ಚಿಕ್ಕಮಗಳೂರಿನಲ್ಲಿ ಮತ್ತೆ ಇಬ್ಬರಲ್ಲಿ ಮಂಗನ ಕಾಯಿಲೆ ಪತ್ತೆ

ಸೋಂಕು ತಗುಲಿದವರ ಸಂಖ್ಯೆ 5ಕ್ಕೆ ಏರಿಕೆ

ಪ್ರಗತಿವಾಹಿನಿ ಸುದ್ದಿ; ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಮಂಗನ ಕಾಯಿಲೆ ಸೋಂಕಿಗೆ ಮತ್ತೆ ಇಬ್ಬರು ತುತ್ತಾಗಿದ್ದು, ಜಿಲ್ಲೆಯ ಜನತೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಕಳೆದ ಮೂರು ದಿನಗಳ ಹಿಂದೆ ಜಿಲ್ಲೆಯಲ್ಲಿರುವ ಅಸ್ಸಾಂ, ಮಧ್ಯಪ್ರದೇಶ ಮೂಲದ ಮೂವರು ಕಾರ್ಮಿಕರಲ್ಲಿ ಮಂಗನ ಕಾಯಿಲೆ ಸೋಂಕು ಪತ್ತೆಯಾಗಿತ್ತು. ಈಗ ಈ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ಇವರು ಎನ್. ಆರ್ ಪುರ ತಾಲೂಕಿನ ಮಡಬೂರು ಗ್ರಾಮದ ಕಾಫಿ ತೋಟದಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.

ಜಿಲ್ಲೆಯಲ್ಲಿ ಕೆಎಫ್​ಡಿ (ಕಯಾಸನೂರು ಫಾರೆಸ್ಟ್​ ಕಾಯಿಲೆ) ವೈರಸ್​ ಹರಡುತ್ತಿದ್ದು, ಈ ವೈರಾಣು ಅಸ್ಸಾಂನ ಕೂಲಿ ಕಾರ್ಮಿಕರಲ್ಲಿ ಕಾಣಿಸಿಕೊಂಡಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ದೃಢೀಕರಿಸಿದೆ.

ಸೋಂಕು ಹರಡುವ ಹಿನ್ನೆಲೆ ಜಿಲ್ಲಾ ಸರ್ವೇಕ್ಷಣಾ ಘಟಕ ಮುನ್ನೆಚ್ಚರಿಕ ಕ್ರಮಗಳನ್ನ ಕೈಗೊಂಡಿದ್ದು, ಜನರಿಗೆ ರೋಗ ನಿರೋಧಕ ಲಸಿಕೆಯನ್ನು ಹಾಕಲಾಗುತ್ತಿದೆ. ಅಷ್ಟೇ ಅಲ್ಲದೇ ಮಡಬೂರು ಸುತ್ತಮುತ್ತಲಿನ 5 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ರೋಗ ನಿರೋಧಕ ಔಷಧಿಯನ್ನ ಸಿಂಪಡಿಸುವ ಮೂಲಕ ರೋಗ ತಡೆಗಟ್ಟಲು ಕ್ರಮ ಕೈಗೊಳ್ಳಲಾಗಿದೆ.

ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎನ್.ಆರ್ ಪುರ ತಾಲೂಕು ಮಾತ್ರವಲ್ಲದೇ ಕೊಪ್ಪ, ಶೃಂಗೇರಿ, ಮೂಡಿಗೆರೆ ಸೇರಿದಂತೆ ವಿವಿಧ ಗ್ರಾಮಗಳಿಗೆ ವೈದ್ಯರ ತಂಡ ಭೇಟಿ ನೀಡುತ್ತಿದ್ದು, ಜನರು ಭಯ ಪಡದಂತೆ ರೋಗದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.