P.V.Hegde Add

ಹೆಣ್ಣು ಮಕ್ಕಳಿರುವ ಪಾಲಕರು ಓದಲೇಬೇಕಾದ ಸುದ್ದಿ; 700 ಅಪ್ರಾಪ್ತ ಬಾಲಕಿಯರು ಸಂಕಷ್ಟದಲ್ಲಿ

ಬಾಲಕಿಯರ ಗೆಳತಿ ಹುಡುಗಿಯಲ್ಲ, ಪಕ್ಕಾ ಸೈಬರ್ ಕ್ರಿಮಿನಲ್ ಆಗಿದ್ದ

“ನಾವು ಮಕ್ಕಳನ್ನು ಮುಕ್ತವಾಗಿ ರಸ್ತೆ ದಾಟಲು ಬಿಡುತ್ತೇವೆಯೇ? ಹಾಗಾದರೆ ಇಂಟರ್ನೆಟ್  -ಸೋಶಿಯಲ್ ಮೀಡಿಯಾ ಬಳಸಲು ಅವಕಾಶ ನೀಡುವುದು ಸರಿಯೇ”?

ಶ್ಯಾಮ ಹಂದೆ, ಮುಂಬಯಿ

ಓರ್ವ ತರುಣನಲ್ಲಿ 700 ಅಪ್ರಾಪ್ತ ಬಾಲಕಿಯರ ಆಕ್ಷೇಪಾರ್ಹ ಛಾಯಾ ಚಿತ್ರಗಳು ಮತ್ತು ಆಡಿಯೊ ರೆಕಾರ್ಡಿಂಗ್‌ ಗಳ ಸಂಗ್ರಹ ಇತ್ತೀಚೆಗೆ ಸಿಕ್ಕಿದ್ದು ಪ್ರಕರಣವನ್ನು ಸೈಬರ್ ಪೊಲೀಸರು ತನಿಖೆ ನಡೆಸುತ್ತಿದ್ದು ಕೆಲವು ಸಾಮಾಜಿಕ ವಿಷಯಗಳು ಇದರಿಂದ ಬೆಳಕಿಗೆ ಬಂದಂತಾಗಿದೆ.

ಲೈಂಗಿಕ ಶಿಕ್ಷಣದ ಕೊರತೆಯಿಂದಾಗುವ ಬಾಲಕಿಯರ ಮಾನಸಿಕ ಗೊಂದಲ ಮತ್ತು ಇಂಟರ್ನೆಟ್ ಅನಿಯಮಿತ ಬಳಕೆಯ ದುಷ್ಪರಿಣಾಮ ಅದರೊಂದಿಗೆ ಗಮನ ಸೆಳೆಯಲು ಶರೀರವನ್ನು ಬಳಸುವುದರ ಬಗ್ಗೆ ಹುಡುಗಿಯರಲ್ಲಿ ರುಜುವಾಗುತ್ತಿರುವ ತಪ್ಪು ಕಲ್ಪನೆ ಮತ್ತು ಮುಖ್ಯವಾಗಿ ಪೋಷಕರ ನಿರ್ಲಕ್ಷ್ಯದತ್ತ ಮನೋ ವೈದ್ಯರು ಗಮನ ಸೆಳೆದಿದ್ದಾರೆ.
“ಇನ್ಸ್ಟಾಗ್ರಾಮ್ ನಲ್ಲಿ” ಗೆಳತಿಯಾಗಿ ಅಕೌಂಟ್ ನಡೆಸುತ್ತಿದ್ದ ಸೈಬರ್ ಕ್ರಿಮಿನಲ್ -ಎಂದೂ ನೋಡದ, ಮತ್ತು ಭೇಟಿಯಾಗದ, ಆದರೆ “ಇನ್ಸ್ಟಾಗ್ರಾಮ್ ನಲ್ಲಿ” ಕಾನೂನು ಬಾಹಿರ ಉದ್ಯೋಗವನ್ನು ಮಾಡುವ ಓರ್ವ ಗೆಳತಿಗೆ ಅನೇಕ ಹುಡುಗಿಯರು ತಮ್ಮ ನಗ್ನ ಫೋಟೋಗಳನ್ನು ನೀಡಿದ್ದಾರೆ.

ಆದರೆ ಈ ಅಪ್ರಾಪ್ತ ಬಾಲಕಿಯರ ಕೃತ್ಯ ಅವರಿಗೆ ದೊಡ್ಡ ಮಾನಸಿಕ ಅಘಾತವನ್ನೇ ನೀಡಿದೆ. ಕಾರಣ ಬಾಲಕಿಯರ ಗೆಳತಿ ಹುಡುಗಿಯಲ್ಲ, ಪಕ್ಕಾ ಸೈಬರ್ ಕ್ರಿಮಿನಲ್ ಆಗಿದ್ದ. ಈತ ಹುಡುಗಿಯರ ಛಾಯಾಚಿತ್ರಗಳಲ್ಲಿ  ಬದಲಾವಣೆ ಮಾಡಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ, ಅಲ್ಲದೆ ಇತರ ಆಕ್ಷೆಪಾರ್ಹ ಕೃತ್ಯಗಳನ್ನು ಅವರಿಂದ ಮಾಡಿಸುತ್ತಿದ್ದ. ಸೈಬರ್ ಪೊಲೀಸರು ಆತನನ್ನು ಬಂಧಿಸಿದ ನಂತರ ಈ ಸಂಗತಿಗಳು ಬೆಳಕಿಗೆ ಬಂದಿವೆ.

ಪ್ರಕರಣದಲ್ಲಿಯ ಕಿರಿಯ ಹುಡುಗಿ ಎಂಟು ವರ್ಷದವಳಾಗಿದ್ದಾಳೆ. ಸಂವಾದದ ಕೊರತೆ -ಇನ್‌ಸ್ಟಾಗ್ರಾಮ್‌ನಲ್ಲಿ ಎಂಟು ವರ್ಷದ ಬಾಲಕಿ ಸಕ್ರಿಯವಾಗಿದ್ದಾಳೆ ಎಂದು ಕೇಳಿ ಮುಂಬಯಿಯ ಪ್ರಸಿದ್ದ ಮನೋವೈದ್ಯ ಡಾ. ಹರೀಶ ಶೆಟ್ಟಿ ಅವರು ಆಶ್ಚರ್ಯಚಕಿತರಾಗಿದ್ದಾರೆ. “ನಾವು ರಸ್ತೆ ದಾಟುವಾಗ ಮಕ್ಕಳನ್ನು ಮುಕ್ತವಾಗಿ ಬಿಡುತ್ತೇವೆಯೇ? ಹಾಗಾದರೆ ಇಂಟರ್ನೆಟ್ -ಸಾಮಾಜಿಕ ಮಾಧ್ಯಮವನ್ನು ಬಳಸಲು ನೀಡುವಾಗ ಅದರ ಅಪಾಯಗಳನ್ನು ಯಾಕೆ ಪರಿಗಣಿಸಬಾರದು? ಮುಚ್ಚಿದ ಕೋಣೆಯಲ್ಲಿ ಮಕ್ಕಳಿಗೆ ಮೊಬೈಲ್ ಇಂಟರ್ನೆಟ್ ಬಳಸಲು ಅವಕಾಶ ನೀಡುವುದು ತಪ್ಪು. ” ಎಂದು ಅವರು ಹೇಳಿದ್ದಾರೆ.
ಸೋಶಿಯಲ್ ಮಿಡಿಯಾಗಳಲ್ಲಿ ಲೈಂಗಿಕ ಅಪರಾಧ ಮತ್ತು ಹುಡುಗಿಯರ ಶೋಷಣೆಗೆ ಲೈಂಗಿಕ ಶಿಕ್ಷಣ ಮತ್ತು ಮನೆಯ ಸದಸ್ಯರಲ್ಲಿ ಸಂವಾದದ ಕೊರತೆ ಪ್ರಮುಖ ಕಾರಣಗಳಾಗಿವೆ ಎಂದು ಡಾ. ಹರೀಶ ಶೆಟ್ಟಿ ತಿಳಿಸಿದ್ದಾರೆ.

ಮುನ್ನೆಚ್ಚರಿಕೆಯ ಗಂಟೆ

“ಇತ್ತೀಚೆಗೆ, ಹುಡುಗಿಯರ ಋತುಚಕ್ರದ ಸರಾಸರಿ ವಯಸ್ಸು 10ಕ್ಕೆಇಳಿದಿದೆ” ಅಲ್ಲದೆ ಬೌದ್ಧಿಕ, ಭಾವನಾತ್ಮಕ ಪರಿಪಕ್ವತೆಯ ಅಭಾವದಿಂದಾಗಿ ದೇಹದಲ್ಲಿ ನಡೆಯುತ್ತಿರುವ ಯೌವ್ವನದ ಬದಲಾವಣೆಗಳಿಗೆ ಹುಡುಗಿಯರು ಹೆದರುತ್ತಾರೆ, ನಾಚುತ್ತಾರೆ. ಈ ಬದಲಾವಣೆಗಳೆಂದರೆ ಅಡ್ಡಪರಿಣಾಮಗಳೇ? ಅಂತಹ ಅನೇಕ ಪ್ರಶ್ನೆಗಳು ಹುಡುಗಿಯರ ಮನಸ್ಸಿನಲ್ಲಿ ಕಾಡುತ್ತಿರುತ್ತವೆ. ಪೋಷಕರಿಂದಲೂ ಇಂತಹ ನಿರ್ಣಾಯಕ ಸಮಯದಲ್ಲಿ ಹುಡುಗಿಯರತ್ತ ನಿರ್ಲಕ್ಷವಾಗುತ್ತದೆ.”

ನಾವು ಎಷ್ಟೇ ಆಧುನಿಕ ಯುಗದಲ್ಲಿ ಬದುಕುತ್ತಿದ್ದರೂ,ಬಾಲಕಿಯರು ವಯಸ್ಸಿಗೆ ಬರುವಾಗ ಆಗುವ ಬದಲಾವಣೆಗಳ ಬಗ್ಗೆ ತಾಯಿಯರಿಂದ ಸರಿಯಾದ ಮಾಹಿತಿ ನೀಡಲಾಗುವುದಿಲ್ಲ. ಒಂದಂತೂ ಅವಳಲ್ಲಿ ಸಮಯವಿರುವುದಿಲ್ಲ ಅಥವಾ ಅವಳು ಸಂಕೋಚಿಸುತ್ತಾಳೆ. ಆದ್ದರಿಂದ, ಹುಡುಗಿಯರ ಮನಸ್ಸಿನಲ್ಲಿಯ ಈ ಗೊಂದಲ ಸೋಶಿಯಲ್ ಮಿಡಿಯಾಗಳಿಂದ ವ್ಯಕ್ತವಾಗುತ್ತವೆ. ಗೆಳತಿಯರು ಈ ವಿಷಯದ ಬಗ್ಗೆ ಸಂವಾದ ಸಾಧಿಸಿದಾಗ ತಮ್ಮ ಭಾವನೆಗಳಿಗೆ ದಾರಿ ಮಾಡಿ ಕೊಡುತ್ತಾರೆ. ಎಂಟರಿಂದ 13 ವರ್ಷದೊಳಗಿನ ಮಕ್ಕಳು ನೋಡಿದ್ದನ್ನು ಮತ್ತು ಕೇಳಿದ್ದನ್ನು ಕೂಡಲೇ ನಂಬುತ್ತಾರೆ. ಇಂತಹ ವಿಷಯಗಳು ಕೂಡ ಅವರ ಮನಸ್ಸಿನಲ್ಲಿ ಬೇಗನೆ ಬಿಂಬಿಸಲಾಗುತ್ತದೆ ಎಂದು ಡಾ.ಶೇನಾಯ ಅವರು ಗಮನ ಸೆಳೆದಿದ್ದಾರೆ.
ಅಪ್ಪಿ-ತಪ್ಪಿ ವೀಕ್ಷಿಸಿದರೆ- ಕೆಲವರಂತು ಪ್ರಸ್ತುತ, ಆನ್ ಲೈನ್ ಶಿಕ್ಷಣಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ತಾಯಿ, ತಂದೆ ಅಥವಾ ಮನೆಯಲ್ಲಿಯ ಹಿರಿಯರು ಬಳಸುವ ಮೊಬೈಲ್ ಫೋನ್ ಕೆಲವು ಬಾರಿ ಚಿಕ್ಕ ಮಕ್ಕಳ ಕೈಗೆ ಸೇರುತ್ತದೆ. ಪರಿಣಾಮ, ಇಂಟರ್ನೆಟ್‌ನಲ್ಲಿ ಹಿರಿಯರಿಂದ ವೀಕ್ಷಿಸಲಾದ ವೆಬ್‌ಸೈಟ್‌ಗಳು, ಅವುಗಳ ಮಾಹಿತಿ ಮಕ್ಕಳ ಕೈಗೆ ಸೇರುವ ಸಾಧ್ಯತೆ ಇದೆ.ಅದರಲ್ಲೂ ಹಿರಿಯರು ಯಾವಾಗೊಮ್ಮೆ ನೋಡಿದ ಆಕ್ಷೇಪಾರ್ಹ ಅಥವಾ ಹಿರಿಯರಿಗಾಗಿರುವ ವೆಬ್‌ಸೈಟ್‌ ಅಪ್ಪಿ-ತಪ್ಪಿ ಮಕ್ಕಳು ವೀಕ್ಷಿಸಿದಲ್ಲಿ ಅದರ ಆಳವಾದ ದುಷ್ಪರಿಣಾಮವಾಗುವ ಸಾಧ್ಯತೆ ಇದೆ. ಎಂದು ಡಾ. ಭಟ್ವಾಡೆಕರ್ ಮಾಹಿತಿ ನೀಡಿದ್ದಾರೆ.

ಏನಿದು ಪ್ರಕರಣ?

ಸೈಬರ್ ಪೊಲೀಸರು ಬಂಧಿಸಿದಾತ ಇನ್ಸ್ಟಾಗ್ರಾಮ್ ನಲ್ಲಿ ಹುಡುಗಿಯರಂತೆ ನಟಿಸಿ 700 ಕ್ಕೂ ಹೆಚ್ಚು ಅಪ್ರಾಪ್ತ ಬಾಲಕಿಯರನ್ನು ಸ್ನೇಹದ ಬಲೆಗೆ ಸೆಳೆದಿದ್ದ. ಈತನ ಮೊಬೈಲ್ ಫೋನ್‌ನಲ್ಲಿ 8 ರಿಂದ 15 ವರ್ಷದೊಳಗಿನ ಹುಡುಗಿಯರ ಆಕ್ಷೇಪಾರ್ಹ ಛಾಯಾಚಿತ್ರ, ಮತ್ತು ಆಡಿಯೋ ರೆಕಾರ್ಡಿಂಗ್‌ಗಳು ಕಂಡುಬಂದಿವೆ.

ನಿಮ್ಮ ವಯಸ್ಸಿನ ಪ್ರಕಾರ ನಿಮ್ಮ ದೇಹ ಬೆಳೆಯಲಿಲ್ಲ ಎಂದು ಪ್ರತಿಕ್ರಿಯಿಸುವ ಮೂಲಕ  ಹುಡುಗಿಯರ ಮನಸ್ಸಿನಲ್ಲಿ ನ್ಯೂನತೆಯ ಭಾವನೆ ನಿರ್ಮಿಸುತ್ತಿದ್ದ. ಬಾಲಕಿಯರ ಮನಸ್ಸಿನಲ್ಲಿ ನ್ಯೂನತೆ ದೃಢವಾಗಲೆಂದು ಇತರ ಯುವತಿಯರ, ಮಹಿಳೆಯರ ನಗ್ನ ಫೋಟೋಗಳನ್ನು ತನ್ನದೇ ಎಂದು ಈ ಬಾಲಕಿಯರಿಗೆ ಕಳುಹಿಸುತ್ತಿದ್ದ. ಅಲ್ಲದೆ ಅಂತಹ ಅವರ ಛಾಯಾಚಿತ್ರಗಳನ್ನು ಕಳುಹಿಸುವಂತೆ ಹೇಳುತಿದ್ದ. ನ್ಯೂನತೆಯ ಭಾವನೆ ಹೊಂದಿರುವ ಹಲವಾರು ಹುಡುಗಿಯರು ಅವನಿಗೆ ಛಾಯಾಚಿತ್ರಗಳನ್ನು ರವಾನಿಸುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

ನಗ್ನ ಫೋಟೋಗಳನ್ನು ಕಳುಹಿಸಲು ನಿರಾಕರಿಸುವ ಹುಡುಗಿಯರ ಇನ್ಸ್ಟಾಗ್ರಾಮ್ ಖಾತೆಯಲ್ಲಿರುವ ಫೋಟೋಗಳನ್ನು “ಮಾರ್ಫ್”(ಬದಲಾವಣೆ ಮಾಡುವ ತಂತ್ರ) ಮಾಡಿ ಹುಡುಗಿಯರ ಪೋಷಕರಿಗೆ, ಸ್ನೇಹಿತರಿಗೆ ಕಳುಹಿಸುವುದಾಗಿ ಬೆದರಿಕೆ ಹಾಕುತ್ತಿದ್ದ. ಈ ರೀತಿ ಬೆದರಿಕೆ ಹಾಕಿ ಆರೋಪಿ 700 ಬಾಲಕಿಯರಿಂದ ಆಕ್ಷೇಪಾರ್ಹ ಛಾಯಾಚಿತ್ರ ಮತ್ತು ಆಡಿಯೋ ರೆಕಾರ್ಡಿಂಗ್ ಪಡೆದಿದ್ದ.

ಪೋಷಕರಿಗೆ ಮನೋವೈದ್ಯರ ಸಲಹೆ

*ಮಕ್ಕಳ ಇಂಟರ್ನೆಟ್ ಮತ್ತು ಮೊಬೈಲ್ ಬಳಕೆಯ ಬಗ್ಗೆ ಗಮನವಿರಲಿ.
* ಹಿಸ್ಟರಿ ವೀಕ್ಷಿಸುವ ಮೂಲಕ ಮಕ್ಕಳು ಯಾವ ವೆಬ್‌ಸೈಟ್‌ಗಳಿಗೆ ಭೇಟಿ ನೀಡುತ್ತಾರೆ ಎಂಬುದನ್ನು ತಿಳಿದುಕೊಳ್ಳಬಹುದು.
* ಮಕ್ಕಳು ಇಂಟರ್‌ನೆಟ್‌ನಲ್ಲಿರುವಾಗ ಅವರ ಪಕ್ಕದಲ್ಲಿ ಕುಳಿತುಕೊಳ್ಳಬೇಕು.
* ಮಕ್ಕಳಿಗೆ ಇಯರ್‌ಫೋನ್, ಹೆಡ್‌ಫೋನ್ ನೀಡಬಾರದು.
* ಮಕ್ಕಳು ಪ್ರೌಢರಾಗುವವರೆಗೆ ಸೋಶಿಯಲ್ ಮೀಡಿಯಾಗಳಿಂದ ದೂರವಿರಿಸಿ.

(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ)