Ghataprabha

ಸ್ಯಾನಿಟೈಸರ್ ಕುಡಿದು 9 ಜನ ಮದ್ಯ ವ್ಯಸನಿಗಳ ಸಾವು

ಆಂಧ್ರಪ್ರದೇಶದಲ್ಲಿ ದುರಂತ ಘಟನೆ

ಪ್ರಗತಿವಾಹಿನಿ ಸುದ್ದಿ; ಹೈದರಾಬಾದ್: ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಮಾಡಲಾಗಿದ್ದ ಲಾಕ್‍ಡೌನ್ ವೇಳೆ ಮಧ್ಯ ಸಿಗದೇ ಮದ್ಯ ವ್ಯಸನಿಗಳು ಸ್ಯಾನಿಟೈಸರನ್ನೇ ಕುಡಿದು 9 ಜನ ಸಾವನ್ನಪ್ಪಿರುವ ದುರಂತ ಆಂಧ್ರಪ್ರದೇಶದ ಪ್ರಕಾಶನ್ ಜಿಲ್ಲೆಯ ಕುರಿಚೆಡು ಪಟ್ಟಣದಲ್ಲಿ ನಡೆದಿದೆ.

ಓರ್ವ ಬುಧವಾರ ಮೃತಪಟ್ಟರೆ, ಮತ್ತಿಬ್ಬರು ಗುರುವಾರ ರಾತ್ರಿ ಹಾಗೂ ಉಳಿದ 6 ಮಂದಿ ಇಂದು ಬೆಳಗ್ಗೆ ಸಾವನ್ನಪ್ಪಿದ್ದಾರೆ. ಇದರಲ್ಲಿ ಮೂವರು ಭಿಕ್ಷುಕರು ಆಗಿದ್ದು, ಉಳಿದವರನ್ನು ಸ್ಥಳೀಯ ಸ್ಲಂ ನಿವಾಸಿಗಳು ಎಂದು ಗುರುತಿಸಲಾಗಿದೆ. ಕಳೆದ ಎರಡು ದಿನಗಳಿಂದ ಸುಮಾರು 20 ಮಂದಿ ಸ್ಯಾನಿಟೈಸರ್ ಕುಡಿದಿದ್ದಾರೆ ಎಂದು ಹೇಳಲಾಗುತ್ತಿದೆ.

ಮೃತರನ್ನು ಅನುಗೊಂಡ ಸ್ರೀನು(25), ಭೋಗೆಮ್ ತಿರುಪತಯ್ಯ(35), ಗುಂಟಕ ರಮಿ ರೆಡ್ಡಿ(60), ಕದಿಯಾಮ್ ರಾಮನಯ್ಯ(28), ರಾಜ ರೆಡ್ಡಿ(65), ರಾಮನಯ್ಯ(65), ಬಾಬು(40), ಚಾರ್ಲೆಸ್(45) ಹಾಗೂ ಅಗಸ್ಟಿನ್(45) ಎಂದು ಗುರುತಿಸಲಾಗಿದೆ.

ಲಾಕ್ ಡೌನ್ ನಿಂದಾಗಿ ಕುರಿಚೆಡುನಲ್ಲಿ ಮದ್ಯದಂಗಡಿಗಳು ಬಂದ್ ಆಗಿದ್ದ ಪರಿಣಾಮ ಮಧ್ಯವ್ಯಸನಕ್ಕೆ ದಾಸರಾಗಿದ್ದ ಹಲವರು ಆಲ್ಕೋಹಾಲ್ ಮಿಶ್ರಿತ ಸ್ಯಾನಿಟೈಸರ್ ಕುಡಿದು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧೀಕ್ಷಕ ಸಿದ್ಧಾರ್ಥ್ ಕೌಶಲ್ ತಿಳಿಸಿದ್ದಾರೆ.