ಪ್ರೇಮಿಗಳ ದಿನಾಚರಣೆಗೆ ಭಜರಂಗದಳ, ವಿಹೆಚ್ ಪಿ ಅಡ್ಡಿ

ವ್ಯಾಲಂಟೈನ್ಸ್ ಡೇ ಸಂಭ್ರಮಿಸದಂತೆ ಎಚ್ಚರಿಕೆ

ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಇಂದು ವಿಶ್ವಾದ್ಯಂತ ವ್ಯಾಲಂಟೈನ್ಸ್ ಡೇ ಸಂಭ್ರಮ. ಪ್ರೇಮಿಗಳ ದಿನಾಚರಣೆಯ ಸಂಭ್ರಮಕ್ಕೆ ಯುವ ಪ್ರೇಮಿಗಳು ಸಜ್ಜಾಗಿದ್ದರೆ ಮಂಗಳೂರಿನಲ್ಲಿ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಮತ್ತೆ ಕ್ಯಾತೆ ತೆಗೆದಿದೆ. ಪ್ರೇಮಿಗಳ ದಿನಾಚರಣೆ ಆಚರಿಸದಂತೆ ಎಚ್ಚರಿಕೆ ನೀಡಿವೆ.

ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಕಳೆದ ವರ್ಷ ಫೆಬ್ರವರಿ 14ರಂದು ಉಗ್ರರ ಬಾಂಬ್ ದಾಳಿಗೆ 44 ಯೋಧರು ಹುತಾತ್ಮರಾಗಿದ್ದರು. ಅವರ ನೆನಪಿಗೆ ಹುತಾತ್ಮ ದಿನ ಆಚರಿಸುವಂತೆ ಬಜರಂಗದಳ ಕರೆ ನೀಡಿದೆ. ಇದಲ್ಲದೆ ಮಂಗಳೂರು ನಗರದ ಎಲ್ಲಾ ಹೂವು ಮತ್ತು ಗಿಫ್ಟ್ ಸೆಂಟರ್ ಗಳಿಗೆ ಭೇಟಿ ನೀಡಿ, ಪ್ರೇಮಿಗಳ ದಿನಾಚರಣೆಗೆ ಬೆಂಬಲ ನೀಡದಂತೆ ಮನವಿ ಮಾಡಿದ್ದೇವೆ ಎಂದು ವಿಎಚ್‍ಪಿ ಮುಖಂಡ ಸುನೀಲ್ ಕೆ.ಆರ್ ತಿಳಿಸಿದ್ದಾರೆ.

ಆದರೆ ಪ್ರೇಮಿಗಳ ದಿನಾಚರಣೆ ಆಚರಿಸುತ್ತೇವೆ ಎಂದು ಯುವ ಪ್ರೇಮಿಗಳು ಸಿದ್ಧತೆ ನಡೆಸಿದ್ದಾರೆ. ಒಟ್ಟಿನಲ್ಲಿ ಪ್ರೇಮಿಗಳ ದಿನಾಚರಣೆಗೆ ಪ್ರತಿ ವರ್ಷದಂತೆ ಈ ಬಾರಿಯೂ ಬಜರಂಗದಳ ವಿರೋಧ ವ್ಯಕ್ತಪಡಿಸಿದ್ದು, ಭಯ ಮಿಶ್ರಿತ ವಾತವರಣದಲ್ಲಿ ಯುವ ಜೋಡಿಗಳು ಪ್ರೇಮಿಗಳ ದಿನಾಚರಣೆ ಮಾಡುವಂತಾಗಿದೆ.