Advertisement -Home Add
Chandargi Sports School
Wanted Home Add

ಬೀಸೋ ದೊಣ್ಣೆಯಿಂದ ಪಾರಾದ ರಾಜ್ಯ ಸರಕಾರ

ಬೆಳಗಾವಿ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ (ಡಿಸಿಸಿ) ಚುನಾವಣೆ ಕೂಡ ಮುಂದೂಡಲ್ಪಟ್ಟಿದೆ. 

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದ ಎಲ್ಲ ಸಹಕಾರಿ ಬ್ಯಾಂಕ್, ಸಕ್ಕರೆ ಕಾರ್ಖಾನೆ ಸೇರಿದಂತೆ ಎಲ್ಲಾ ಚುನಾವಣೆಗಳನ್ನು ಮುಂದೂಡಿದೆ. ಈಗಾಗಲೆ  ದಿನಾಂಕ ಘೋಷಣೆಯಾಗಿರುವ ಚುನಾವಣೆಯನ್ನು ಸಹ ಮುಂದೂಡಲಾಗಿದೆ.

ಡಿಸೆಂಬರ್ ಅಂತ್ಯದವರೆಗೆ ಯಾವುದೇ ಚುನಾವಣೆ ನಡೆಸದಂತೆ ಆದೇಶಿಸಲಾಗಿದೆ. ಆಗಸ್ಟ್ 27ರಂದು ನಡೆಯಬೇಕಿದ್ದ ಬೆಳಗಾವಿ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ (ಡಿಸಿಸಿ) ಚುನಾವಣೆ ಕೂಡ ಮುಂದೂಡಲ್ಪಟ್ಟಿದೆ.

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ತೀವ್ರ ಕುತೂಹಲ ಮೂಡಿಸಿತ್ತು. ರಾಜ್ಯಾಡಳಿತ ಬಿಜೆಪಿಯ ಘಟಾನುಘಟಿ ನಾಯಕರಲ್ಲೇ ಎರಡು ಗುಂಪು ರಚನೆಯಾಗಿ ರಾಜ್ಯ ಸರಕಾರಕ್ಕೆ ಮತ್ತೆ ಆತಂಕವನ್ನು ತಂದಿಟ್ಟಿತ್ತು. ಬೆಳಗಾವಿ ರಾಜಕಾರಣ ಮತ್ತು ರಾಜ್ಯ ಸರಕಾರವನ್ನು ಅಲ್ಲಾಡಿಸಲಿದೆಯೇ ಎನ್ನುವ ಕುತೂಹಲಕ್ಕೆ ಕಾರಣವಾಗಿತ್ತು.

ರಾಜ್ಯದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಹೇಬ ಜೊಲ್ಲೆ ಗುಂಪು ಮತ್ತು ಸಚಿವ ರಮೇಶ ಜಾರಕಿಹೊಳಿ, ಮಾಜಿ ಸಚಿವರಾದ ಉಮೇಶ ಕತ್ತಿ, ಬಾಲಚಂದ್ರ ಜಾರಕಿಹೊಳಿ ಅವರನ್ನೊಳಗೊಂಡ ಗುಂಪುಗಳ ಮಧ್ಯೆ ಹಣಾಹಣಿ ನಡೆಯಲಿತ್ತು. ಜಿಲ್ಲೆಯ ಬಿಜೆಪಿ ಶಾಸಕರು, ಮುಖಂಡರು ಸ್ಪಷ್ಟವಾಗಿ ಎರಡು ಗುಂಪುಗಳಲ್ಲಿ ಕಾದಾಡುವವರಿದ್ದರು.

ಆದರೆ ಇದೀಗ ಚುನಾವಣೆಯನ್ನೇ ಮುಂದೂಡಿದ್ದರಿಂದ ರಾಜ್ಯ ಸರಕಾರ ಸ್ವಲ್ಪಮಟ್ಟಿಗೆ ರಿಲ್ಯಾಕ್ಸ್ ಆಗಿದೆ.