Yoga add Final 1
KLE1099 Add

TSS ತೋಟಿಗರ ಸ್ವಾಭಿಮಾನ: ಸ್ವಾರ್ಥ ರಾಜಕಾರಣಕ್ಕೆ ವ್ಯವಸ್ಥೆ ಕುಸಿಯದಿರಲಿ

GIT Add 3
Beereshwara add 12
M.K.Hegde

ಎಂ.ಕೆ.ಹೆಗಡೆ, ಶಿರಸಿ – ಶಿರಸಿಯಲ್ಲಿ ನೋಡುವುದಕ್ಕೇನಿದೆ ಎಂದು ಕೇಳಿದರೆ ಯಾಣ, ಬನವಾಸಿ, ಮಾರಿಕಾಂಬಾ ದೇವಾಲಯ, ಸಹಸ್ರಲಿಂಗ ಮುಂತಾದ ಹೆಸರುಗಳನ್ನು ಹೇಳುತ್ತ ಬಂದ ಸಾಲಿನಲ್ಲಿ ಟಿಎಸ್ಎಸ್ ಸೂಪರ್ ಮಾರ್ಕೆಟ್ ಹೆಸರು ಸೇರಿದ್ದು ನಿಜವಾಗಿಯೂ ಶಿರಸಿ ಭಾಗದ ಅಡಿಕೆ ಬೆಳೆಗಾರರು ಹೆಮ್ಮೆ ಪಡಲೇಬೇಕಾದ ಸಂಗತಿ.

ಟಿಎಸ್ಎಸ್ ಸೂಪರ್ ಮಾರ್ಕೆಟ್ ಶಿರಸಿ ಪಾಲಿಗೆ ಅದೃಷ್ಟದ ಬಾಗಿಲನ್ನೇ ತೆರೆದು ಶಿರಸಿಯ ಚಿತ್ರಣವನ್ನೇ ಬದಲಾಯಿಸಿದೆ. ಬಿಗ್ ಬಜಾರ್, ಡಿ ಮಾರ್ಟ್ ಮೊದಲಾದ ದಿಗ್ಗಜ ಸಂಸ್ಥೆಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಎದ್ದು ನಿಂತಿದ್ದು ಸುಲಭದ ಮಾತಲ್ಲ.

ಸಣ್ಣ ಪುಟ್ಟ ಆರೋಪ- ಪ್ರತ್ಯಾರೋಪಗಳಿದ್ದರೂ ಟಿಎಸ್ಎಸ್, ಹಿರಿಯ ಧುರೀಣ, ಮಾಜಿ ಶಾಸಕ ಎಸ್.ಆರ್.ಹೆಗಡೆ ಕಡವೆ ಅವರ ಕಾಲದಿಂದಲೂ ಅಡಿಕೆ ಬೆಳೆಗಾರರ ಬೆನ್ನಿಗೆ ನಿಂತ ಸಂಸ್ಥೆ. ಅಡಿಕೆ ಬೆಳೆಗಾರರ ಬದುಕಿಗೆ ಅರ್ಥ ಕಲ್ಪಿಸಿದ ಸಂಸ್ಥೆ. ನಿಮ್ಮ ಜೊತೆ ನಾನಿದ್ದೇನೆ ಎಂದು ಧೈರ್ಯ ತುಂಬಿದ ಸಂಸ್ಥೆ. ಆದರೆ ಕೇವಲ ಅಡಿಕೆ, ಕಾಳು ಮೆಣಸು, ಏಲಕ್ಕಿ ಮೊದಲಾದ ಬೆಳೆಗಳಿಗಷ್ಟೆ ಸೀಮಿತವಾಗಿ ನಡೆದುಕೊಂಡು ಬಂದಿತ್ತು.

ಕಳೆದ ಕೆಲವೇ ವರ್ಷಗಳಲ್ಲಿ ಟಿಎಸ್ಎಸ್ (ತೋಟಗಾರ್ಸ್ ಕೋ ಆಪರೇಟಿವ್ ಸೇಲ್ಸ್ ಸೊಸೈಟಿ) ತನ್ನ ಸ್ವರೂಪ ಬದಲಾಯಿಸಿಕೊಂಡು ಬೆಳೆದು ನಿಂತಿದ್ದು ಅಚ್ಛರಿಯ ಸಂಗತಿ. ಬಹುಶಃ ಕಟಿಂಗ್ ಸಲೂನ್ ಹೊರತುಪಡಿಸಿ ಎಲ್ಲವೂ ಅಲ್ಲಿದೆ. ಶಿರಸಿ, ಸಿದ್ದಾಪುರ, ಯಲ್ಲಾಪುರ ಭಾಗದ ರೈತರು ನಗರವನ್ನು ಅಲೆಯುವ ಕೆಲಸವನ್ನು ಟಿಎಸ್ಎಸ್ ತಪ್ಪಿಸಿದೆ. ಯಾವುದೇ ಕೆಲಸಕ್ಕೆ ನೇರವಾಗಿ ಟಿಎಸ್ಎಸ್ ಆವರಣಕ್ಕೆ ಬಂದು ಮರಳಿ ಮನೆಗೆ ಹೋಗಬಹುದಾದಷ್ಟು ಸೌಲಭ್ಯಗಳನ್ನು ಕಟ್ಟಿ ನಿಲ್ಲಿಸಲಾಗಿದೆ. ಸುತ್ತಮುತ್ತಲಿನ ಸಾವಿರಾರು ಯುವಕರಿಗೆ ಊರಲ್ಲೇ ಉದ್ಯೋಗ ಕಟ್ಟಿಕೊಟ್ಟಿದೆ. ದಿನದಿಂದ ದಿನಕ್ಕೆ ಬೆಳೆಯುತ್ತ ಮುನ್ನಡೆದಿದೆ.

ಟಿಎಸ್ಎಸ್ ಇಷ್ಟೊಂದು ಬೆಳೆದು ನಿಲ್ಲಲು, ತನ್ನ ಸ್ವರೂಪವನ್ನೇ ಬದಲಾಯಿಸಿಕೊಳ್ಳಲು ಹಾಲಿ ವ್ಯವಸ್ಥಾಪಕ ರವೀಶ್ ಹೆಗಡೆ ಅವರ ಯೋಗದಾನವಿದೆ ಎಂದರೆ ಯಾರು ಅಲ್ಲಗಳೆಯಲು ಸಾಧ್ಯವಿಲ್ಲ. ಸಂಸ್ಥೆ ಇಷ್ಟೊಂದು ಆಗಾಧವಾಗಿ ಬೆಳೆಯಲು ಅವರ ಯೋಜನೆ, ಶ್ರಮ, ಕತೃತ್ವ ಶಕ್ತಿ, ನಾಯಕತ್ವ ಗುಣ ಮೊದಲಾದವು ಕಾರಣ.

ಶಾಂತಾರಾಮ ಹೆಗಡೆ ಆಡಳಿತದಲ್ಲಿ ಹಿಡಿತ ಹೊಂದಿರುವವರೆಗೂ ವ್ಯವಸ್ಥೆ ಅಲುಗಾಡಲು ಅವಕಾಶವಾಗಿರಲಿಲ್ಲ. ಆದರೆ ಶಾಂತಾರಾಮ ಹೆಗಡೆಯವರಿಗೆ ಯಾವಾಗ  ಆರೋಗ್ಯ ಕೈ ಕೊಟ್ಟಿತೋ ಅಂದಿನಿಂದ ನಿತ್ಯದ ವ್ಯವಹಾರದಲ್ಲಿ ಕೆಲವರ ಹಸ್ತಕ್ಷೇಪ ಆರಂಭವಾಯಿತು. ಅದು ಇದೀಗ ರವೀಶ್ ಹೆಗಡೆ ರಾಜಿನಾಮೆ ನೀಡಿ ಹೊರಹೋಗುವ ಮಟ್ಟಕ್ಕೆ ಬಂದು ನಿಂತಿದೆ ಎನ್ನುವುದು ಹತ್ತಿರದಿಂದ ಸಂಸ್ಥೆಯನ್ನು ನೋಡುತ್ತ ಬಂದವರ ಅಭಿಪ್ರಾಯ.

ರವೀಶ್ ಹೆಗಡೆ ಪ್ರಶ್ನಾತೀತರಲ್ಲ. ಅವರ ಮೇಲೆ ಕೆಲವು ಆರೋಪಗಳಿರುವುದೂ ನಿಜ. ಆದರೆ, ಅದಕ್ಕೆಲ್ಲ ಸೂಕ್ತವಾದ ಪರಿಹಾರವಿದ್ದೇ ಇದೆ. ಆಡಳಿತ ಮಂಡಳಿ ಇರುವುದೇ ಅದಕ್ಕಾಗಿ, ಎಲ್ಲವನ್ನೂ ಹಿಡಿತದಲ್ಲಿಟ್ಟುಕೊಂಡು, ಸೂಕ್ತ ಮಾರ್ಗದರ್ಶನದೊಂದಿಗೆ ಸಂಸ್ಥೆಯನ್ನು ನೌಕರವರ್ಗ ಮುನ್ನಡೆಸುವಂತೆ ಮಾಡಬೇಕಾದ ಜವಾಬ್ದಾರಿಯನ್ನು ನಿರ್ವಹಿಸಬೇಕು. ಅದನ್ನು ಬಿಟ್ಟು ಎಲ್ಲದರಲ್ಲೂ ಹಸ್ತಕ್ಷೇಪ ಮಾಡಲು ಹೊರಟರೆ ಇಡೀ ವ್ಯವಸ್ಥೆಯೇ ಕುಸಿತು ಬೀಳುವ ಅಪಾಯವಿದೆ.

ಈಗ ಟಿಎಸ್ಎಸ್ ಕತೆ ಅಲ್ಲಿಗೆ ಬಂದು ನಿಂತಿದೆ. ಲಕ್ಷಾಂತರ ಜನರು ನಂಬಿರುವ, ವಿಶ್ವಾಸವಿಟ್ಟಿರುವ ಸಂಸ್ಥೆಯೊಂದು ಕೆಲವೇ ಕೆಲವರ ಸ್ವಾರ್ಥಕ್ಕಾಗಿ ಕುಸಿಯಬಾರದು. ಯಾರೂ ಶಾಶ್ವತವಲ್ಲ, ಸಂಸ್ಥೆ ಗಟ್ಟಿಯಾಗರಬೇಕು. ಆಡಳಿತ ಮಂಡಳಿ ತನ್ನ ಇತಿ ಮಿತಿಯಲ್ಲಿ ಎಲ್ಲವನ್ನೂ ನಿಭಾಯಿಸಬೇಕು. ಒಬ್ಬ ವ್ಯಕ್ತಿ ತನ್ನ ಅಗಾಧವಾದ ಜ್ಞಾನದಿಂದ ಸಂಸ್ಥೆಯನ್ನು ಮತ್ತೊಂದು ಮಜಲಿಗೆ ಒಯ್ಯುತ್ತಾನೆಂದರೆ ಅದು ಸಣ್ಣ ಕೆಲಸವಲ್ಲ. ಪ್ರತಿಯೊಬ್ಬರಲ್ಲೂ ಕೆಲವು ಲೋಪ ದೋಷಗಳಿರುತ್ತವೆ. ಆದರೆ ಅದನ್ನೇ ದೊಡ್ಡ ಮಾಡುವ ಬದಲು ತಿದ್ದಿ ಮುನ್ನಡೆಸಬೇಕು. ಟಿಎಸ್ಎಸ್ ಭವಿಷ್ಯದ ದೃಷ್ಟಿಯಿಂದ ಹಿರಿಯರು ಮುಂದಾಗಿ, ಬಂದಿರುವ ಸಮಸ್ಯೆಯನ್ನು ಸರಿಪಡಿಸಬೇಕು. ಎಲ್ಲರೂ ಸಂಸ್ಥೆಗಾಗಿ ಅಹಃ ಬಿಟ್ಟು ರಾಜಿಯಾಗಬೇಕು.

 

ರವೀಶ್ ಹೆಗಡೆಯವರ ಪತ್ರ

 ಪ್ರಿಯ ಸದಸ್ಯರೆ,
ನಾನು ರವೀಶ ಹೆಗಡೆ.
    ಕಳೆದ 17 ವರ್ಷಗಳಿಂದ ನಾನು ನಿಮ್ಮ ನೆಚ್ಚಿನ ಟಿ.ಎಸ್.ಎಸ್ ಸಂಘವನ್ನು ಅಧ್ಯಕ್ಷರಾದ ಶ್ರೀ ಶಾಂತಾರಾಮ ಹೆಗಡೆ ಶೀಗೆಹಳ್ಳಿ ಇವರ ಮಾರ್ಗದರ್ಶನದಲ್ಲಿ  ನಂತರ ಅವರ ಅನಾರೋಗ್ಯ ಕಾಲದಲ್ಲಿ ಕಾರ್ಯಾಧ್ಯಕ್ಷರಾದ ಶ್ರೀ ರಾಮಕೃಷ್ಣ ಹೆಗಡೆ ಕಡವೆ ಇವರುಗಳ ಮಾರ್ಗದರ್ಶನದಲ್ಲಿ ಸಂಘದ ಪ್ರಧಾನ ವ್ಯವಸ್ಥಾಪಕನಾಗಿ ಸಂಘವನ್ನು ಮುನ್ನಡೆಸಿಕೊಂಡು ಬಂದಿದ್ದೇನೆ.
 ಆದರೆ ಕಳೆದ ಎರಡು ವರ್ಷಗಳಿಂದ ಸಂಘದ ನಿರ್ದೇಶಕರುಗಳಾದ ಶಶಾಂಕ್ ಹೆಗಡೆ ಶೀಗೆಹಳ್ಳಿ, ಗಣಪತಿ ರಾಯ್ಸದ್ ಕಲಸಳ್ಳಿ, ಸಿ ಎನ್ ಹೆಗಡೆ ಹೂಡ್ಲಮನೆ ಮತ್ತು ಕೆಲವರು ನಾನು ಸಂಘವನ್ನು ನಡೆಸುತ್ತಿರುವ ರೀತಿಯ ಬಗ್ಗೆ ಪದೇಪದೇ ಆಕ್ಷೇಪ ಎತ್ತಿ ಪ್ರಧಾನ ವ್ಯವಸ್ಥಾಪಕನಾಗಿ ನನ್ನ ದೈನಂದಿನ ನಿರ್ಣಯಗಳಿಗೆ ವ್ಯತಿರಿಕ್ತವಾದ ನಿರ್ದೇಶನಗಳನ್ನು ನೇರವಾಗಿ ನೀಡುತ್ತಿದ್ದು, ಇದರಿಂದ ನೌಕರರ ವರ್ಗದಲ್ಲಿ ಉಂಟಾಗುತ್ತಿರುವ ಗೊಂದಲಕರ ವಾತಾವರಣವನ್ನು ಗಮನಿಸಿ ನಾನು ಸ್ವ ಇಚ್ಛೆಯಿಂದ ಪ್ರಧಾನ ವ್ಯವಸ್ಥಾಪಕ ಹುದ್ದೆಯಿಂದ ಅವಧಿ ಪೂರ್ವ ನಿವೃತ್ತಿ ಪಡೆಯಲು(30-06-2022 ರಿಂದ)ನಿರ್ಣಯಿಸಿದ್ದೇನೆ.
       ಒಂದು ಸಂಸ್ಥೆ ಬೆಳೆಯಲು ಒಂದೇ ನಾಯಕತ್ವ ಇರಬೇಕಾಗಿದ್ದು ಅವಶ್ಯಕವೆಂದು ನಂಬಿರುವ ನಾನು ದೈನಂದಿನ ಆಡಳಿತವನ್ನೂ ತಾವೇ ನಡೆಸಲು ಉತ್ಸುಕರಾಗಿರುವ ಇವರಿಗೆ ಸಂಘವನ್ನು ತಮ್ಮ ಇಚ್ಚೆಯಂತೆ ನಡೆಸಲು ತಡೆಯಾಗಬಾರದು ಎಂದು ಈ ನಿರ್ಧಾರಕ್ಕೆ ಬಂದಿದ್ದೇನೆ.
ಇತ್ತೀಚಿಗೆ ಇವರುಗಳು ನನ್ನ ವೈಯಕ್ತಿಕ ಸರ್ಕಾರಿ ಕೆಲಸಗಳಿಗೂ ಸಹ ತೊಂದರೆ ನೀಡಲು ನೋಡುತ್ತಿರುವರು ಹಾಗು ನೌಕರವರ್ಗ ದಲ್ಲಿ ನಿರ್ದೇಶಕರಿಂದ ಬರುತ್ತಿರುವ ನೇರ ನಿರ್ದೇಶನಗಳಿಂದಾಗಿ ನೌಕರರ ಕಾರ್ಯಕ್ಷಮತೆ, ದಕ್ಷತೆ ಮತ್ತು ಶಿಸ್ತು ನಾಶವಾಗುತ್ತಿರುವುದನ್ನು ಗಮನಿಸಿದ್ದೇನೆ.
  ಅಧ್ಯಕ್ಷರ ಅನಾರೋಗ್ಯದ ನಂತರದ ದಿನಗಳಲ್ಲಿ ಮುಂದಿನ ಅಧ್ಯಕ್ಷರ ಹುದ್ದೆಗೆ ಆಕಾಂಕ್ಷಿಗಳಾಗಿ, ಆಡಳಿತ ಮಂಡಳಿಯಲ್ಲಿ ನಡೆಯುತ್ತಿರುವ ಗುಂಪುಗಾರಿಕೆ, ರಾಜಕೀಯವೂ ಕೂಡ ನನ್ನ ಈ ನಿರ್ಧಾರಕ್ಕೆ ಪ್ರಮುಖ ಕಾರಣವಾಗಿದೆ.
  ಈ ಸಂದರ್ಭದಲ್ಲಿ ನನಗೆ ಇದುವರೆಗೆ ಸಂಸ್ಥೆಯನ್ನು ಮುನ್ನಡೆಸಲು ಪ್ರೋತ್ಸಾಹಿಸಿ, ಎಂದಿಗೂ ಸಲಹೆ ಸೂಚನೆ ನೀಡಿ, ಪ್ರೀತಿಯಿಂದ ಸಹಕರಿಸಿದ ಎಲ್ಲಾ ಸಹೃದಯಿ ಸದಸ್ಯರಿಗೆ ಕೃತಜ್ಞತೆಗಳನ್ನು ಮತ್ತು ಧನ್ಯವಾದಗಳನ್ನು ಅರ್ಪಿಸಬಯಸುತ್ತೇನೆ. ಮತ್ತು ನನ್ನ ಆದರ ಅಭಿಮಾನ ಈ ಸಂಸ್ಥೆಗೆ ಸದಾ ಇದ್ದೆ ಇರುತ್ತದೆ ಎಂದು ತಿಳಿಯಬಯಸುತ್ತೇನೆ
ಇತಿ ತಮ್ಮ ವಿಶ್ವಾಸಿ
ರವೀಶ ಹೆಗಡೆ.
ಪ್ರಧಾನ ವ್ಯವಸ್ಥಾಪಕರು,
ಟಿ.ಎಸ್.ಎಸ್ ಲಿಮಿಟೆಡ್ ಶಿರಸಿ
——————–

ಟಿಎಸ್ಎಸ್ ಆಡಳಿತ ಮಂಡಳಿಯ ಪ್ರಕಟಣೆ

ಮಾನ್ಯ ಸದಸ್ಯರಿಗೆ:
ಟಿಎಸ್ಎಸ್ ಆಡಳಿತ ಮಂಡಳಿಯು ದಿವಂಗತ ಕಡವೆ ಹೆಗಡೆಯವರ ಆಶಯದಂತೆ ಅಡಿಕೆ ಬೆಳೆಗಾರರ ಹಾಗೂ ರೈತರ ಹಿತ ರಕ್ಷಣೆ ಮಾಡುವಲ್ಲಿ ಬದ್ಧವಾಗಿದೆ.
ಸದ್ಯದ ಪರಿಸ್ಥಿತಿಯಲ್ಲಿ ಸಂಘದ ಪ್ರಧಾನ ವ್ಯವಸ್ಥಾಪಕರು ವೈಯಕ್ತಿಕ ಕಾರಣಗಳನ್ನು ನೀಡಿ ಧಿಡೀರ್ ರಾಜೀನಾಮೆಯನ್ನು ಪ್ರಕಟಿಸಿರುವುದು ಹಾಗೂ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರಿಂದ ಈ ಸ್ಪಷ್ಟೀಕರಣದ ಪ್ರಕಟಣೆಯನ್ನು ನೀಡುತ್ತಿದ್ದೇವೆ.
ನಮ್ಮ ಆಡಳಿತ ಮಂಡಳಿಯಲ್ಲಿ ಯಾವುದೇ ಗುಂಪುಗಾರಿಕೆ, ರಾಜಕೀಯ ಇರುವುದಿಲ್ಲಾ ಹಾಗೂ ಆಡಳಿತ ಮಂಡಳಿಯು ಒಟ್ಟಾಗಿ ಸಂಸ್ಥೆಯ ಅಭಿವೃದ್ಧಿಗೆ ಸದಾ ಬದ್ಧವಾಗಿದೆ. ಇದರಿಂದ ಯಾವುದೇ ಸದಸ್ಯರು ಗೊಂದಲಕ್ಕೆ ಈಡಾಗುವ ಅವಶ್ಯಕತೆ ಇರುವುದಿಲ್ಲ. ಎಲ್ಲ ರೈತರ ಮತ್ತು ಸದಸ್ಯರ ಹಾಗೂ ಎಲ್ಲಾ ಸಿಬ್ಬಂದಿಗಳ ರಕ್ಷಣೆ ನಮ್ಮ ಹೊಣೆ.
ನಿಮ್ಮ ಸಹಕಾರ ಸದಾ ನಮ್ಮೊಂದಿಗೆ ಇರುತ್ತದೆ ಎಂದು ಆಶಿಸುವ  ಸಂಘದ ಎಲ್ಲಾ ನಿರ್ದೇಶಕರು.
ಆಡಳಿತ ಮಂಡಳಿ
ಟಿಎಸ್ಎಸ್ ಲಿ.,  ಶಿರಸಿ.
24-06-2022
Home add- Bottom