ಬೆಳಗಾವಿಯಲ್ಲಿ ನಾಳೆ ಕುರಿಗಳ ಸಭೆ

ಸುವರ್ಣ ವಿಧಾನಸೌಧದ ಮುಂದೆ 11.30ಕ್ಕೆ ಆರಂಭ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಗುರುವಾರ ಬೆಳಗಾವಿಯಲ್ಲಿ ಕುರಿಗಳ ಸಭೆ ನಡೆಯಲಿದೆ. ಬೆಳಗ್ಗೆ 11.30ಕ್ಕೆ ಇಲ್ಲಿಯ ಸುವರ್ಣ ವಿಧಾನಸೌಧದ ಮುಂದೆ ಸಭೆ ಆರಂಭವಾಗಲಿದೆ.

ಇದೇನು ಕುರಿಗಳ ಸಭೆ ಎಂದು ಆಶ್ಚರ್ಯವಾಯಿತೆ?

ಗುರುವಾರ ಬೆಂಗಳೂರಿನಲ್ಲಿ ವಿಧಾನಮಂಡಳದ ಅಧಿವೇಶನ ಆರಂಭವಾಗಲಿದೆ. ಪ್ರಸ್ತುತ ಬಿಜೆಪಿ ಸರಕಾರದ ಮೊದಲ ಅಧಿವೇಶನ ಇದು. ಪ್ರತಿ ವರ್ಷ ಚಳಿಗಾಲದ ಅಧಿವೇಶನವನ್ನು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಬೆಳಗಾವಿಯಲ್ಲಿ ಅಧಿವೇಶನ ನಡೆಸುವುದನ್ನು ಕೈಬಿಟ್ಟಿರುವ ಸರಕಾರ ಬೆಂಗಳೂರಿನಲ್ಲೇ ಅಧಿವೇಶನ ನಡೆಸಲು ಮುಂದಾಗಿದೆ.

ಬೆಳಗಾವಿ ಜಿಲ್ಲಾಧಿಕಾರಿ ಹೇಳಿಕೆಯನ್ನು ಆಧರಿಸಿ ಬೆಳಗಾವಿಯಲ್ಲಿ ಅಧಿವೇಶನ ನಡೆಸುವುದನ್ನು ಕೈಬಿಟ್ಟಿರುವುದಾಗಿ ಮುಖ್ಯಮಂತ್ರಿಗಳು ಹೇಳಿಕೆ ನೀಡಿದ್ದಾರೆ. ಜಿಲ್ಲೆಯ ಅಧಿಕಾರಿಗಳು ಪ್ರವಾಹ ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ. ಹಾಗಾಗಿ ಅಧಿವೇಶನದ ಸಿದ್ಧತೆ ಮಾಡುವುದು ಕಷ್ಟ ಎನ್ನುವುದು ಜಿಲ್ಲಾಧಿಕಾರಿ ಹೇಳಿಕೆ.

ಆದರೆ, ಪ್ರವಾಹ ಅಪ್ಪಳಿಸಿ ಭಾರಿ ಅನಾಹುತ ಉಂಟಾಗಿರುವುದರಿಂದ ಬೆಳಗಾವಿಯಲ್ಲೇ ಅಧಿವೇಶನ ನಡೆಸಬೇಕಿತ್ತು. ಆದರೆ ಪ್ರವಾಹ ಪರಿಹಾರ ಕಾರ್ಯವನ್ನು ಸರಿಯಾಗಿ ನಿಭಾಯಿಸದ್ದರಿಂದ ಜನರನ್ನು ಎದುರಿಸಲಾಗದೆ ಬೆಳಗಾವಿ ಅಧಿವೇಶನವನ್ನು ಸರಕಾರ ರದ್ಧು ಮಾಡಿದೆ ಎನ್ನುವುದು ವಿರೋಧ ಪಕ್ಷಗಳ ಆರೋಪ.

ವಿರೋಧ ಪಕ್ಷಗಳು ಕೇವಲ ಆರೋಪ ಮಾಡಿ ಸುಮ್ಮನೆ ಕುಳಿತುಕೊಂಡಿವೆ. ಬೆಳಗಾವಿಯಲ್ಲೇ ಅಧಿವೇಶನ ನಡೆಸಬೇಕೆಂದು ಯಾವೊಬ್ಬ ಜನಪ್ರತಿನಿಧಿಯೂ ಪಟ್ಟು ಹಿಡಿದಿಲ್ಲ.

ಇದನ್ನೆಲ್ಲ ವಿರೇಧಿಸಿ ಕನ್ನಡ ಚಳುವಳಿ ವಾಟಾಳ ಪಕ್ಷ ಪ್ರತಿಭಟನೆ ಹಮ್ಮಿಕೊಂಡಿದೆ. ಸದಾ ವಿಭಿನ್ನ ಪ್ರತಿಭಟನೆಗಳಿಂದಲೇ ಹೆಸರಾಗಿರುವ ವಾಟಾಳ ನಾಗರಾಜ ಅವರ ನೇತೃತ್ವದಲ್ಲಿ ಗುರುವಾರ ಸುವರ್ಣ ವಿಧಾನಸೌಧದ ಮುಂದೆ ಕುರಿಗಳ ಸಭೆ ನಡೆಯಲಿದೆ.

ಒಬ್ಬ ಜಿಲ್ಲಾಧಿಕಾರಿ ಮಾತು ಕೇಳಿ ಸರಕಾರ ವಿಧಾನಮಂಡಳದ ಅಧಿವೇಶನ ನಡೆಸುವುದು ನಾಚಿಕೆಗೇಡು. ಮುಖ್ಯಮಂತ್ರಿ, ಸರಕಾರ, ಶಾಸನ ಸಭೆಗಳಿಗಿಂತ ಜಿಲ್ಲಾಧಿಕಾರಿ ಹೆಚ್ಚೇ ಎನ್ನುವುದು ವಾಟಾಳ್ ಪ್ರಶ್ನೆ. ಬೆಳಗಾವಿಯಲ್ಲೇ ಅಧಿವೇಶನ ನಡೆಸಬೇಕಿತ್ತು. ಇದು ಉತ್ತರ ಕರ್ನಾಟಕಕ್ಕೆ ಮಾಡುತ್ತಿರುವ ಅನ್ಯಾಯ. ಎಂದು ಅವರು ಹೇಳಿದ್ದಾರೆ. ಅಲ್ಲದೆ ಈ ಬಗ್ಗೆ ಧ್ವನಿ ಎತ್ತಬೇಕಾಗಿದ್ದ ವಿರೋಧ ಪಕ್ಷಗಳೂ ಬಾಯಿ ಮುಚ್ಚಿಕೊಂಡು ಕುಳಿತಿವೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗುರುವಾರ ಬೆಳಗ್ಗೆ 11.30ಕ್ಕ ವಾಟಾಳ ನಾಗರಾಜ ಬೆಳಗಾವಿಯಲ್ಲಿ ಅಧಿವೇಶನ ನಡೆಸದ ಸರಕಾರದ ವಿರುದ್ಧ ಪ್ರತಿಭಟನಾರ್ಥವಾಗಿ ಕುರಿಗಳ ಸಭೆ ನಡೆಸಲಿದ್ದಾರೆ.