Advertisement -Home Add

ಪತ್ನಿ ಹಾಗೂ ಇಬ್ಬರು ಮಕ್ಕಳನ್ನೇ ಕೊಂದ ಪಾಪಿ ಪತಿ?

ಕುಡಿದ ಅಮಲಿನಲ್ಲಿ ಬಿತ್ತು ಹೆಂಡತಿ ಮಕ್ಕಳ ಹೆಣ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕುಡಿದ ಮತ್ತಿನಲ್ಲಿ ಪತಿ ಮಹಾಶಯನೊಬ್ಬ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ದೆಹಲಿ ಹೊರವಲಯದ ನಿಹಾಲ್ ವಿಹಾರ್ ಫ್ಲಾಟ್‍ನಲ್ಲಿ ನಡೆದಿದೆ.

ಕೊಲೆಯಾದವರನ್ನು 29 ವರ್ಷದ ಪ್ರೀತಿ ಮತ್ತು ಆಕೆಯ 9 ಮತ್ತು 5 ವರ್ಷದ ಮಕ್ಕಳು ಎಂದು ಗುರುತಿಸಲಾಗಿದೆ. ಕೊಲೆ ಬಳಿಕ ಆರೋಪಿ ಗಗನ್ ಎಸ್ಕೇಪ್ ಆಗಿದ್ದು, ಆತನೇ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

ಒಂದು ತಿಂಗಳ ಹಿಂದಷ್ಟೇ ದೆಹಲಿಯ ಶಿವ ಪಾರ್ಕ್ ನಲ್ಲಿರುವ ಫ್ಲಾಟ್ ಗೆ ಈ ಜೋಡಿ ಹೊಸದಾಗಿ ಬಾಡಿಗೆಗೆ ಬಂದಿದ್ದರು. ಕುಡಿತದ ದಾಸನಾಗಿದ್ದ ಗಗನ್ ಪತ್ನಿ ಹಾಗೂ ಮಕ್ಕಳನ್ನು ಹತ್ಯೆ ಮಾಡಿದ್ದಾನೆ ಎಂಬುದು ಪ್ರೀತಿ ಪೋಷಕರ ಆರೋಪ. ಮಹಿಳೆ ಪ್ರೀತಿಯ ಹೊಟ್ಟೆಗೆ ಹಲವು ಬಾರಿ ಚಾಕುವಿನಿಂದ ಇರಿದು ಕೊಲ್ಲಲಾಗಿದೆ.

ಮಗಳ ಕೊಲೆಯ ಬಗ್ಗೆ ಮಾತನಾಡಿರುವ ಪೋಷಕರು, ಪ್ರೀತಿ ಗಂಡ ಗಗನ್ ಕುಡಿತದ ಚಟಕ್ಕೆ ಅಂಟಿಕೊಂಡಿದ್ದ ಅಲ್ಲದೇ ಕುಡಿದು ಬಂದು ಪ್ರೀತಿಗೆ ಹಿಂಸೆ ಕೊಡುತ್ತಿದ್ದ. ಹೀಗಾಗಿ ಆತನೇ ಈ ರೀತಿ ಕ್ರೂರವಾಗಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಎಷ್ಟು ಬಾರಿ ಕರೆ ಮಾಡಿದರು ಪ್ರೀತಿ ಫೋನ್ ತೆಗೆಯಲಿಲ್ಲ. ಆದ ಕಾರಣ ಅಲ್ಲಿಗೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ.

ಪೊಲೀಸರು ಬಂದು ಪರಿಶೀಲಿಸಿದಾಗ ಬೆಡ್‍ರೂಮ್‍ನಲ್ಲಿ ಪ್ರೀತಿ ಮತ್ತು ಇಬ್ಬರು ಮಕ್ಕಳು ರಕ್ತದ ಮಡುವಿನಲ್ಲಿ ಸತ್ತು ಬಿದ್ದಿದ್ದರು. ಪ್ರೀತಿಯ ಹೊಟ್ಟೆಗೆ ಹಲವಾರು ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. 9 ವರ್ಷದ ಮಗುವನ್ನು ಕೈಕಾಲು ಕಟ್ಟಿಹಾಕಲಾಗಿದೆ. ಪಕ್ಕದಲ್ಲೇ 5 ವರ್ಷದ ಮಗು ಕೂಡ ಸಾವನ್ನಪ್ಪಿದೆ. ಆದರೆ ಮನೆಯಲ್ಲಿ ಗಗನ್ ಇರಲಿಲ್ಲ. ಆತ ಎಸ್ಕೇಪ್ ಆಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಅಪರಾಧಕ್ಕೆ ಬಳಸಿದ್ದ ಆಯುಧವನ್ನು ವಶಕ್ಕೆ ಪಡೆಯಲಾಗಿದೆ. ಮೂರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಗಗನ್ ಮತ್ತು ಅವರ ಮನೆಯ ಕೆಲಸಗಾರನ ಮೇಲೆ ಕೊಲೆ ಪ್ರಕರಣ ದಾಖಲಾಗಿದೆ ಎಂದು ದೆಹಲಿ ಹೊರವಲಯದ ಡಿಸಿಪಿ ಎ ಕೋನ್ ತಿಳಿಸಿದ್ದಾರೆ.