Advertisement -Home Add
Chandargi Sports School
Wanted Home Add

ನಿಮ್ಮ ಮಗನಾಗಿ ನನ್ನನ್ನು ಸ್ವೀಕಾರ ಮಾಡಿ, ಎಲ್ಲರೂ ಸೇರಿ ಪಕ್ಷ ಕಟ್ಟೋಣ

ಕೆಪಿಸಿಸಿ ನೂತನ ಅಧ್ಯಕ್ಷರಿಂದ ಪ್ರತಿಜ್ಞಾವಿದಿ ಬೋಧನೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನನ್ನ ಮೇಲೆ ಅಪಾರ ನಂಬಿಕೆಯಿಟ್ಟು ನಮ್ಮ ಪಕ್ಷದವರು ನನಗೆ ಇಂದು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಿದ್ದಾರೆ. ನನ್ನ ಪಾಲಿಗೆ ಇದೊಂದು ಐತಿಹಾಸಿಕ ದಿನ. ನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಹಂಬಲವಿಲ್ಲ ಆದರೆ ಸವಾಲನ್ನು ಎದುರಿಸುವ ಸಾಮರ್ಥ್ಯವಿದೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ನಾಯಕರಿಗೆ ಕಾಂಗ್ರೆಸ್ ಪ್ರತಿಜ್ಞಾವಿದಿ ಬೋಧನೆ ಮಾಡಿ ಮಾತನಾಡಿದ ಅವರು, ನನಗೆ ಕೆಪಿಸಿಸಿಯಿಂದ ಯಾವುದೇ ಅಧಿಕಾರದ ಅಥವಾ ಇನ್ನಾವುದೇ ಅಧಿಕಾರದ ಹಂಬಲವೂ ಇರಲಿಲ್ಲ. ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ಮಾಡಿ ನಮ್ಮ ನಾಯಕರು ಈ ಜವಾಬ್ದಾರಿ ನನಗೆ ನೀಡಿದ್ದಾರೆ. ನಾನು ಓರ್ವ ಸಾಮಾನ್ಯ ಕಾರ್ಯಕರ್ತನಂತೆ ಕೆಲಸಗಳನ್ನು ಮಾಡುತ್ತೇನೆ. ಮೊದಲು ನಾನು ಕಾಂಗ್ರೆಸ್ ಕಾರ್ಯಕರ್ತ. ನಂತರ ನನಗೆ ಈ ಸ್ಥಾನ. ನನ್ನ ಮುಂದೆ ದೊಡ್ಡ ಜವಾಬ್ದಾರಿ ಇದೆ. ಅವಕಾಶ ನಮ್ಮ ಮುಂದೆ ಬರಲ್ಲ. ಅವಕಾಶವನ್ನು ನಾವೇ ಸೃಷ್ಟಿಸಿಕೊಳ್ಳಬೇಕು ಎಂದು ದೇವರಾಜ್ ಅರಸರು ನಾನು ವಿದ್ಯಾರ್ಥಿ ನಾಯಕನಿದ್ದಾಗ ಹೇಳಿದ್ದರು. ಅಧಿಕಾರ ಇರಲಿ, ಇಲ್ಲದಿರಲಿ ಪಕ್ಷದ ಪರವಾಗಿ ನಾನು ಕೆಲಸ ಮಾಡಿದ್ದೇನೆ ಎಂದರು.

ಯಾವುದೇ ಸಂದರ್ಭದಲ್ಲಿಯೂ ನಾನು ಯಾರಿಗೂ ದ್ರೋಹ ಮಾಡಿಲ್ಲ. ನಾನು ಇದುವರೆಗೆ ಎದುರಿಸಿದ ಸಮಸ್ಯೆಗಳೆಲ್ಲವೂ ಸ್ವಂತಕ್ಕಲ್ಲ. ನನಗೆ ಅಧಿಕಾರ ಸಿಗದಿದ್ದಾಗಲೂ ಎಂದೂ ಚಕಾರವೆತ್ತದೆ ಕೆಲಸ ಮಾಡಿದ್ದೇನೆ. ಇಂದು ಗಾಂಧಿ ಕುಟುಂಬ ನನಗೆ ನೀಡಿರುವ ಈ ಅವಕಾಶವನ್ನು ನನ್ನ ಕೊನೆಯ ಉಸಿರಿನವರೆಗೂ ಮರೆಯಲು ಸಾಧ್ಯವಿಲ್ಲ ಎಂದಿದ್ದಾರೆ.

ಬಿಜೆಪಿ ನಾಯಕರು ನನ್ನ ವಿರುದ್ಧ ಷಡ್ಯಂತ್ರ ಮಾಡಿ ತಿಹಾರ್ ಜೈಲಿಗೆ ಕಳುಹಿಸಿದ್ದರು. ಇನ್ನುಮುಂದೆ ಡಿ.ಕೆ ಶಿವಕುಮಾರ್ ರಾಜಕೀಯ ಭವಿಷ್ಯವೇ ಅಂತ್ಯ ಎಂದು ಬೀಗಿದ್ದರು. ಆದರೆ ಎಲ್ಲಾ ಸಂಕಷ್ಟದ ದಿನಗಳನ್ನು, ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿ ಇಂದು ಕೆಪಿಸಿಸಿ ಅಧ್ಯಕ್ಷನಾಗಿ ನಿಮ್ಮ ಮುಂದೆ ನಿಂತಿದ್ದೇನೆ. ನಾನು ಜೈಲಿನಲ್ಲಿದ್ದಾಗ ಸೋನಿಯಾ ಗಾಂಧಿಯವರು ಬಂದು ಭೇಟಿಯಾಗಿ ನಿನ್ನೊಂದಿಗೆ ನಾವಿದ್ದೇವೆ ಎಂಬ ಭರವಸೆ, ಧೈರ್ಯ ತುಂಬಿದ್ದರು. ಸೋನಿಯಾಜಿ ಅವರು ನನ್ನ ಮೇಲೆ ಸಂಪೂರ್ಣ ನಂಬಿಕೆಯಿಟ್ಟಿದ್ದಾರೆ. ನಾವೆಲ್ಲರೂ ಒಗ್ಗಟ್ಟಿನಿಂದ ಪಕ್ಷ ಕಟ್ಟಬೇಕಿದೆ. ಐದು ಬೆರಳುಗಳು ಸೇರಿದರೆ ಮಾತ್ರ ಕಾಂಗ್ರೆಸ್ ಚಿಹ್ನೆಗೆ ಅರ್ಥ. ಕಾರ್ಯಕರ್ತರ, ನಾಯಕ ಸಂಪೂರ್ಣ ಬೆಂಬಲ ನನಗೆ ಬೇಕು ಎಂದು ಹೇಳಿದರು.

ನನಗೆ ಯಾವುದೇ ಗುಂಪು, ಜಾತಿ, ಧರ್ಮದ ಮೇಲೆ ನಂಬಿಕೆ ಇಲ್ಲ. ನನಗೆ ಕಾಂಗ್ರೆಸ್ ಧರ್ಮ, ಕಾಂಗ್ರೆಸ್ ಜಾತಿ, ಕಾಂಗ್ರೆಸ್ ಗುಂಪಿನ ಮೇಲೆ ಮಾತ್ರ ನಂಬಿಕೆಯಿದೆ. ಯಾವುದೇ ನಿರ್ಧಾರಗಳನ್ನು ಕೈಗೊಳ್ಳುವಾಗ ನಾನೊಬ್ಬನೇ ವೈಯಕ್ತಿವಾಗಿ ನಿರ್ಧಾರ ಕೈಗೊಳ್ಳುವುದಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ. ಕಾಂಗ್ರೆಸ್ ನಿಜವಾದ ಕಾರ್ಯಕರ್ತರ ಪಕ್ಷ ಎಂದು ತಿಳಿಸಿದರು.

ಯಾರು ಪಕ್ಷ ಬಿಟ್ಟು ಹೋದರೂ ಮತ್ತೆ ಪಕ್ಷ ಕಟ್ಟುವ ಸಾಮರ್ಥ್ಯ ನಮಗಿದೆ. ಯಾರೂ ಹೆದರ ಬೇಕಾಗಿಲ್ಲ. ನನಗೆ ಯಾವುದೇ ಹಿಂಬಾಲಕರು ಬೇಕಾಗಿಲ್ಲ. ಗ್ರಾಮಮಟ್ಟದಲ್ಲಿ ಪಕ್ಷ ಕಟ್ಟೋಣ ಎಂದರು.

ನಿಮ್ಮ ಮಗನಾಗಿ ನನ್ನನ್ನು ಸ್ವೀಕಾರ ಮಾಡಿ, ಎಲ್ಲರೂ ಸೇರಿ ಪಕ್ಷ ಕಟ್ಟೋಣ ಎಂದರು.

(ಡಿ.ಕೆ.ಶಿವಕುಮಾರ ಭಾಷಣ ಮುಂದುವರಿದಿದೆ)