Advertisement

ಚಂದದ ಹೂವು ಅರಳಿಸಿ, ಬದುಕನ್ನು ಆಸ್ವಾದಿಸಿ…

ಬದುಕು ನಂದನವನ. ಇಲ್ಲಿ ಎಲ್ಲವೂ ಇವೆ. ಹೂವು, ಮುಳ್ಳು, ಹಣ್ಣು, ಮಣ್ಣು , ಗಿಡ, ಕಸ, ಬೇಲಿ ಎಲ್ಲವೂ ಸಂಬಂಧಗಳೆ!

ಗೀತಾ ಹೆಗಡೆ 

 ಆಟೊದಲ್ಲಿ ಬಂದಿಳಿದ ಅರುಣಾ ಮನೆಯ ಗೇಟ್ ತೆಗೆದುಕೊಂಡೇ ಇದ್ದುದನ್ನು ಕಂಡು ಅವಸರದಲ್ಲಿ ಹೆಜ್ಜೆ ಇಟ್ಟಳು.
ಕಾಂಪೌಂಡ್ ಒಳಗೆ  ಇದ್ದ ಹೂವಿನ ಗಿಡಗಳನ್ನು ದನ, ಕರುಗಳು ತಿಂದು ನಾಶ ಮಾಡಿದ್ದಕ್ಕೆ ಸಾಕ್ಷಿಯಾಗಿ ಅವುಗಳ ಹೆಜ್ಜೆ ಗುರುತು, ಸೆಗಣಿ ಕಾಣಿಸಿತು.
ಮನೆ ಒಳಗಡೆ ಹೋದ ಆಕೆಗೆ  ಸ್ವಾಗತಿಸಿದ್ದು ಹಳೆಯ ನ್ಯೂಸ್ ಪೇಪರ್, ತೊಳೆಯದ ಬಟ್ಟೆಗಳ ರಾಶಿ.
ಗಾಳಿ ಬೆಳಕಿಗೆ  ಬಾಗಿಲು ಕಿಟಕಿ ತೆಗೆಯ ಹೋದವಳಿಗೆ ಶಾಕ್ ಕೊಟ್ಟಿದ್ದು ಬಾಲ್ಕನಿಯಲ್ಲಿ ನೀರಿಲ್ಲದೆ ಒಣಗಿದ ಪುಟ್ಟ ಹೂವಿನ ಗಿಡಗಳು!
ಅನಾರೋಗ್ಯದ ಅಮ್ಮನ ಕಾಳಜಿಗೆಂದು ಹದಿನೈದು ದಿನ ತವರಿಗೆ ಹೋದ ಅರುಣಾ ವಾಪಸ್ ಮನೆಗೆ ಬಂದಾಗ ತನ್ನ ಮನೆಯ ದೃಶ್ಯ ಕಂಡು ಮನಸ್ಸಲ್ಲೇ ಕುದಿಯತೊಡಗಿದಳು.
ಓಹ್ ! ಅದೆಷ್ಟು ಪ್ರೀತಿಯ ಗಿಡಗಳಿದ್ದವು. ಅದೆಷ್ಟು ಆಸೆಯಿಂದ ಅಪರೂಪದ ಗಿಡಗಳನ್ನು   ತಂದು ಬೆಳೆಸಿದ್ದೆ!
 ಮುರಿದ, ಒಣಗಿದ ಗಿಡಗಳಿಗೆ ನೀರು ಹಾಕುತ್ತಾ  ಅವುಗಳು ಹೂವು ಅರಳಿದಾಗಿನ ಅಂದ ನೆನಸಿಕೊಳ್ಳುತ್ತಾ ಗಿಡಗಳನ್ನು ಮುಟ್ಟಿ ನೋಡುತ್ತಿದ್ದಳು. ದುಃಖ, ಅಸಹನೆ, ಕೋಪ ಎಲ್ಲ ಭಾವ ಬೆರೆತು ಮನಸ್ಸು ಒದ್ದಾಡುತ್ತಿತ್ತು. ಯಾವ ಕೆಲಸಕ್ಕೂ ಮನಸ್ಸಿಲ್ಲದಾಯ್ತು. ಏನೋ ಒಂದು ಅಡುಗೆ ಮಾಡಿಟ್ಟು  ಗಂಡನನ್ನು ಕಾಯುತ್ತ ಕುಳಿತಳು.
ಒತ್ತಡದ ಸರ್ಕಾರಿ ಕೆಲಸ, ಜವಾಬ್ದಾರಿಗೆ ಹೈರಾಣಾದ ರಾಘವ ಮನೆಗೆ ಬರಲು ಊಟ ತಿಂಡಿಗೆ ಹೊತ್ತು ಗೊತ್ತಿಲ್ಲದ ಮನುಷ್ಯ. ಅಂದು ಹೆಂಡತಿ ಬರುವ ದಿನದ ನೆನಪಾಗಿ ಒಂದಿಷ್ಟು ಮನೆ ಅಗತ್ಯದ ಸಾಮಾನುಗಳ ಜೊತೆಗೆ ಆಕೆಯ ಇಷ್ಟದ ಹಣ್ಣು, ತರಕಾರಿಗಳ ಜೊತೆಗೆ  ಮನೆ ಒಳಗೆ ಅಡಿ ಇಟ್ಟ.
ಅದೆಂತ ಮರೆವು ನಿಮ್ಮದು ! ಗೇಟ್ ಹಾಕದೇ ಹೋದ್ರಾ ? ಗಿಡಕ್ಕೆ ನೀರು ಹಾಕಲು ಹೇಳಿದ್ದೆ ತಾನೆ!
ನೋಡಿ ಈಗ ಎಲ್ಲ  ಗಿಡ ಒಣಗಿದ ಕಡ್ಡಿಯಾಗಿದೆ. ಹೀಗಾ ಮನೆ ಬಗ್ಗೆ ಕಾಳಜಿ! ಅರುಣಾಳ ಕಣ್ಣಲ್ಲಿ ನೀರಿನೊಂದಿಗೆ ಮಾತಲ್ಲಿ ರೋಷವೂ ಸೇರಿತ್ತು.
ಅದೊಂದೇ ಕೆಲಸವಾ ನನಗೆ ! ನನಗ್ಯಾರು ಕಾಳಜಿ ಮಾಡಲಿಕ್ಕೆ ಇದ್ದಾರೆ!
ಅದೇನು ಮುಳುಗಿ ಹೋಗುವ ಆಸ್ತಿಯೇ?  ಬೇಕೆಂದೇ ಮಾಡಿದ್ದೀನಾ! ಎನೋ ಅವಸರದಲ್ಲಿ ಮರೆತು ಆಗಿದ್ದು.
ನೀರು ಹಾಕಿದ್ರಾಯ್ತು.. ಮತ್ತೆ ಚಿಗುರ್ತಾವೆ. ಮತ್ತೆ ತಂದು ನೆಟ್ಟರಾಯ್ತು. ಇದು, ರಾಘವನ ವಾದ.
ಇಬ್ಬರಲ್ಲೂ ಅಸಮಾಧಾನ.
ಇಬ್ಬರ ಇಷ್ಟ, ಕಷ್ಟಗಳು ಬೇರೆ ಬೇರೆ. ಮನುಷ್ಯರೇ ಹೀಗೆ ಅಲ್ಲವೇ ?
“ಇಷ್ಟಗಳು” ನಮ್ಮ ಆಯ್ಕೆ, ನಾವಂದು ಕೊಂಡಂತೆ ಬದಲಾಯಿಸಬಹುದು.
ಮನುಷ್ಯ ಹೀಗೆ ಇರಬೇಕು ಎಂದು ಅಂದು ಕೊಳ್ಳಬಹುದು , ಆದರೆ ಇನ್ನೊಬ್ಬರನ್ನು ಬದಲಾಯಿಸಲಾಗದು.
ಮಾರನೆಯ ದಿನ ದೇವರ ಪೂಜೆಗೆ ಕುಳಿತಾಗ ಹೂ ಬುಟ್ಟಿ ಖಾಲಿ ಇದ್ದಿದ್ದನ್ನು ಕಂಡ. ಬಾಗಿಲಿಗೆ ಹಾಗೂ  ಟೀಪಾಯ್ ಮೇಲೆ ಅಲಂಕಾರಕ್ಕೆ ಹೆಂಡತಿ  ಚಂದನೆ ಜೋಡಿಸಿಡುವ ಹೂಗಳು, ದಳಗಳು ಕಾಣದೆ ಅದೇನೋ  ಕೊರತೆ ಅನ್ನಿಸಿತು.
ಸಂಜೆ ಮನೆಯ ಬಳಿ ಬಂದು ನಿಂತ ರಾಘವ. ಹಿಂದೆಯೇ ಒಂದು ವಾಹನ.
ಅದರಿಂದ ಇಬ್ಬರು ಹುಡುಗರು ಬಗೆಬಗೆಯ ಹೂ ಗಿಡಗಳನ್ನು ಇಳಿಸುತ್ತಿದ್ದರು.
ಅವಳಿಷ್ಟದ ಬಣ್ಣ ಬಣ್ಣದ ಹೂಗಳ ಗಿಡ ಕಂಡ ಅರುಣಾ , ಓಹ್.. ಇದೆಷ್ಟು ಚಂದ, ಎಷ್ಟಾಯ್ತು!
ಎಲ್ಲಿಂದ ತಂದ್ರಿ !
ಮಗುವಂಥ ಅವಳ ಸಂಭ್ರಮ ಕಂಡ ರಾಘವ ಸಾರ್ಥಕವಾಯ್ತು ಎಂದು ಮನಸ್ಸಲ್ಲೆ ಅಂದುಕೊಂಡು ನಸುನಕ್ಕ.
ಎಷ್ಟಾದರೂ ಆಗಲಿ.‌. ನಿನಗಿಷ್ಟ ಆಯ್ತು ತಾನೆ?
ಹೋ.. ನಿಮಗೆ ತಿಂಡಿ, ಚಹಾ ಮಾಡಿಕೊಟ್ಟು ನಾನು ಅವುಗಳನ್ನು ಎಲ್ಲಿ ನೆಡುವುದು ಪ್ಲಾನ್ ಮಾಡುತ್ತೇನೆ.
ಸಂಬಂಧಗಳೂ ಸಹ ಗಿಡದಂತೆ. ಕಾಳಜಿ, ಪ್ರೀತಿ ಎಂಬ ನೀರು ಹಾಕಿ ಪೋಷಣೆ ಮಾಡಬೇಕು. ಯಾವುದೇ “ವಿಷಯದ” ಬೀಜಗಳನ್ನು ಮನದಲ್ಲಿ ಬಿತ್ತುವಾಗ ಯೋಚಿಸಬೇಕು. ಅವು “ವಿಷದ ಬೀಜ” ಆಗದಂತೆ ಕಾಳಜಿಬೇಕು.
ಬೇಡಾ, ನಾನೂ ಬರ್ತೇನೆ, ನಾಳೆ ರಜಾ ಅಲ್ವಾ! ಇಬ್ಬರೂ ಸೇರಿ ಪ್ಲಾನ್ ಮಾಡಿ ನೆಡೋಣ.
 ಸಹಬಾಳ್ವೆ, ಸಹಕಾರ ಇದ್ದಲ್ಲಿ ಸಂಸಾರದಲ್ಲಿ ಸಂತಸ. ಗಿಡ ಬೆಳೆದು ಹೂವು ಅರಳುತ್ತಲೇ ಇರುತ್ತವೆ.
ಪ್ರತಿಯೊಬ್ಬರ ಆಸೆ, ಆಕಾಂಕ್ಷೆ ಬದುಕುವ ರೀತಿ ಬೇರೆ. ನಮ್ಮ ಮನದಲ್ಲಿ ನಾವು ಯಾವುದಕ್ಕೆ ಹೆಚ್ಚಿನ ಜಾಗ ಕೊಡುತ್ತೇವೋ ಅದು ನಮ್ಮ”ನೆಚ್ಚಿನದು”
ಮನುಷ್ಯರ ಮನಸ್ಸನ್ನು ಒಮ್ಮೆ ಚಂದದ “ಗಾರ್ಡನ್” ಅಂದುಕೊಳ್ಳಿ.
ಈ ಸಂಬಂಧಗಳೂ ಸಹ ಗಿಡದಂತೆ. ಕಾಳಜಿ, ಪ್ರೀತಿ ಎಂಬ ನೀರು ಹಾಕಿ ಪೋಷಣೆ ಮಾಡಬೇಕು. ಯಾವುದೇ “ವಿಷಯದ” ಬೀಜಗಳನ್ನು ಮನದಲ್ಲಿ ಬಿತ್ತುವಾಗ ಯೋಚಿಸಬೇಕು. ಅವು “ವಿಷದ ಬೀಜ” ಆಗದಂತೆ ಕಾಳಜಿಬೇಕು.
ಮೊಳೆತ ಸಂಬಂಧ ಚಿಗುರಿದಾಗ ಹಾಳಾಗದಂತೆ ರಕ್ಷಿಸಬೇಕು. ಒಂದಿಷ್ಟು ಗಿಡಗಳು ಹೂ ಬಿಡುತ್ತವೆ . ಒಂದಷ್ಟು ಗಿಡ ಆಸರೆ ಆಗುತ್ತವೆ.
ಬದುಕು ನಂದನವನ. ಇಲ್ಲಿ ಎಲ್ಲವೂ ಇವೆ. ಹೂವು, ಮುಳ್ಳು, ಹಣ್ಣು, ಮಣ್ಣು , ಗಿಡ, ಕಸ, ಬೇಲಿ ಎಲ್ಲವೂ ಸಂಬಂಧಗಳೆ! ನಾವು ನಮಗಿಷ್ಟ ಬಂದ ಹಾಗೆ ವ(ಮ)ನದಲ್ಲಿ ಸಂಚರಿಸುವ ದಾರಿಯಲ್ಲಿ ಎಲ್ಲವೂ ಸಿಗುತ್ತವೆ. ತಾಳ್ಮೆಯ, ಪ್ರೀತಿಯ, ಬುದ್ಧಿಯ ಆಯುಧಗಳನ್ನು ಬಳಸಿ ವನ, ಮನವನ್ನ  ಹಸನಾಗಿಸಬೇಕಷ್ಟೆ. ಚಂದದ ಹೂ ಅರಳಿಸಿ ಬದುಕನ್ನು ಆಸ್ವಾದಿಸಬೇಕಷ್ಟೆ.