ಆನಂದ್ ಸಿಂಗ್ ಗೆ ಅರಣ್ಯ ಖಾತೆ ಕಳ್ಳನ ಕೈಯಲ್ಲಿ ಕೀಲಿ ಕೈ ನೀಡಿದಂತೆ

ಸಿಎಂ ಬಿಎಸ್ ವೈ ಹಿಂದಿನ ಸರ್ಕಾರದ ಯೋಜನೆಗಳನ್ನು ರದ್ದು ಮಾಡುತ್ತಿದ್ದಾರೆ: ಹೆಚ್.ಎಂ.ರೇವಣ್ಣ ಕಿಡಿ

ಪ್ರಗತಿವಾಹಿನಿ ಸುದ್ದಿ; ರಾಯಚೂರು: ಸಚಿವ ಆನಂದ್​ ಸಿಂಗ್​ ಅವರಿಗೆ ಅರಣ್ಯ ಇಲಾಖೆ ನೀಡಿದ್ದು ಕಳ್ಳನ ಕೈಯಲ್ಲಿ ಕೀಲಿ ಕೈ ಕೊಟ್ಟಂತೆ. ಗಣಿ ವ್ಯವಾಹಾರದಲ್ಲಿ ಅರಣ್ಯ ಅಸ್ತ ವ್ಯಸ್ತವಾಗಲಿದೆ ಎಂದು ಮಾಜಿ ಸಚಿವ ಹೆಚ್.ಎಂ.ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.

ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಮೈತ್ರಿ ಸರಕಾರದ ಯೋಜನೆಗಳನ್ನು ಸಿಎಂ ಯಡಿಯೂರಪ್ಪ ಸೈಲೆಂಟ್​ ಆಗಿ ರದ್ದು ಮಾಡುತ್ತಿದ್ದಾರೆ. ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನ ಸ್ಥಗಿತಗೊಳಿಸಿದ್ದಾರೆ ಎಂದು ಕಿಡಿಕಾರಿದರು.

ಯಡಿಯೂರಪ್ಪನವರ ಪೆನ್ನಿನಲ್ಲಿ ಇಂಕೇ ಇಲ್ಲ ಅನಿಸುತ್ತೆ, ಅದಕ್ಕೆ ಅವರು ಏನನ್ನೂ ಬರೆಯುತ್ತಿಲ್ಲ. ಸಂಗೊಳ್ಳಿ ರಾಯಣ್ಣ ಪ್ರಾಧಿಕಾರಕ್ಕೆ ಹಣ ನೀಡುತ್ತಿಲ್ಲ. ಶೋಷಿತ ಸಮಾಜದಲ್ಲಿ ಮಠ ಮಾಡಿದ್ದೇವೆ. ನಾಯಕ, ಕುರುಬ ಸಮಾಜ ವಿರುದ್ಧ ದಿಕ್ಕಿನಲ್ಲಿ ಹೋಗುವ ಪರಿಪಾಠ ನಡೆಯುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಎರಡು ಸಮುದಾಯದ ವಿರುದ್ಧ ವಿರುದ್ಧ ಪೋಸ್ಟ್​ ಹಾಕುತ್ತಿದ್ದಾರೆ. ಎರಡು ಸಮಾಜದ ಗುರುಗಳು ಹಾಗೂ ಮುಖಂಡರ ಸಮಾಜದವರ ಸಭೆ ನಡೆಸಿ ಈ ವೈಷಮ್ಯ ಬಗೆಹರಿಸಲಾಗುವುದು ಎಂದು ಹೇಳಿದರು.

ವಿಧಾನಸಭಾ ಪ್ರತಿಪಕ್ಷ ಸ್ಥಾನಕ್ಕೆ ಶೀಘ್ರವೇ ಅಧ್ಯಕ್ಷರ ನೇಮಕವಾಗಬೇಕು. ಸಿದ್ದರಾಮಯ್ಯನವರೇ ಅಧ್ಯಕ್ಷರಾಗಬೇಕೆ ಅಥವಾ ಇನ್ಯಾರಾದರೂ ಆಗಬೇಕಾ ಎಂಬುದರ ಕುರಿತು ಹಿರಿಯರ ಅಭಿಪ್ರಾಯ ಪಡೆಯಲಾಗಿದ್ದು, ಇನ್ನೊಂದು ವಾರದಲ್ಲಿ ನೇಮಕವಾಗಲಿದೆ ಎಂದರು.