Reporter wanted
Crease wise New Design

ಪ್ರಪಂಚದಲ್ಲಿ ನರ್ತಿಸುತ್ತಿರುವ ವಿಚಿತ್ರವಾದ ಕೋವಿಡ್-19 ವಿನಾಶ ಹೊಂದಲಿ  -ಸ್ವರ್ಣವಲ್ಲೀ ಶ್ರೀ 

ಭಗವಂತನಲ್ಲಿ ಶರಣಾಗುವುದೇ ಅನನ್ಯ ಮಾರ್ಗವಾಗಿದೆ

https://youtu.be/7mIzsV9NaQM
ಪ್ರಗತಿವಾಹಿನಿ ಸುದ್ದಿ, ಶಿರಸಿ – ‘ಪ್ರಪಂಚದಲ್ಲಿ ಕೊವಿಡ್-19 ಎಂಬ ವಿಚಿತ್ರವಾದ ಸೋಂಕು (ಕೊರೋನಾ) ಅಟ್ಟಹಾಸದಿಂದ ಮೆರೆಯುತ್ತಿದೆ. ದಿನೆ ದಿನೆ ಹಲವಾರು ಜನರನ್ನು ಬಲಿ ತೆಗೆದುಕೊಳ್ಳುತ್ತಿದೆ. ಎಲ್ಲರೂ ಭಯಗ್ರಸ್ತರಾಗಿದ್ದಾರೆ. ನಿರಾತಂಕವಾಗಿ ಉದ್ಯೋಗದಲ್ಲಿ, ವ್ಯವಹಾರದಲ್ಲಿ ತೊಡಗಿಕೊಳ್ಳಲು ಬಿಡುತ್ತಿಲ್ಲ. ಅಬಾಲವೃದ್ಧರವರೆಗೂ ಜನರು ಈ ದುಃಸ್ಥಿತಿಯನ್ನು ಅನುಭವಿಸುತ್ತಿದ್ದಾರೆ. ಯಾರ ಹತ್ತಿರವೂ ಇದರ ಮರ್ಮವನ್ನು, ಮೂಲವನ್ನು ಕಂಡುಹಿಡಿದು ಸದೆ ಬಡಿಯಲಾಗುತ್ತಿಲ್ಲ. ಇದಕ್ಕೆ ಭಗವಂತನಲ್ಲಿ ಶರಣಾಗುವುದೇ ಅನನ್ಯ ಮಾರ್ಗವಾಗಿದೆ. ಭಗವಂತನಾದ ಶ್ರೀಹರಿಯೇ! ಶ್ರೀ ಲಕ್ಷ್ಮೀನೃಸಿಂಹ! ಈ ರೋಗದ ಭಯದಿಂದ, ಆತಂಕದಿಂದ, ಈ ನಿಗಡ ಬಂಧನದಿಂದ ಎಲ್ಲ ಭಕ್ತಜನರನ್ನು ರಕ್ಷಿಸು’ ಎಂದು ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಆರಾಧ್ಯ ದೈವ ಶ್ರೀ ಲಕ್ಷ್ಮೀನೃಸಿಂಹ ದೇವರಲ್ಲಿ ಪ್ರಾರ್ಥಿಸಿದರು.
ಅವರು ನ.29ರಂದು ರವಿವಾರ ಶ್ರೀಮಠದಲ್ಲಿ ಲೋಕಕಲ್ಯಾಣಾರ್ಥವಾಗಿ ನಡೆದ ಸಪರಿವಾರ ಶ್ರೀ ಲಕ್ಷ್ಮೀನೃಸಿಂಹ ದೇವರ ತ್ರಿಪುರಾಖ್ಯ ಅಯುತ ದೀಪೋತ್ಸವ ಕಾರ್ಯಕ್ರಮದ ಕೊನೆಯಲ್ಲಿ ಶ್ರೀದೇವರ ಸನ್ನಿಧಿಯಲ್ಲಿ ಲೋಕಮಂಗಲವನ್ನು ಪ್ರಾರ್ಥಿಸುತ್ತಿದ್ದರು. ಮುಂದುವರೆದ ಅವರು ಚೀನಾದಲ್ಲಿ ಹುಟ್ಟಿತೆಂದು ಹೇಳುವ ಈ ಸೋಂಕು ಜನರನ್ನು ಉಸಿರುಗಟ್ಟಿಸಿ ಸಾಯಿಸುತ್ತಿದೆ. ಇದರಿಂದ ಹೊರಬರಲು ಭಗವಂತನ ನಾಮಸ್ಮರಣೆಯೇ ರಾಮಬಾಣ. ನೃಸಿಂಹ ಎಂಬ ಶಬ್ದಕ್ಕೆ ಬಂಧನವನ್ನು ನಾಶಪಡಿಸುವವನು ಎಂಬ ಅರ್ಥವಿದೆ. ಆತ ಮೃತ್ಯುವಿಗೂ ಮೃತ್ಯು. ತನಗೆ ಯಾವುದೇ ಸಂದರ್ಭದಲ್ಲೂ ಸಾವು ಬರಬಾರದೆಂದು ಅನೇಕ ಕಟ್ಟು-ಪಾಡುಗಳನ್ನು ಜೋಡಿಸಿ ಬ್ರಹ್ಮನಿಂದ ವರಪಡೆದಿದ್ದ ದುಷ್ಟ ದೈತ್ಯನಾದ ಹಿರಣ್ಯಕಶಿಪುವನ್ನು ಬ್ರಹ್ಮನ ವರಕ್ಕೆ ಬಾಧೆ ಬರದಂತೆ ನಾಶಮಾಡಿದ ಭಕ್ತರಕ್ಷಕ ಲಕ್ಷ್ಮೀನೃಸಿಂಹ. ಈಗ ಬಂದೊದಗಿದ ಮನುಷ್ಯನ ಬುದ್ಧಿಗೆ ನಿಲುಕದ ಈ ರೋಗವನ್ನು ನಾಶಮಾಡಿ ನಮ್ಮೆಲ್ಲರನ್ನು ಉದ್ಧರಿಸು ಎಂಬುದಾಗಿ ಆ ಲಕ್ಷ್ಮೀನೃಸಿಹನಲ್ಲಿ ಎಲ್ಲ ಶಿಷ್ಯ-ಭಕ್ತರ ಪರವಾಗಿ ಪ್ರಾರ್ಥಿಸಿದರು. ಅಲ್ಲದೆ ಎಲ್ಲರೂ ಆರೋಗ್ಯ ಕಾಪಾಡಿಕೊಳ್ಳಲು ಬೇಕಾದ ನಿಯಮಗಳನ್ನು ಉಲ್ಲಂಘಿಸದೆ ಭಗವಂತನ ಉಪಾಸನೆಯಲ್ಲಿ ನಿರತರಾಗಬೇಕೆಂದು ಸೂಚಿಸಿದರು.
ಈ ಮೊದಲು ಹತ್ತುಸಾವಿರ(ಅಯುತ)ಕ್ಕೂ ಅಧೀಕ ದೀಪಗಳನ್ನು ಬೆಳಗಿಸಲಾಯಿತು. ದೀಪೋತ್ಸವದ ನಿಮಿತ್ತ ಶ್ರೀ ಲಕ್ಷ್ಮೀನೃಸಿಂಹ ಹವನ ಹಾಗೂ ದೀಪೋತ್ಸವಾಂಗ ವಿವಿಧ ಹೋಮಗಳು ನಡೆಯಿತು. ಸಾಯಂಕಾಲ ಶ್ರೀ ಲಕ್ಷ್ಮೀನೃಸಿಂಹ, ಶ್ರೀ ಚಂದ್ರಮೌಳೀಶ್ವರ ಶ್ರೀ ರಾಜರಾಜೇಶ್ವರೀ ಹಾಗೂ ಪರಿವಾರ ದೇವತೆಗಳಿಗೆ ಮಹಾಮಂಗಳಾರತಿ, ದೀಪೋತ್ಸವ, ಅಷ್ಟಾವಧಾನ, ರಾಜೋಪಚಾರ ಮುಂತಾದ ಪೂಜಾ ಕೈಂಕರ್ಯಗಳು ನಡೆಯಿತು. ಈ ಎಲ್ಲ ಕಾರ್ಯಕ್ರಮಗಳಿಗೆ ಶಿಷ್ಯ-ಭಕ್ತರು, ಊರ ನಾಗರಿಕರು, ಶ್ರೀಮಠದ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಪಾಠಶಾಲೆಯ ಅಧ್ಯಾಪಕರು ಆಗಮಿಸಿ ದೀಪಬೆಳಗಿಸಲು ನೆರವಾದರು ಶಿಷ್ಯ-ಭಕ್ತರು ದೀಪೋತ್ಸವಕ್ಕೆ ದೀಪದ ಎಣ್ಣೆ, ಹಣತೆ, ಕಾಣ ಕೆಗಳನ್ನು ನೀಡಿ ಶ್ರೀ ಶ್ರೀಗಳವರ ಹಾಗೂ ದೇವರ ಅನುಗ್ರಹಕ್ಕೆ ಪಾತ್ರರಾದರು.