆ ಪರಿಹಾರವಾಗುವ ವಿಶ್ವಾಸವಿದೆ ಎಂದ ಬಿಇಒ

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ತಾಲ್ಲೂಕಿನ ಲಿಂಗನಮಠ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಆವರಣದಲ್ಲಿ ಈ ಹಿಂದೆ ಸರ್ಕಾರದ ಆದೇಶದಂತೆ ಕೆಡವಿಹಾಕಿರುವ ಕೊಠಡಿಗಳನ್ನು ಮರುನಿರ್ಮಿಸಿಕೊಡುವಂತೆ ಆಗ್ರಹಿಸಿ ಗ್ರಾಮಸ್ಥರು ಗುರುವಾರ ಬೀದಿಗಿಳಿದು ಪ್ರತಿಭಟನೆ ನಡೆಸಿದರು.
ಉರ್ದು ಶಾಲೆ ಹೆಸರಲ್ಲಿ 3 ಕೊಠಡಿಗಳು ಮಂಜೂರಾಗಿದ್ದು, ಅವುಗಳ ಪೈಕಿ ಒಂದು ಕೊಠಡಿ ನಿರ್ಮಾಣಕ್ಕೆ ಶಾಸಕಿ ಅಂಜಲಿ ನಿಂಬಾಳಕರ್ ಈಚೆಗೆ ಪೂಜೆ ನೆರವೇರಿಸಿದರು. ಕನ್ನಡ ಶಾಲೆ ಹೆಸರಲ್ಲಿ ಯಾವುದೇ ಕೊಠಡಿ ಮಂಜೂರಾಗಿಲ್ಲ. ಹಾಗಾಗಿ ಗ್ರಾಮಸ್ಥರು ತೀವ್ರ ಆಸಮಾಧಾನಗೊಂಡಿದ್ದಾರೆ.
ಉರ್ದು ಶಾಲೆಯಲ್ಲಿ 30 ಮಕ್ಕಳಿದ್ದು, 2 ಕೊಠಡಿಗಳಿವೆ. ಕನ್ನಡ ಶಾಲೆಯಲ್ಲಿ 160 ಮಕ್ಕಳಿದ್ದು, 6 ಕೊಠಡಿಗಳಿವೆ. ಕನ್ನಡ ಶಾಲೆಗೆ ಕೊಠಡಿಗಳ ಕೊರತೆ ಇದೆ. ಉರ್ದು ಶಾಲೆಗೆ ಹೆಚ್ಚುವರಿ ಕೊಠಡಿ ಅಗತ್ಯವಿಲ್ಲ. ಹಾಗಾಗಿ ಕನ್ನಡ ಶಾಲೆಗೆ ಕೊಠಡಿ ನಿರ್ಮಾಣ ಮಾಡುವುದನ್ನು ಬಿಟ್ಟು ಉರ್ದು ಶಾಲೆಗೆ ಮಂಜೂರಾಗಿರುವುದು ಕನ್ನಡಕ್ಕೆ ಮಾಡಿದ ಅನ್ಯಾಯ ಎನ್ನನುವುದು ಗ್ರಾಮಸ್ಥರ ಆಕ್ರೋಶ.
ಮಂಜೂರಾಗಿರುವ ಎಲ್ಲ ಕೊಠಡಿಗಳನ್ನು ನಿರ್ಮಾಣ ಮಾಡಿ, ನಂತರ 2 ಕೊಠಡಿಗಳನ್ನು ಕನ್ನಡ ಶಾಲೆಗೆ ಹಸ್ತಾಂತರ ಮಾಡೋಣ ಎನ್ನುವ ಅಂಜಲಿ ನಿಂಬಾಳಕರ್ ಅವರ ಬಾಯಿ ಮಾತಿ ಆಶ್ವಾಸನೆಗೆ ಗ್ರಾಮಸ್ಥರ ಒಪ್ಪಲಿಲ್ಲ. ಕನ್ನಡ ಶಾಲೆಯ ಹೆಸರಲ್ಲೇ ಹೊಸ ಕೊಠಡಿ ನಿರ್ಮಾಣವಾಗಬೇಕೆನ್ನುವುದು ಅವರ ಬೇಡಿಕೆ.
ಪ್ರತಿಭಟನೆ ; ಧಾವಿಸಿದ ಬಿಇಒ:
ಗ್ರಾಮದ ಚನ್ನಬಸವೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಶಾಲೆಯ ಮುಂಭಾಗದಲ್ಲಿರುವ ಬೆಳಗಾವಿ -ತಾಳಗುಪ್ಪ ರಾಜ್ಯ ಹೆದ್ದಾರಿಯ ಮೇಲೆ ಕುಳಿತು ರಸ್ತೆ ತಡೆ ನಡೆಸಿದ ಗ್ರಾಮಸ್ಥರು ರಾಷ್ಟ್ರಪಿತ ಗಾಂಧಿ ಮತ್ತು ಕನ್ನಡಾಂಬೆಯ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಪ್ರತಿಭಟನೆ ಆರಂಭಿಸಿದರು.
ಪ್ರತಿಭಟನೆ ಸಂದರ್ಭದಲ್ಲಿ ಮಾತನಾಡಿದ ಗ್ರಾಮಸ್ಥರು “ಲಿಂಗನಮಠ ಗ್ರಾಮದಲ್ಲಿ ಸರ್ಕಾರಿ ಕನ್ನಡ ಮಾಧ್ಯಮ ಮತ್ತು ಉರ್ದು ಮಾಧ್ಯಮದ ಪ್ರಾಥಮಿಕ ಶಾಲೆಗಳು ಒಂದೇ ಆವರಣದಲ್ಲಿವೆ. ಇತ್ತೀಚೆಗೆ ಸರ್ಕಾರದ ಆದೇಶದನ್ವಯ ಎರಡೂ ಶಾಲೆಗಳ ಶಿಥಿಲಗೊಂಡ ಕೆಲ ಶಾಲಾ ಕೊಠಡಿಗಳನ್ನು ಒಂದೇ ಸಲ ಕೆಡವಿಹಾಕಲಾಗಿದೆ. ಬಳಿಕ ಕೋವಿಡ್ ಹಾಗೂ ಇತರೆ ಕಾರಣಗಳಿಂದ ಅನುದಾನ ಮಂಜೂರಾತಿಗೆ ವಿಳಂಬವಾಗಿದ್ದರಿಂದ ಎರಡೂ ಶಾಲೆಗಳಲ್ಲಿ ಕೊಠಡಿಗಳ ಸಮಸ್ಯೆಯಿದೆ. ಸರ್ಕಾರ ಇತ್ತೀಚೆಗೆ ಉರ್ದು ಶಾಲೆಯಲ್ಲಿ ಕೊಠಡಿಗಳ ನಿರ್ಮಾಣಕ್ಕೆ ಅನುದಾನ ನೀಡಿದೆ.
ಆದರೆ ಗ್ರಾಮದ ಕನ್ನಡ ಶಾಲೆಗೆ ಕೊಠಡಿಗಳನ್ನು ಮಂಜೂರು ಮಾಡುವಲ್ಲಿ ವಿಳಂಬಧೋರಣೆ ಅನುಸರಿಸಿದೆ. ಈ ವಿಷಯವಾಗಿ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಗುರುವಾರ ಗ್ರಾಮಸ್ಥರೆಲ್ಲರೂ ಬೀದಿಗಳಿದು ಸರ್ಕಾರದ ವಿರುದ್ಧ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳ ವಿರುದ್ಧ ಪ್ರತಿಭಟಿಸುತ್ತಿದ್ದೇವೆ” ಎಂದರು.
ಈ ಸಂದರ್ಭದಲ್ಲಿ ಬಸಲಿಂಗಪ್ಪ ಬಿಜಾಪುರ, ತವನಪ್ಪ ರಪಾಟಿ, ರುದ್ರಗೌಡ ಪಾಟೀಲ ಸೇರಿದಂತೆ ನಂದಗಡ ಠಾಣೆಯ ಪೊಲೀಸರು, ಗ್ರಾಮಸ್ಥರು, ವಿದ್ಯಾರ್ಥಿಗಳು ಇದ್ದರು.
ಪ್ರತಿಭಟನೆಯ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಶ್ವರಿ ಕುಡಚಿ ಅವರ ಮೂಲಕ ಡಿಡಿಪಿಐ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿ, ಆದಷ್ಟು ಬೇಗ ಲಿಂಗನಮಠ ಕನ್ನಡ ಶಾಲೆಗೆ ಹೆಚ್ಚುವರಿ ಕೊಠಡಿಗಳನ್ನು ಮಂಜೂರು ಮಾಡುವಂತೆ ಆಗ್ರಹಿಸಿದರು.
ಪ್ರತಿಭಟನೆಯ ಸಂದರ್ಭದಲ್ಲಿ ಕೆಲಕಾಲ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಿದ್ದರಿಂದ ಈ ಮಾರ್ಗವಾಗಿ ತೆರಳುವ ವಾಹನ ಸವಾರರು ಮತ್ತು ಪ್ರಯಾಣಿಕರು ತೊಂದರೆ ಅನುಭವಿಸಿದರು.
ಈ ಕುರಿತು ಪ್ರಗತಿವಾಹಿನಿಯೊಂದಿಗೆ ಮಾತನಾಡಿದ ಬಿಇಒ ರಾಜೇಶ್ವರಿ ಕುಡಚಿ, ಗ್ರಾಮಸ್ಥರ ಅಹವಾಲನ್ನು ಆಲಿಸಲಾಗಿದೆ. ಹಿರಿಯ ಅಧಿಕಾರಿಗಳ ಮೂಲಕ ಸರಕಾರದ ಗಮನಕ್ಕೂ ತರಲಾಗಿದೆ. ಶಿಕ್ಷಣ ಸಚಿವರೂ ಈ ಕುರಿತು ಫೋನ್ ಮಾಡಿ ವಿವರ ಕೇಳಿದ್ದಾರೆ. ಹಿರಿಯ ಅಧಿಕಾರಿಗಳು ಸಭೆ ನಡೆಸಿ ಚರ್ಚಿಸಿದ್ದಾರೆ. ಸಮಸ್ಯೆ ಪರಿಹಾರವಾಗುವ ವಿಶ್ವಾಸವಿದೆ ಎಂದು ತಿಳಿಸಿದರು.
 ಸಮಸ್ಯೆ ಮೇಲಧಿಕಾರಿಗಳು ಹಾಗೂ ಸರಕಾರದ ಗಮನಕ್ಕೆ ಬಂದಿದೆ. ಆದಷ್ಟು ಶೀಘ್ರ ಪರಿಹಾರವಾಗುವ ವಿಶ್ವಾಸವಿದೆ. ಗ್ರಾಮಸ್ಥರ ಅಹವಾಲನ್ನು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಈ ಬಗ್ಗೆ ಗಂಭೀರ ಚರ್ಚೆಯೂ ನಡೆದಿದೆ. ಶೀಗ್ರ ಪರಿಹಾರವಾಗಲಿದೆ
-ರಾಜೇಶ್ವರಿ ಕುಡಚಿ, ಬಿಇಒ

ಖಾನಾಪುರ ಬಿಇಒ ಆಗಿ ರಾಜೇಶ್ವರಿ ಕುಡಚಿ ಅಧಿಕಾರ ಸ್ವೀಕಾರ

ಖಾನಾಪುರ ಬಿಇಒ ಆಗಿ ರಾಜೇಶ್ವರಿ ಕುಡಚಿ ಅಧಿಕಾರ ಸ್ವೀಕಾರ

Nivedita Navalgund
You cannot copy content of this page