ಎರಡು ತಿಂಗಳೊಳಗೆ ಎಲ್ಲಾ ಬಾಪೂಜಿ ಸೇವಾ ಕೇಂದ್ರಗಳ ಕಾರ್ಯಾರಂಭ

    ಪ್ರಗತಿವಾಹಿನಿ ಸುದ್ದಿ, ಸುವರ್ಣ ವಿಧಾನ ಸೌಧ, ಬೆಳಗಾವಿ

ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಇರುವ ಬಾಪೂಜಿ ಸೇವಾ ಕೇಂದ್ರಗಳು ಇನ್ನು ಎರಡು ತಿಂಗಳ ಅವಧಿಯೊಳಗಾಗಿ ಇಂಟರ್‌ನೆಟ್ ಸೌಲಭ್ಯಗಳೊಂದಿಗೆ, ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಭೈರೇಗೌಡ ಅವರು ಹೇಳಿದರು.
ರಾಜ್ಯ ವಿಧಾನ ಪರಿಷತ್ತಿನಲ್ಲಿ ಇಂದು ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಬಿ. ಜಿ. ಪಾಟೀಲ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು ಕಲಬುರ್ಗಿ ಜಿಲ್ಲೆಯ ೧೩೬ ಗ್ರಾಮ ಪಂಚಾಯತಿಗಳಲ್ಲಿ ಯಾದಗಿರಿ ಜಿಲ್ಲೆಯ ೯೨ ಗ್ರಾಮ ಪಂಚಾಯತಿಗಳಲ್ಲಿ ಬಾಪೂಜಿ ಸೇವಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಉಳಿದೆಡೆ ಸರಿಪಡಿಸಲಾಗುತ್ತಿದೆ. ಕಲಬುರ್ಗಿ ಜಿಲ್ಲೆಯಲ್ಲಿ ಪ್ರತಿ ಬಾಪೂಜಿ ಸೇವಾ ಕೇಂದ್ರಗಳಲ್ಲಿ ೧೦೦ ರೂ ರಿಂದ ೧೫೦ ರೂ. ಶುಲ್ಕ ಸಂಗ್ರಹವಾಗುತ್ತಿದೆ. ಯಾದಗಿರಿ ಜಿಲ್ಲೆಯಲ್ಲಿ ಪ್ರತಿ ಕೇಂದ್ರಗಳಲ್ಲಿ ೨೦೦ ರೂ ರಿಂದ ೩೫೦ ರೂ. ಶುಲ್ಕ ಸಂಗ್ರಹವಾಗುತ್ತಿದೆ ಎಂದರು.