Athani Takkennavar
Beereshwara13
GIT add4

ಶಾಸಕ ರಮೇಶ್ ಜಾರಕಿಹೊಳಿ, ಕೆ.ಎಸ್.ಈಶ್ವರಪ್ಪ ಗೈರು ಹಾಜರಿಗೆ ಗರಂ ಆದ ಸ್ಪೀಕರ್

ವಿಧಾನಮಂಡಲ ಅಧಿವೇಶನ ಮುಕ್ತಾಯ

KLE1099 Add

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸೆ.12ರಿಂದ ಆರಂಭವಾಗಿದ್ದ ವಿಧಾನಮಂಡಲ ಅಧಿವೇಶನ ಇಂದು ಮುಕ್ತಾಯಗೊಂಡಿದ್ದು, ಕೊನೇ ದಿನವಾದ ಇಂದು ಯಾವುದೇ ವಿಷಯಗಳ ಬಗ್ಗೆ ಸಮರ್ಪಕ ಚರ್ಚೆ ನಡೆಯದೇ ಆಡಳಿತ ಹಾಗೂ ವಿಪಕ್ಷ ಸದಸ್ಯರ ಧರಣಿ, ಗದ್ದಲ-ಕೋಲಾಹಲದಲ್ಲಿಯೇ ಕಲಾಪಗಳು ಬಲಿಯಾಗಿದ್ದು, ಅನಿರ್ಧಿಷ್ಟಾವಧಿಗೆ ಮುಂದೂಡಿಕೆಯಾಗಿವೆ.

ಕಳೆದ 10 ದಿನಗಳಿಂದ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ 16 ವಿಧೇಯಕಗಳು ಮಂಡನೆಯಾಗಿ ಅಂಗಿಕಾರವಾಗಿದ್ದರೆ ವಿಧಾನ ಪರಿಷತ್ ನಲ್ಲಿ 14 ವಿಧೇಯಕಗಳು ಮಂಡನೆಯಾಗಿ ಅಂಗೀಕಾರಗೊಂಡಿವೆ. ಈ ಬಾರಿ ಅಧಿವೇಶನಕ್ಕೆ ಆಡಳಿತ ಪಕ್ಷದ ಬಿಜೆಪಿಯ ಪ್ರಮುಖ ಸದಸ್ಯರೇ ಗೈರು ಹಾಜರಾಗಿದ್ದು ಚುನಾವಣೆ ಹೊಸ್ತಿಲಲ್ಲಿರುವ ಸಂದರ್ಭದಲ್ಲಿ ಅಚ್ಚರಿಗೆ ಕಾರಣವಗಿದೆ. ಅಧಿವೇಶನದುದ್ದಕ್ಕೂ ಬಿಜೆಪಿ ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ, ಕೆ.ಎಸ್.ಈಶ್ವರಪ್ಪ ಸ್ಪೀಕರ್ ಅನುಮತಿಯೂ ಇಲ್ಲದೇ ಸದನಕ್ಕೆ ಗೈರಾಗಿರುವುದು ಕಂಡುಬಂದಿದೆ.

ಕೊನೇ ದಿನದ ಕಲಾಪವಾದ ಇಂದು ವಿಧಾನಸಭೆಯಲ್ಲಿ ಬೆಂಗಳೂರು ಪ್ರವಾಹ, ಪಿಎಸ್ ಐ ಹಗರಣ, ಲಗ್ಗೆರೆ ಭೂ ಕಬಳಿಕೆ, ಬಿಎಂಎಸ್ ಟ್ರಸ್ಟ್, ಜಮೀನು ಅಕ್ರಮ ವಿಚಾರ ಸದನದಲ್ಲಿ ಪ್ರತಿಧ್ವನಿಸಿತು. ಪ್ರಮುಖವಾಗಿ ಬಿಎಂಎಸ್ ಟ್ರಸ್ಟ್ ಅಕ್ರಮದ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡಿದ ಜೆಡಿಎಸ್ ಸದಸ್ಯರು ಸಿಬಿಐಗೆ ತನಿಖೆಗೆ ಆಗ್ರಹಿಸಿದರು. ಅಲ್ಲದೇ ಉನ್ನತ ಶಿಕ್ಷಣ ಇಲಾಖೆಯಲ್ಲಿನ ಭ್ರಷ್ಟಾರದ ಬಗ್ಗೆ ಹೊಣೆಹೊತ್ತು ಸಚಿವ ಅಶ್ವತ್ಥನಾರಾಯಣ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಸದನದಲ್ಲಿ ಧರಣಿ ನಡೆಸಿದರು.

ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆಡಳಿತ ಹಾಗೂ ವಿಪಕ್ಷ ಸದಸ್ಯರನ್ನು ಕರೆದು ಸಂಧಾನ ಸಭೆ ನಡೆಸಿದರು. ಆದರೆ ಬಿಎಂಎಸ್ ಅಕ್ರಮದ ಬಗ್ಗೆ ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ಒಪ್ಪದ ಕಾರಣ ಸಂಧಾನ ಸಭೆ ವಿಫಲವಾಯಿತು. ಈ ಹಿನೆಲೆಯಲ್ಲಿ ವಿಧಾನಸಭೆಯಲ್ಲಿ ಜೆಡಿಎಸ್ ಸದಸ್ಯರು ಮತ್ತೆ ಧರಣಿ ಮುಂದುವರೆಸಿದರು. ಸ್ಪೀಕರ್ ಮಾತಿಗೂ ಕಿವಿಗೊಡದ ಜೆಡಿಎಸ್ ಸದಸ್ಯರು ಸರ್ಕಾರದ ವಿರುದ್ಧ ಪೋಸ್ಟರ್ ಗಳನ್ನು ಹಿಡಿದು ಪ್ರತಿಭಟಿಸಿದರು. ಇದೇ ವೇಳೆ ಕಾಂಗ್ರೆಸ್ ಸದಸ್ಯರು 40% ಕಮಿಷನ್ ವಿರುದ್ಧ ಪೇಸಿಎಂ ಪೋಸ್ಟರ್ ಹಿಡಿದು ಸರ್ಕಾರದ ವಿರುದ್ಧ ಘೋಷಣೆ ಕೂಗಲಾರಂಭಿಸಿದರು. ವಿಪಕ್ಷಗಳ ಗದ್ದಲದ ನಡುವೆಯೂ ಸ್ಪೀಕರ್ ಕಾಗೇರಿ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ವಿಧೇಯಕಗಳ ಮಂಡನೆಗೆ ಸೂಚಿಸಿದ್ದರಿಂದ ಸಿಎಂ ಕೆಲವು ವಿಧೇಯಕಗಳನ್ನು ಮಂಡಿಸಿದರು.

ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಚರ್ಚೆ ನಡೆಸಲು ಬಿಡುತ್ತಿಲ್ಲ. 40% ಕಮಿಷನ್ ಬಗ್ಗೆ ಚರ್ಚಿಸಲು ಕಾಂಗ್ರೆಸ್ ಸದಸ್ಯರಿಗೆ ಅವಕಾಶಾವನ್ನೇ ನೀಡುತ್ತಿಲ್ಲ. ಅಧಿವೇಶನದ ವೇಳೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು ಬಂದಿದ್ದಾರೆ. ಹಾಗಾಗಿ ಕಾಂಗ್ರೆಸ್ ನವರಿಗೆ ಚರ್ಚೆಗೆ ಅವಕಾಶ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆ ಕೂಗಲಾರಂಭಿಸಿದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಸದಸ್ಯರೂ ಸಿದ್ದರಾಮಯ್ಯ ಸರ್ಕಾರದ ಅವಧಿಯ ಹಗರಣಗಳ ಹಾಗೂ ಡಿ.ಕೆ.ಶಿವಕುಮಾರ್ ವಿರುದ್ಧದ ಭ್ರಷ್ಟಾಚಾರದ ಬಗ್ಗೆ ಪೋಸ್ಟರ್ ಹಿಡಿದು ಭ್ರಷ್ಟ ಕಾಂಗ್ರೆಸ್ ಗೆ ಧಿಕ್ಕಾರ ಎಂದು ಘೋಷಣೆ ಕೂಈಗಲಾರಂಭಿಸಿದರು. ಆಡಳಿತ ಹಾಗೂ ವಿಪಕ್ಷ ಸದಸ್ಯರ ಗದ್ದಲ-ಕೋಲಾಹಲದ ನಡುವೆಯೇ ಸ್ಪೀಕರ್ ಕಾಗೇರಿ ವಿಧಾನಸಭಾ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.

ಇತ್ತ ವಿಧಾನಪರಿಷತ್ ಕಲಾಪ ಕೂಡ ಜೆಡಿಎಸ್ ಧರಣಿಗೆ ಬಲಿಯಾಯಿತು. ಬಿಎಂಎಸ್ ಅಕ್ರಮದ ಬಗ್ಗೆ ಪ್ರಸ್ತಾಪಿಸಿದ ಜೆಡಿಎಸ್ ಸದಸ್ಯರು ಸಚಿವ ಅಶ್ವತ್ಥನಾರಾಯಣ ಅವರ ಪೋಸ್ಟರ್ ಹಾಗೂ ಪಿಎಸ್ ಐ ಸ್ಕ್ಯಾಮ್ ಕುರಿತ ಪೋಸ್ಟರ್ ಹಿಡಿದು ಸದನದ ಬಾವಿಗಿಳಿದು ಧರಣಿ ನಡೆಸಿದರು. ಕಾಂಗ್ರೆಸ್ ಸದಸ್ಯರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಗದ್ದಲದ ನಡುವೆಯೂ ಸಭಾಪತಿ ಮಲ್ಕಾಪೂರೆ ಹಲವು ವಿಧೇಯಕಗಳು ಅಂಗೀಕಾರವಾಗಿರುವುದಾಗಿ ಘೋಷಿಸಿದರು. ಬಳಿಕ ಸಭಾಪತಿಗಳು ಪರಿಷತ್ ಕಲಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿದರು.

ಇನ್ನು ಅಧಿವೇಶನ ಮುಕ್ತಾಯಗೊಂಡಿರುವ ಬಗ್ಗೆ ಮಾತನಾಡಿರ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ, ಕೆ.ಎಸ್.ಈಶ್ವರಪ್ಪ ಅಧಿವೇಶನಕ್ಕೆ ಗೈರಾಗಿದ್ದರು. ಗೈರಾಗುವ ಬಗ್ಗೆ ನನಗೆ ಮಾಹಿತಿಯನ್ನೂ ನೀಡಿಲ್ಲ. ಯಾವುದೇ ಸಚಿವರು, ಶಾಸಕರು ಅಧಿವೇಶನದ ವೇಳೆ ಗೈರಾದರೆ ಮಾಹಿತಿ ನೀಡುವುದು ಸಂಪ್ರದಾಯ. ಇನ್ನು ಮುಂದೆಯೂ ಆ ಸಂಪ್ರದಾಯ ಮುಂದುವರೆಯುತ್ತದೆ. ಸ್ಪೀಕರ್ ಆಗಿ ನನಗೆ ಕೊಟ್ಟ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ ಎಂದು ಹೇಳಿದರು.

150 ಪ್ರಶ್ನೆಗಳಿಗೆ ಲಿಖಿತ ರೂಪದಲ್ಲಿ ಉತ್ತರ ಕೊಡಲಾಗಿದೆ. ನಿಯಮ 60ರಲ್ಲಿ ಸೂಚಿಸಿದ್ದ ವಿಷಯಗಳನ್ನು 69ರಡಿ ಚರ್ಚೆ ಮಾಡಲಾಗಿದೆ. ಗಮನ ಸೆಳೆಯುವ ಸೂಚನೆಯಡಿ 857 ಪ್ರಶ್ನೆಗಳು ಬಂದಿದ್ದು, 177 ಪ್ರಶ್ನೆಗಳಿಗೆ ಉತ್ತರ ಕೊಡಲಾಗಿದೆ. ಒಟ್ಟು 12 ಗಂಟೆ 44 ನಿಮಿಷ ಅತಿವೃಷ್ಟಿ ಮೇಲೆ ಚರ್ಚೆ ನಡೆದಿದೆ ಎಂದು ತಿಳಿಸಿದರು.

ಒಪ್ಪಿಗೆ ನೀಡಿದ ಹೈಕಮಾಂಡ್, ಸಚಿವ ಸಂಪುಟ ವಿಸ್ತರಣೆ ಶೀಘ್ರ – CM

ಒಪ್ಪಿಗೆ ನೀಡಿದ ಹೈಕಮಾಂಡ್, ಸಚಿವ ಸಂಪುಟ ವಿಸ್ತರಣೆ ಶೀಘ್ರ – CM

Nivedita Navalgund
You cannot copy content of this page