Advertisement -Home Add

ಕೊವ್ಯಾಕ್ಸಿನ್ ಲಸಿಕೆ ಮಾನವ ಪ್ರಯೋಗ ಆರಂಭ

ಕೊರೊನಾ ವಿರುದ್ಧ ವ್ಯಾಕ್ಸಿನ್ ಕಂಡು ಹಿಡಿಯುತ್ತಿವೆ ದೇಶದ 7 ಕಂಪನಿಗಳು

ಪ್ರಗತಿವಾಹಿನಿ ಸುದ್ದಿ; ಚಂಡೀಗಢ: ದೇಶಾದ್ಯಂತ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಈ ನಡುವೆ ಸೋಂಕು ನಿಯಂತ್ರಣಕ್ಕೆ ವ್ಯಾಕ್ಸಿನ್ ಕಂಡು ಹಿಡಿಯಲಾಗುತ್ತಿದ್ದು, ಈಗಾಗಲೇ ಕೆಲ ಪ್ರಯೋಗಗಳು ಆರಂಭವಾಗಿವೆ.

ಭಾರತ್‌ ಬಯೋಟಿಕ್‌ ಕಂಪನಿ ಕೋವಿಡ್‌ – 19ಗೆ ಕಂಡು ಹಿಡಿದ ‘ಕೊವಾಕ್ಸಿನ್‌ʼ ಲಸಿಕೆಯ ಮಾನವ ಪ್ರಯೋಗ ಹರ್ಯಾಣದಲ್ಲಿ ಆರಂಭವಾಗಿದೆ.

ಈ ಬಗ್ಗೆ ಹರ್ಯಾಣ ಗೃಹ ಮತ್ತು ವಿಜ್ಞಾನ, ತಂತ್ರಜ್ಞಾನ ಸಚಿವರಾಗಿರುವ ಅನಿಲ್ ವಿಜಿ ಟ್ವೀಟ್‌ ಮಾಡಿ ತಿಳಿಸಿದ್ದಾರೆ. ಕೊವಾಕ್ಸಿನ್ ಮಾನವ ಪ್ರಯೋಗವನ್ನು ರೊಹ್ಟಕ್‌ನಲ್ಲಿರುವ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಇಂದು ಆರಂಭಿಸಲಾಯಿತು. ನೊಂದಾಯಿಸಿಕೊಂಡ ಮೂರು ಮಂದಿಯ ಮೇಲೆ ಪ್ರಯೋಗ ನಡೆದಿದೆ. ಲಸಿಕೆ ಅತ್ಯುತ್ತಮವಾಗಿದ್ದು ಎಲ್ಲರೂ ಸಹಿಸಿಕೊಂಡಿದ್ದಾರೆ. ಯಾವುದೇ ಅಡ್ಡ ಪರಿಣಾಮ ಉಂಟಾಗಿಲ್ಲ ಎಂದು ಬರೆದುಕೊಂಡಿದ್ದಾರೆ.

ದೇಶದಲ್ಲಿ ಏಳು ಕಂಪನಿಗಳು ಕೊರೋನಾ ವಿರುದ್ಧದ ಲಸಿಕೆಗಳನ್ನು ಅಭಿವೃದ್ಧಿಪಡಿಸಲು ಮುಂದಾಗುತ್ತಿದ್ದು, ಮಾನವ ಪ್ರಯೋಗಕ್ಕಾಗಿ ಎರಡು ಲಸಿಕೆಗಳು ಅನುಮೋದನೆ ಪಡೆದುಕೊಂಡಿವೆ. ಈ ತಿಂಗಳ ಆರಂಭದಲ್ಲಿ ಅಹಮದಾಬಾದ್‌ ಮೂಲದ ಜಿಯೋಡಸ್‌ ಕಾಡಿಲಾ ಸಂಸ್ಥೆ ಕೋವಿಡ್ -19 ಲಸಿಕೆ ಮಾನವ ಪ್ರಯೋಗಕ್ಕಾಗಿ ಔಷಧ ನಿಯಂತ್ರಕರಿಂದ ಅನುಮೋದನೆ ಪಡೆದುಕೊಂಡಿರುವುದಾಗಿ ತಿಳಿಸಿತ್ತು.

ಹೈದರಾಬಾದ್‌ನ ಭಾರತ್‌ ಬಯೋಟಿಕ್‌ ಕಂಪನಿ ʼಕೊವಾಕ್ಸಿನ್‌ʼ ಹೆಸರಿನಲ್ಲಿ ಲಸಿಕೆ ಕಂಡು ಹಿಡಿದಿದೆ. ಇಂಡಿಯನ್‌ ಕೌನ್ಸಿಲ್‌ ಫಾರ್‌ ಮೆಡಿಕಲ್‌ ರಿಸರ್ಚ್‌(ಐಸಿಎಂಆರ್‌) ಮತ್ತು ರಾಷ್ಟ್ರೀಯ ವೈರಾಲಜಿ ಇನ್‌ಸ್ಟಿಟ್ಯೂಟ್‌(ಎನ್‌ಐವಿ) ಸಹಭಾಗಿತ್ವದಲ್ಲಿ ಲಸಿಕೆಯನ್ನು ಅಭಿವೃದ್ಧಿ ಪಡಿಸಿದೆ.