ಪರಮೇಶ್ವರ ವಿರುದ್ಧ ಇಡಿಯಿಂದಲೂ ತನಿಖೆ

ಜಾರಿ ನಿರ್ದೇಶನಾಲಯಕ್ಕೆ ವರದಿ ನೀಡಿರುವ ಆದಾಯ ತೆರಿಗೆ ಇಲಾಖೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರ ಮನೆ ಮತ್ತು ಸಂಸ್ಥೆಗಳ ಮೇಲಿನ ಆದಾಯ ತೆರಿಗೆ ಇಲಾಖೆ ತನಿಖೆ ಮುಂದುವರಿದಿದೆ. ಗುರುವಾರ ಬೆಳಗ್ಗೆಯೇ ಆರಂಭಗೊಡಿರುವ ವಿಚಾರಣೆ ಇನ್ನೂ ಕೆಲವು ತಿಂಗಳ ಕಾಲ ಮುಂದುವರಿಯುವ ಸಾಧ್ಯತೆ ಇದೆ.

ಬೆಂಗಳೂರಿನ ಸದಾಶಿವನಗರದಲ್ಲಿರುವ ಅವರ ಮನೆಯಲ್ಲಿ ಸಧ್ಯಕ್ಕೆ ತನಿಖೆ ಮುಕ್ತಾಯವಾಗಿದ್ದರೂ ತುಮಕೂರಿನ ನಿವಾಸ ಮತ್ತು ಶಿಕ್ಷಣ ಸಂಸ್ಥೆಗಳ ತನಿಖೆ ಮುಂದುವರಿದಿದೆ. ಮಂಗಳವಾರ ವಿಚಾರಣೆಗೆ ಬರುವಂತೆ ಪರಮೇಶ್ವರ್ ಗೆ ನೊಟೀಸ್ ನೀಡಲಾಗಿದೆ. ಅವರಿಗೆ ಸಂಬಂಧಿಸಿದ ಸಿದ್ಧಾರ್ಥ ಮೆಡಿಕಲ್ ಕಾಲೇಜಿನಲ್ಲಿ ಸೀಟ್ ಬ್ಲಾಕ್ ಮಾಡಿ ಕೋಟಿ ಕೋಟಿ ಹಣ ವಸೂಲಿ ಮಾಡಲಾಗಿದೆ ಎನ್ನುವ ಪ್ರಮುಖ ವಿಷಯಈಗ ತನಿಖೆಯ ಆಳವನ್ನು ಇನ್ನಷ್ಟು ಹೆಚ್ಚಿಸಿದೆ.

ಸರಕಾರಿ ಸೀಟ್ ಗೆ 6-8 ಲಕ್ಷ ರೂ. ಫೀ ಬಂದರೆ ಸೀಟ್ ಬ್ಲಾಕ್ ಮಾಡಿದರೆ 60-80 ಲಕ್ಷ ರೂ. ಗಳಿಸಬಹುದು. ಹಾಗಾಗಿ ಸೀಟ್ ಮಾಡಿ ಮ್ಯಾನೇಜ್ ಮೆಂಟ್ ಮೂಲಕ ಸೀಟ್ ಮಾರಾಟ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಆ ಬಗ್ಗೆ ತನಿಖೆ ನಡೆಯುತ್ತಿದೆ. ಇದರಿಂದಾಗಿಯೇ ಗಳಿಸಿದ ಹಣ ಮತ್ತು ಆಸ್ತಿ ನೂರಾರು ಕೋಟಿ ರೂ. ಇದೆ ಎನ್ನಲಾಗುತ್ತಿದೆ.

ಉತ್ತರ ಭಾರತದ ಕೆಲವು ವಿದ್ಯಾರ್ಥಿಗಳೇ ಈ ಬಗ್ಗೆ ತಮಗೆ ದೂರು ನೀಡಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ಪರಮೇಶ್ವರ ಅವರಿಗೆ ತಿಳಿಸಿದೆ. ಈ ವ್ಯವಹಾರ ಕಳೆದ ಹಲವಾರು ವರ್ಷಗಳಿಂದ ನಡೆದಿರುವ ಸಾಧ್ಯತೆ ಇದ್ದು, ತನಿಖೆ ಇನ್ನಷ್ಟು ಆಳಕ್ಕೆ ಹೋಗಬಹುದು.

ಇಡಿಗೆ ವರದಿ ನೀಡಿದ ಐಟಿ

ಆದಾಯ ತೆರಿಗೆ ಇಲಾಖೆ ಕಳೆದ 48 ಗಂಟೆಗಳಿಗಿಂತಲೂ ಹೆಚ್ಚಿನ ಸಮಯದಿಂದ ತನಿಖೆ ಮುಂದುವರಿಸಿದೆ. ಜೊತೆಗೆ ಅಕ್ರಮ ಆದಾಯ ಗಳಿಕೆ ಮತ್ತು ಹವಾಲಾ ಹಣದ ಶಂಕೆ ಇರುವುದರಿಂದ ಈ ಬಗ್ಗೆ ತನಿಖೆ ನಡೆಸುವಂತೆ ಆದಾಯ ತೆರಿಗೆ ಇಲಾಖೆ ಜಾರಿ ನಿರ್ದೇಶನಾಲಯಕ್ಕೆ ವರದಿ ನೀಡಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಜಾರಿ ನಿರ್ದೇಶನಾಲಯವೂ ತನಿಖೆ ಆರಂಭಿಸುವ ಸಾಧ್ಯತೆ ಇದೆ.

ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿದರೆ ಪರಮೇಶ್ವರ್ ಗೆ ಕೂಡ ಜೈಲಿನ ಭೀತಿ ಎದುರಾಗಿದೆ. 2-3 ದಿನ ವಿಚಾರಣ ನಡೆಸಿ ನಂತರ ತನ್ನ ವಶಕ್ಕೆ ತೆಗೆದುಕೊಳ್ಳಬಹುದು. ಆಗ ಡಿ.ಕೆ.ಶಿವಕುಮಾರ ಅವರಂತೆ ಪರಮೇಶ್ವರ ಕೂಡ ಜೈಲು ಸೇರಬೇಕಾಗಬಹುದು.

ಪರಮೇಶ್ವರ ತಮ್ಮದು ಯಾವುದೇ ಬಿಸಿನೆಸ್ ಇಲ್ಲ ಎಂದರೂ ಹೊಟೆೆಲ್ ಸೇರಿದಂತೆ ವಿವಿಧೆಡೆ ಹಣ ಹೂಡಿರುವ ಅಂಶವೂ ಬಯಲಾಗಿದೆ. ಈ ಎಲ್ಲ ತನಿಖೆ ಪೂರ್ಣಗೊಳ್ಳಲು ಇನ್ನೂ ಕೆಲವು ತಿಂಗಳ ಕಾಲ ಬೇಕಾಗಬಹುದು.

 

ಶಿಕ್ಷಣ ಸಂಸ್ಥೆಯ ವ್ಯವಹಾರವನ್ನು ನನ್ನ ಅಣ್ಣ ನೋಡಿಕೊಳ್ಳುತ್ತಿದ್ದರು. ಅವರು ನಿಧನರಾದ ನಂತರ ಕಳೆದ 6-8 ತಿಂಗಳಿನಿಂದಷ್ಟೆ ನಾನು ನೋಡಿಕೊಳ್ಳುತ್ತಿದ್ದೇನೆ. ಹಾಗಾಗಿ ಆ ಬಗ್ಗೆ ಅಷ್ಟೊಂದು ವಿವರ ಗೊತ್ತಿಲ್ಲ. ಆದಾಯ ತೆರಿಗೆ ಇಲಾಖೆ ವಿಚಾರಣೆಗೆ ಬರಲು ಹೇಳಿದೆ. ಹೋಗಿ ಎಲ್ಲ ವಿವರ ಕೊಡುತ್ತೇನೆ

-ಡಾ.ಜಿ.ಪರಮೇಶ್ವರ