ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಕಚೇರಿಗೆ ಗಣ್ಯರ ಭೇಟಿ, ಶುಭ ಕೋರಿಕೆ

ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಕೇಂದ್ರ  ರೇಲ್ವೆ ಖಾತೆ ರಾಜ್ಯ ಸಚಿವರಾದ ಸುರೇಶ್ ಅಂಗಡಿ ಮತ್ತಿತರರ ಭೇಟಿ

Vishwanath Patil Add
 ಪ್ರಗತಿವಾಹಿನಿ ಸುದ್ದಿ, ಬೆಂಗಳೂರು :   ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ನಿಗಮದ ಅಧ್ಯಕ್ಷರ ಕಚೇರಿಗೆ ಇವತ್ತು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ  ಕೇಂದ್ರ  ರೇಲ್ವೆ ಖಾತೆ ರಾಜ್ಯ ಸಚಿವರಾದ ಸುರೇಶ್ ಅಂಗಡಿ ಅವರು ಭೇಟಿ ನೀಡಿ ಅಲ್ಪಸಂಖ್ಯಾತರ ನಿಗಮದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬೆಳಗಾವಿಯ ಮುಕ್ತಾರ್ ಹುಸೇನ್ ಪಠಾಣ್ ಅವರಿಗೆ ಶುಭ ಕೋರಿದರು.
  ಈ ಸಂದರ್ಭದಲ್ಲಿ ಮಾತನಾಡಿದ ಸುರೇಶ್ ಅಂಗಡಿ, ಮುಕ್ತಾರ ಹುಸೇನ್ ಪಠಾಣ್ ಅವರು ಎಲ್ಲಾ ಸಮುದಾಯದ ಜೊತೆ ಅವಿನಾಭಾವ ಸಂಬಂಧವನ್ನು  ಇಟ್ಟುಕೊಂಡು ಮುಂದೆ ಸಾಗಿದವರು.  ಬಿಜೆಪಿ ಸರ್ಕಾರ ಮುಸ್ಲಿಂ ವಿರೋಧಿ ಸರ್ಕಾರ ಎಂದು ಅನಗತ್ಯವಾಗಿ ಬಿಂಬಿಸಲಾಗುತ್ತಿದೆ.  ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾದಾಗಿನಿಂದಲೂ ಅಲ್ಪಸಂಖ್ಯಾತರಿಗೆ ಬೆಂಬಲವಾಗಿ ನಿಂತಿದ್ದಾರೆ. ಅಷ್ಟೇ ಅಲ್ಲದೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಅಲ್ಪಸಂಖ್ಯಾತರಿಗೆ ವಿಶೇಷ ಸ್ಥಾನಮಾನವನ್ನು ನೀಡುತ್ತಿದ್ದಾರೆ. ಇದಕ್ಕೆ ಉದಾಹರಣೆ ಮುಕ್ತಾರ ಪಠಾಣ್ ಅವರು ಎಂದರು.
ಹುಕ್ಕೇರಿ ಹಿರೇಮಠದ  ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರು ಮಾತನಾಡಿ, ಅಲ್ಪಸಂಖ್ಯಾತರ ನಿಗಮದ ಅಧ್ಯಕ್ಷ ಸ್ಥಾನ ಎಂದರೆ ಅದು ಬಹಳ ದೊಡ್ಡ ಜವಾಬ್ದಾರಿ ಸ್ಥಾನ. ಮುಸ್ಲಿಂ, ಸಿಖ್, ಜೈನ್, ಬೌದ್ಧ,  ಅಲ್ಪಸಂಖ್ಯಾತರಿಗೂ ಕೂಡ ಈ ನಿಗಮ ನ್ಯಾಯವನ್ನು ಒದಗಿಸುವ ಕಾರ್ಯವನ್ನು ಮಾಡುತ್ತಿದೆ. ಇಂತಹ ಒಂದು ದೊಡ್ಡ ಜವಾಬ್ದಾರಿಯನ್ನು ಮುಕ್ತಾರ್ ಪಠಾಣ್ ಅವರು ವಹಿಸಿಕೊಂಡಿದ್ದಾರೆ.  ಅಧಿಕಾರವನ್ನು ಸಮಾಜಮುಖಿಯಾಗಿ ಮಾಡುತ್ತ ಎಲ್ಲರಿಗೂ ಸಹಾಯ ಹಸ್ತವನ್ನು ಚಾಚಲಿ ಎಂದು ಆಶೀರ್ವದಿಸಿದರು.
 ಈ ಸಂದರ್ಭದಲ್ಲಿ ಮಾತನಾಡಿದ ಮುಕ್ತಾರ್ ಹುಸೇನ್ ಪಠಾಣ್ ಅವರು, ನಾನು ಸಮಾಜದ ಎಲ್ಲಾ ಸಮುದಾಯದ ಋಣದಲ್ಲಿ ಇದ್ದೇನೆ. ಖಂಡಿತವಾಗಿಯೂ ಉತ್ತಮ ಕಾರ್ಯವನ್ನು ನಿರ್ವಹಿಸುವುದರೊಂದಿಗೆ  ಎಲ್ಲರಿಗೂ ಕೀರ್ತಿಯನ್ನು ತರುವ  ಕೆಲಸವನ್ನು ಮಾಡುತ್ತೇನೆ ಎಂದರು. ಬೆಳಗಾವಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಮಾಜಿ ಶಾಸಕ ಡಾ. ವಿಶ್ವನಾಥ್ ಪಾಟೀಲ್,  ಬೆಳಗಾವಿ ನಗರದ ಬಿಜೆಪಿ ಅಧ್ಯಕ್ಷ ರಾಜೇಂದ್ರ ಹರಕುಣಿ, ವೀರಶೈವ ಲಿಂಗಾಯತ ಸಂಘಟನೆ ಅಧ್ಯಕ್ಷ ಪ್ರದೀಪ ಕಂಕಣವಾಡಿ ಮತ್ತು ಅಲ್ಪಸಂಖ್ಯಾತರ ನಿಗಮದ ರಾಜ್ಯದ ಎಲ್ಲಾ ಅಧಿಕಾರಿಗಳು, ವ್ಯವಸ್ಥಾಪಕರು ಇನ್ನೂ ಅನೇಕರು ಉಪಸ್ಥಿತರಿದ್ದರು.
Jolle Add