Kannada Rajyotsava – Home Add
Valmiki Jayanti Add

ತರಕಾರಿಯವನನ್ನು ಪ್ರೀತಿಸಿದ್ದಕ್ಕೆ ಮರ್ಯಾದಾ ಹತ್ಯೆ

ಪ್ರಕರಣವನ್ನು ಮುಚ್ಚಿ ಹಾಕಲು ಹೆಣೆದ ತಂತ್ರಗಳನ್ನೆಲ್ಲ ಭೇದಿಸಿ ವಾರದಲ್ಲೇ ಪೊಲೀಸರು ಇಡೀ ಪ್ರಕರಣ ಬಯಲಿಗೆಳೆದಿದ್ದಾರೆ.

ಪ್ರಗತಿವಾಹಿನಿ ಸುದ್ದಿ, ರಾಮನಗರ – ತರಕಾರಿ ಮಾರುವವನನ್ನು ಪ್ರೀತಿಸಿದ್ದಾಳೆನ್ನುವ ಕಾರಣಕ್ಕೆ ತಂದೆ ಹಾಗೂ ಸಹೋದರ ಸೇರಿ ಯುವತಿಯನ್ನು ಕೊಂದು ಹಾಕಿದ್ದಾರೆ.

ಪ್ರಕರಣವನ್ನು ಮುಚ್ಚಿ ಹಾಕಲು ಹೆಣೆದ ತಂತ್ರಗಳನ್ನೆಲ್ಲ ಭೇದಿಸಿ ವಾರದಲ್ಲೇ ಪೊಲೀಸರು ಇಡೀ ಪ್ರಕರಣ ಬಯಲಿಗೆಳೆದಿದ್ದಾರೆ.

ಮಾಗಡಿ ತಾಲೂಕಿನ ಬೆಟ್ಟಳ್ಳಿ ಎನ್ನುವಲ್ಲಿ ಈ ಘಟನೆ ನಡೆದಿದೆ. 19 ವರ್ಷದ ಹೇಮಲತಾ ಎನ್ನುವ ಯುವತಿ ಹತ್ಯೆಗೀಡಾದವಳು. ಆಕೆ ಅನ್ಯ ಜಾತಿಯ, ತರಕಾರಿ ಮಾರುವ ಯುವಕನನ್ನು ಪ್ರೀತಿಸುತ್ತಿದ್ದಳು. ಆತನ ಸಹವಾಸ ಬಿಡುವಂತೆ ಹಲವು ಬಾರಿ ಬುದ್ದಿ ಹೇಳಿದರೂ ಕೇಳದ್ದರಿಂದ ಭೀಕರವಾಗಿ ಕೊಲೆ ಮಾಡಿ ಮುಚ್ಚಿ ಹಾಕಲು ಪ್ರಯತ್ನಿಸಲಾಗಿತ್ತು.

ಯುವತಿಯನ್ನು ಹೊಡೆದು ಕೊಂದು, ಅಡಿಕೆ ಸಸಿ ನೆಡುವ ಹೊಂಡದಲ್ಲಿ ಹೂಳಲಾಗಿತ್ತು. ನಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿ, ಯುವತಿಯ ಮೇಲೆ ಗ್ಯಾಂಗ್ ರೇಪ್ ನಡೆಸಿ ಕೊಲೆ ಮಾಡಲಾಗಿದೆ ಎನ್ನುವ ವದಂತಿಯನ್ನು ಹಬ್ಬಿಸಲಾಗಿತ್ತು. ಆಕೆ ಪ್ರೀತಿಸುತ್ತಿದ್ದ ಯುವಕನ ವಿರುದ್ಧವೇ ಸಂಶಯ ವ್ಯಕ್ತಪಡಿಸಿ ದೂರು ನೀಡಲಾಗಿತ್ತು.

ಯುವತಿಯ ಚಪ್ಪಲಿ ಹೊಲದಲ್ಲಿ ಸಿಕ್ಕಿದೆ, ಅಲ್ಲೇ ಎಲ್ಲೋ ಮರ್ಡರ್ ಮಾಡಲಾಗಿದೆ. ನಮಗೆ ನ್ಯಾಯ ಕೊಡಿಸಿ ಎಂದೂ ತಂದೆ ಪೊಲೀಸರಲ್ಲಿ ಅಳಲು ತೋಡಿಕೊಂಡಿದ್ದ. ಈ ಬಗ್ಗೆ ಗ್ರಾಮದಲ್ಲಿ ಪ್ರತಿಭಟನೆ ನಡೆದು, ಯುವತಿಯ ಕುಟುಂಬಕ್ಕೆ ನ್ಯಾಯ ಕೊಡಿಸುವಂತೆ ಆಗ್ರಹಿಸಲಾಗಿತ್ತು.

ಮಾಗಡಿ ಪೊಲೀಸರು ತೀವ್ರ ತನಿಖೆ ನಡೆಸಿ, ಇದು ಮರ್ಯಾದಾ ಹತ್ಯೆ ಎನ್ನುವುದನ್ನು ಪತ್ತೆ ಮಾಡಿ ತಂದೆ ಕೃಷ್ಣಪ್ಪ ಮತ್ತು ಸಹೋದರ ಚೇತನ್ ಎನ್ನುವವನನ್ನು ಬಂಧಿಸಿದ್ದಾರೆ.

ಇದೊಂದು ಸಾಮೂಹಿಕ ಅತ್ಯಾಚಾರ, ಕೊಲೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹಬ್ಬಿಸ್, ಪೊಲೀಸರ ಸಾಮರ್ಥ್ಯವನ್ನೇ ಪ್ರಶ್ನಿಸುವ ರೀತಿಯಲ್ಲಿ ಪೋಸ್ಟ್ ಮಾಡಿದ್ದವರ ವಿರುದ್ಧವೂ ಪ್ರಕರಣ ದಾಖಲಿಸಲು ಪೊಲೀಸರು ನಿರ್ಧರಿಸಿದ್ದಾರೆ.