Advertisement -Home Add

ಡಿಸಿಸಿ ಬ್ಯಾಂಕ್: ಎಲ್ಲ ಕ್ಷೇತ್ರಗಳಿಗೆ ಅವಿರೋಧ ಆಯ್ಕೆ ಮಾಡುತ್ತೇವೆ

ಜಂಟಿ ಪತ್ರಿಕಾಗೋಷ್ಠಿಯಲ್ಲಿ ಘೋಷಣೆ

ಜಂಟಿ ಪತ್ರಿಕಾಗೋಷ್ಠಿಯಲ್ಲಿ ಘೋಷಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಜಿಲ್ಲೆಯ ಹಿತದೃಷ್ಟಿಯಿಂದ, ಬ್ಯಾಂಕಿನ ಹಿತದೃಷ್ಟಿಯಿಂದ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯ ಎಲ್ಲ ಸ್ಥಾನಗಳಿಗೆ  ಅವಿರೋಧ ಆಯ್ಕೆ ಮಾಡಲು ಪ್ರಯತ್ನಿಸುವುದಾಗಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಮಾಜಿ ಸಚಿವ ಉಮೇಶ ಕತ್ತಿ, ಸಂಸದ ಅಣ್ಣಾಸಾಹೇಬ ಜೊಲ್ಲೆ, ವಿಧಾನಸಭೆ ಉಪಾಧ್ಯಕ್ಷ ಆನಂದ ಮಾಮನಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಸಚಿವೆ ಶಶಿಕಲಾ ಜೊಲ್ಲೆ ಅವರೊಂದಿಗೆ ಪತ್ರಿಕಾಗೋಷ್ಠಿ ನಡೆಸಿದ ಅವರು, ನಾವೆಲ್ಲ ಒಂದಾಗಿದ್ದೇವೆ. ನಮ್ಮಲ್ಲಿ ಎರಡು ಬಣ ಎನ್ನುವುದಿಲ್ಲ. ನಮ್ಮಲ್ಲಿರುವ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನೆಲ್ಲ ಬದಿಗಿಟ್ಟು, ವರಿಷ್ಠರ ನಿರ್ದೇಶನದ ಮೇರೆಗೆ ಎಲ್ಲರೂ ಸೇರಿ ಅವಿರೋಧ ಆಯ್ಕೆ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದು ತಿಳಿಸಿದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟಿಲು ಸೇರಿದಂತೆ ನಾಯಕರ ಸೂಚನೆಯ ಮೇರೆಗೆ ಬ್ಯಾಂಕ್ ಇತಿಹಾಸದಲ್ಲೇ ಮೊದಲ ಬಾರಿಗೆ ಅವಿರೋಧ ಆಯ್ಕೆ ಮಾಡಲಾಗುವುದು ಎಂದರು.

ಮುಂದಿನ ದಿನಗಳಲ್ಲೂ ನಾವೆಲ್ಲರೂ ಒಂದಾಗಿ ಹೋಗುತ್ತೇವೆ ಎಂದು ಅವರು ಹೇಳಿದರು.

7 ಕ್ಷೇತ್ರದಲ್ಲಿ ಅವಿರೋಧ ಆಯ್ಕೆಯಾಗಿದೆ. ಖಾನಾಪುರ, ರಾಮದುರ್ಗ, ಬೈಲಹೊಂಗಲ ಕ್ಷೇತ್ರದಲ್ಲಿ 2 -3 ನಾಮಪತ್ರ ಸಲ್ಲಿಕೆಯಾಗಿವೆ ಅಲ್ಲೂ ಅವಿರೋಧ ಆಯ್ಕೆಗೆ ಪ್ರಯತ್ನಿಸಲಾಗುವುದು ಎಂದು ಅವರು ತಿಳಿಸಿದರು.

ಅತಿವೃಷ್ಠಿ, ಕೊರೋನಾಗಳಿಂದಾಗಿ ಜಿಲ್ಲೆಯಲ್ಲಿ ಅಭಿವೃದ್ಧಿಯಲ್ಲಿ ಹಿಂದುಳಿದಿರುವುದು ನಿಜ. ಮುಂದಿನ ದಿನಗಳಲ್ಲಿ ಅವನ್ನು ಸರದೂಗಿಸಿಕೊಂಡು ಹೋಗಲು ಪ್ರಯತ್ನ ನಡೆಸುತ್ತೇವೆ ಎಂದರು.

ಉಮೇಶ ಕತ್ತಿ ಮಾತನಾಡಿ, ಬೆಳಗಾವಿ ಡಿಸಿಸಿ ಬ್ಯಾಂಕ್ ಶತಮಾನೋತ್ಸವ ಸಮಾರಂಭವನ್ನು ಅದ್ಧೂರಿಯಾಗಿ ಮಾಡಲಾಗುವುದು. ಪ್ರಧಾನಿಯನ್ನು ಆಹ್ವಾನಿಸಲಾಗುವುದು. ಇನ್ನೂ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಡಿಸಿಸಿ ಬ್ಯಾಂಕ್: ಅವಿರೋಧ ಆಯ್ಕೆಯಾದವರ ವಿವರ

ಡಿಸಿಸಿ ಬ್ಯಾಂಕ್ ಚುನಾವಣೆ: 4 ಗಂಟೆಗೆ ಮಹತ್ವದ ಪತ್ರಿಕಾಗೋಷ್ಠಿ

ಬೆಳಗಾವಿ ಡಿಸಿಸಿ ಬ್ಯಾಂಕ್ ಎಲೆಕ್ಷನ್ ಗೆ ಕಾಂಗ್ರೆಸ್ ಎಂಟ್ರಿ: ಬಿಗ್ ಟ್ವಿಸ್ಟ್ -Exclusive

ಡಿಸಿಸಿ ಬ್ಯಾಂಕ್ ಚುನಾವಣೆ: ಮಂಗಳವಾರ ಸಂಜೆ ಮಹತ್ವದ ಸಭೆ