ಒಂದೇ ಬಾರಿಗೆ 48 ಸಾವಿರ ನೌಕರರ ವಜಾ

ಹಬ್ಬದ ವೇಳೆ ಭಾರೀ ಶಾಕ್

ಪ್ರಗತಿವಾಹಿನಿ ಸುದ್ದಿ, ಹೈದರಾಬಾದ್ -ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ರಾಜ್ಯದ ಸಾರಿಗೆ ಸಂಸ್ಥೆಯ ನೌಕರರಿಗೆ ಹಬ್ಬದ ವೇಳೆ ಭಾರಿ ಶಾಕ್ ನೀಡಿದ್ದಾರೆ. ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಮುಷ್ಕರ ನಡೆಸುತ್ತಿದ್ದ 48 ಸಾವಿರ ನೌಕರರನ್ನು ಏಕಕಾಲಕ್ಕೆ ಕೆಲಸದಿಂದ ವಜಾ ಮಾಡಿದ್ದಾರೆ.

ವಿವಿಧ 26 ಬೇಡಿಕೆಗಳನ್ನು ಮುಂದಿಟ್ಟು ತೆಲಗಾಣ ಸಾರಿಗೆ ಸಂಸ್ಥೆಯ 249 ಸಾವಿರ ನೌಕರರು ಶುಕ್ರವಾರ ಸಂಜೆಯಿಂದ ಮುಷ್ಕರ ಆರಂಭಿಸಿದ್ದರು. ಆದರೆ ಹಬ್ಬದ ವೇಳೆ ಜನ ಸಂಚಾರ ಹೆಚ್ಚಾಗಿರುವುದರಿಂದ ಮುಷ್ಕರ ಕೈಬಿಟ್ಟು ಕೆಲಸಕ್ಕೆ ಹಾಜರಾಗುವಂತೆ ಸರಕಾರ ಸೂಚಿಸಿತ್ತು. ಶನಿವಾರ ಸಂಜೆಯೊಳಗೆ ಕೆಲಸಕ್ಕೆ ಹಾಜರಾಗದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಕೆ ನೀಡಲಾಗಿತ್ತು.

ಆದರೆ ಕೇವಲ 1,200 ನೌಕರರು ಮಾತ್ರ ಕೆಲಸಕ್ಕೆ ಹಾಜರಾಕಿದ್ದರು. ಇದರಿಂದ ಕೆರಳಿದ ಮುಖ್ಯಮಂತ್ರಿ, ಹಿರಿಯ ಅಧಿಕಾರಿಗಳ ತುರ್ತು ಸಭೆ ಕರೆದು ಮುಷ್ಕರದಲ್ಲಿರುವ ಎಲ್ಲ 48 ಸಾವಿರ ನೌಕರರನ್ನೂ ವಜಾ ಮಾಡಲು ಆದೇಶಿಸಿದರು. ಅಷ್ಟೇ ಅಲ್ಲ, ಈ ಸಂಬಂಧ ಮುಷ್ಕರ ನಿರತರೊಂದಿಗೆ ಯಾವುದೇ ಮಾತುಕತೆ ನಡೆಸುವುದಿಲ್ಲ ಎಂದೂ ಘೋಷಿಸಿದ್ದಾರೆ.

ಸಾರಿಗೆ ಸಂಸ್ಥೆಗೆ ಬೇಕಾಗುವ ನೌಕರರನ್ನು ಹೊಸದಾಗಿ ನೇಮಕ ಮಾಡಿಕೊಳ್ಳಲಾಗುವುದು. ಅವರಿಂದ ಯಾವುದೇ ಯೂನಿಯನ್ ಜೊತೆ ಸೇರುವುದಿಲ್ಲ ಎನ್ನುವ ಮುಚ್ಛಳಿಕೆ ಬರೆಸಿಕೊಳ್ಳಲಾಗುವುದು ಎಂದಿದ್ದಾರೆ.

48 ಸಾವಿರ ನೌಕರರನ್ನು ಏಕಕಾಲಕ್ಕೆ ಕೆಲಸದಿಂದ ವಜಾ ಮಾಡಿರುವುದರಿಂದ ತೆಲಂಗಣದಲ್ಲಿ ದೊಡ್ಡ ಶಾಕ್ ಉಂಟಾಗಿದೆ. ನೌಕರರು ಸರಕಾರದಿಂದ ಇಂತಹ ಕ್ರಮವನ್ನು ನಿರೀಕ್ಷಿಸಿರಲಿಲ್ಲ. ನೌಕರರ ಮುಷ್ಕರಕ್ಕೆ ಪೊಲೀಸರು ಅವಕಾಶ ನಿರಾಕರಿಸಿದ್ದಾರೆ. ಅಲ್ಲೀಗ ಖಾಸಗಿ ಹಾಗೂ ಹೊರ ರಾಜ್ಯಗಳ ಬಸ್ ಗಳದ್ದೇ ದರ್ಭಾರ್ ನಡೆಯುತ್ತಿದೆ. ಅವುಗಳಿಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.