ವಾವ್ಹ್…. ಇಲ್ಲೊಂದು ಮಾದರಿ ಹಸಿರು ಶಾಲೆ ; ಮೊರಾರ್ಜಿ ದೇಸಾಯಿ ಶಾಲಾಂಗಳದಲ್ಲಿ ಹಸಿರೇ ಹಸಿರು  

ಕಲಿಕೆ ಎಂದರೆ ಹೀಗಿರಬೇಕು ಎನ್ನುವಂತಿದೆ ಇಲ್ಲಿನ ಮಕ್ಕಳ ಚಟುವಟಿಕೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – “ಹಸಿರೇ ಉಸಿರು” ಎನ್ನುವ ನಾಣ್ಣುಡಿಯಂತೆ ಪ್ರಕೃತಿಯ ಜೊತೆ ಸ್ನೇಹ ಬೆಳೆಸಿ, ಹಸಿರನ್ನು ಉಳಿಸಿ ಬೆಳೆಸುವುದನ್ನೇ ಹವ್ಯಾಸವನ್ನಾಗಿ ಮಾಡಿಕೊಂಡಿದ್ದಾರೆ ಬೆಳಗಾವಿ ಸಮೀಪದ ಮಂಡೋಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳು.

ನಿಜ ಅರ್ಥದಲ್ಲಿ ಮಾದರಿ ಶಾಲೆ ಎನ್ನುವಂತೆ ನಡೆಯುತ್ತಿದೆ ಇಲ್ಲಿಯ ಮಕ್ಕಳ ಚಟುವಟಿಕೆ.

 ಇಲ್ಲಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸುಮಾರು 6 ತಿಂಗಳ ಹಿಂದೆ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಒಟ್ಟು 259 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸ್ಥಳಾಂತರಗೊಂಡ 6 ತಿಂಗಳಲ್ಲೆ ಶಾಲೆಯ ಆವರಣದಲ್ಲಿ ವಿವಿಧ ಬಗೆಯ ಹೂವು -ತರಕಾರಿಗಳನ್ನು ಬೆಳೆಸಿ ಶಾಲೆಯು ಹಸಿರು ಮೈದುಂಬಿ ಕಂಗೊಳಿಸುತ್ತಿದೆ.

ಅನ್ನ ಬೆಳೆಯುವ ರೈತನ ಶ್ರಮ ಅರಿತಿರುವ ಮಕ್ಕಳು ಸ್ವಇಚ್ಛೆಯಿಂದ  ಪಠ್ಯೇತರ ಚಟುವಟಿಕೆ ಜೊತೆಗೆ ಶಾಲಾಂಗಳದಲ್ಲಿ ತಾಜಾ ಸೊಪ್ಪು, ತರಕಾರಿಗಳನ್ನು ಬೆಳಿಸಿ ಸೈ ಅನಿಸಿಕೊಂಡಿದ್ದಾರೆ.
ವಸತಿ ನಿಲಯದ ಸುತ್ತಮುತ್ತ ಸ್ವಚ್ಛ ಆವರಣದಲ್ಲಿ ಘಮಘಮಿಸುವ ಕೊತ್ತಂಬರಿ, ಮೆಂತೆ, ಪಾಲಕ್, ಸಬ್ಬಸಗಿ, ಪುಂಡಿಸೊಪ್ಪುಗಳನ್ನು ಬೆಳೆಸಿ ರುಚಿಕರವಾದ ಅಡುಗೆ ಮಾಡಲಾಗುತ್ತದೆ. ಅಲ್ಲದೆ ಟೋಮ್ಯಾಟೊ, ಬೀನ್ಸ್, ಬದನೆಕಾಯಿ, ಮೂಲಂಗಿ, ಮೆಣಸಿನಕಾಯಿ, ಅವರೆಕಾಯಿ, ಹಸಿರು ವಟಾಣಿ, ಸಿಹಿಗೆಣಸು, ಬೆಂಡೆಕಾಯಿ, ಗಜ್ಜರಿ, ಕುಂಬಳಕಾಯಿ, ಮೆಕ್ಕೆ ಜೋಳಗಳನ್ನು ಸಹ ಬೆಳೆಸಿ  ತರಕಾರಿ ತೋಟವನ್ನೇ ಸೃಷ್ಟಿಸಿದ್ದಾರೆ.

Nirani -Senitiser1

ಇವರ ಈ ಶ್ರಮಕ್ಕೆ ಹಾಸನದ “ಕಾರಂಜಿ ಟ್ರಸ್ಟ್”  ಬೀಜಗಳನ್ನು ಕಳಿಸಿ ಮಾರ್ಗದರ್ಶನ ನೀಡಿ, ಕೈ ಜೋಡಿಸಿರುವುದು ವಿಶೇಷತೆಯಾಗಿದೆ. ಬೆಳಿಗ್ಗೆ 5 ಘಂಟೆಯಿಂದ ಮಕ್ಕಳನ್ನು ಎಬ್ಬಿಸುವುದರ ಜೊತೆಗೆ ರಾತ್ರಿ 10 ಘಂಟೆಯವರೆಗೆ ಮಕ್ಕಳು ಮಲಗುವವರೆಗೂ, ಪ್ರಾಂಶುಪಾಲರು ಎಲ್ಲಾ ಭೋಧಕ, ಭೋದಕೇತರ ಸಿಬ್ಬಂದಿ ಹಗಲಿರುಳು ಶ್ರಮಿಸಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕಾರಣರಾಗಿದ್ದು, ಜನರಲ್ಲಿ ವಸತಿ ಶಾಲೆಗಳ ಬಗೆಗಿನ ಪ್ರೀತಿ ನಂಬಿಕೆಗಳನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರತಿವರ್ಷ ಎಸ್ಎಸ್ಎಲ್ ಸಿಯಲ್ಲಿ ಶೇಕಡಾ 100 ರಷ್ಟು ಫಲಿತಾಂಶ ನೀಡಿ ಹಲವಾರು ಪ್ರಶಸ್ತಿಗಳನ್ನು ಈ ಶಾಲೆ ಮುಡಿಗೇರಿಸಿಕೊಂಡಿದೆ. ಪಠ್ಯವಷ್ಟೇ ಅಲ್ಲದೆ, ವಿವಿಧ ಬಗೆಯ ಆಟಗಳಲ್ಲಿ ಸಹ ರಾಜ್ಯಮಟ್ಟದಲ್ಲಿ ಭಾಗವಹಿಸಿ ಹೆಸರುಗಳಿಸಿದ್ದಾರೆ. ವಿದ್ಯಾರ್ಥಿಗಳಿಗೆ ನೀಡಬೇಕಾಗಿದ್ದ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.

ಒಟ್ಟಿನಲ್ಲಿ ಎಲ್ಲಾ ರೀತಿಯ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ವಿದ್ಯಾರ್ಥಿಗಳು ಹಾಗೂ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಶಾಲೆಯು ಮಾದರಿ ಶಾಲೆಯಾಗಿ ಹೊರಹೊಮ್ಮಿದೆ.

ಹೆಸರಿಗೆ ಶಾಸಕರ ಮಾದರಿ ಶಾಲೆ ಮಾಡುವ ನಮ್ಮ ರಾಜಕಾರಣಿಗಳು, ಅಧಿಕಾರಿಗಳು ಇಂತಹ ಶಾಲೆಯನ್ನು ನೋಡಿ ಮಾದರಿ ಮಾಡಿಕೊಳ್ಳಬೇಕು.