Advertisement -Home Add

ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು

ಸಿದ್ದರಾಮಯ್ಯರನ್ನು ವಿಪಕ್ಷ ನಾಯಕ ಸ್ಥಾನದಿಂದ ಕೆಳಗಿಳಿಸುವ ಚರ್ಚೆ ನಡೆದಿದೆ ಎಂದ ಆರ್.ಅಶೋಕ್

ಪ್ರಗತಿವಾಹಿನಿ ಸುದ್ದಿ; ತುಮಕೂರು: ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಕಂದಾಯ ಸಚಿವ ಆರ್.ಅಶೋಕ್, ಸಿದ್ದರಾಮಯ್ಯ ಯಾವಾಗ ಜೋತಿಷ್ಯ ಶಾಲೆ ತೆರೆದರೋ, ಯಾವಾಗ ಜೋತಿಷ್ಯ ಕಲಿತರೋ ಗೊತ್ತಿಲ್ಲ, ತಾನೇ ಮತ್ತೆ ಸಿಎಂ ಆಗಿಬಿಡುತ್ತೇನೆ ಎಂದು ಅವರು ಕನಸು ಕಾಣುತ್ತಿದ್ದಾರೆ ಎಂದು ಹೇಳಿದ್ದಾರೆ.

ಶಿರಾ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಪರ ಮತಯಾಚನೆ ಮಾಡಿ ಮಾತನಾಡಿದ ಅವರು, ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ. ಯಡಿಯೂರಪ್ಪನವರು ರಾಜಾಹುಲಿ. ವಿಪಕ್ಷ ನಾಯಕರು ಅನಗತ್ಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರು.

ಸಿದ್ದರಾಮಯ್ಯ ಅವರನ್ನು ವಿಪಕ್ಷ ನಾಯಕನ ಸ್ಥಾನದಿಂದ ಕೆಳಗಿಳಿಸಿ ಡಿ.ಕೆ.ಶಿವಕುಮಾರ್ ಅವರನ್ನು ಆ ಸ್ಥಾನದಲ್ಲಿ ಆಯ್ಕೆ ಮಾಡುತ್ತಾರೆ ಎಂದು ನಮಗೂ ಕೂಡ ದೆಹಲಿಯಿಂದ ಖಚಿತ ಮಾಹಿತಿಗಳು ಲಭ್ಯವಾಗಿವೆ. ಆದರೆ ಇದನ್ನು ಸಿದ್ದರಾಮಯ್ಯ ಒಪ್ಪುತ್ತಿಲ್ಲ. ಡಿಕೆಶಿ ಹಾಗೂ ಸಿದ್ದರಾಮಯ್ಯ ನಡುವೆ ಹೊಂದಾಣಿಕೆಯಿಲ್ಲ ಎಂದು ಗುಡುಗಿದರು.