ಬಜೆಟ್ ನಲ್ಲಿ ಬೆಳಗಾವಿ -ಕಿತ್ತೂರು -ಧಾರವಾಡ ರೈಲ್ವೆ ಲೈನ್ :988.3 ಕೋಟಿ ರೂ ಅನುದಾನ

ನೈಋತ್ಯ ರೈಲ್ವೆ ವಲಯಕ್ಕೆ ಮೊದಲ ಬಾರಿ ದೊಡ್ಡ ಮೊತ್ತದ ಅನುದಾನ

ಪ್ರಗತಿವಾಹಿನಿ ಸುದ್ದಿ, ನವದೆಹಲಿ -ಬಹು ನಿರೀಕ್ಷಿತ ಬೆಳಗಾವಿ -ಕಿತ್ತೂರು -ಧಾರವಾಡ ನೇರ ರೈಲ್ವೆ ಯೋಜನೆ 2020 -2021ರ ಕೇಂದ್ರ ಬಜೆಟ್ ನಲ್ಲಿ ಸೇರ್ಪಡೆಯಾಗಿದೆ. ಯೋಜನೆಗಾಗಿ ಕೇಂದ್ರ ಸರಕಾರ 988.3 ಕೋಟಿ ರೂ. ಕಾಯ್ದಿರಿಸಿದೆ.

ಬೆಳಗಾವಿಯಿಂದ ಖಾನಾಪುರ, ಅಳ್ನಾವರ ಮೂಲಕ ಇರುವ ರೈಲ್ವೆ ಮಾರ್ಗವನ್ನು ನೇರವಾಗಿ ಕಿತ್ತೂರು ಮೂಲಕ ಮಾಡಬೇಕೆನ್ನುವ ಬೇಡಿಕೆ ಬಹಳ ವರ್ಷದಿಂದ ಇತ್ತು. ಈಗಿನ ಕೇಂದ್ರ ಸಚಿವ ಸುರೇಶ ಅಂಗಡಿ ಕೂಡ ಈ ಹಿಂದೆ ಹಲವು ಬಾರಿ ಈ ಬಗ್ಗೆ ಬೇಡಿಕೆ ಇಟ್ಟಿದ್ದರು.

ಕೆಲ ತಿಂಗಳ ಹಿಂದೆ ಸುರೇಶ ಅಂಗಡಿ ಕೇಂದ್ರ ರೈಲ್ವೆಮಂತ್ರಿಯಾಗುತ್ತಿದ್ದಂತೆ ಈ ಮಾರ್ಗದ ಸಮೀಕ್ಷೆಗೆ ಸೂಚಿಸಿದ್ದರು. ಇದೀಗ ಕೇಂದ್ರ ಬಜೆಟ್ ನಲ್ಲಿ ಈ ಮಾರ್ಗವನ್ನು ಸೇರಿಸುವಲ್ಲಿ ಸುರೇಶ ಅಂಗಡಿ ಯಶಸ್ವಿಯಾಗಿದ್ದಾರೆ.

Nirani -Senitiser1

ಇದರ ಜೊತೆಗೆ ಈಗಾಗಲೆ ನಡೆಯುತ್ತಿರುವ ಹಲವಾರು ಕಾಮಗಾರಿಗಳಿಗೆ ಕೂಡ ಬಜೆಟ್ ನಲ್ಲಿ ಹಣ ಕಾಯ್ದಿರಿಸಲಾಗಿದೆ. ರಾಯುರ್ಗ -ತುಮಕೂರು 170 ಕೋಟಿ ರೂ., ಬಾಗಲಕೋಟೆ -ಕುಡಚಿ 37 ಕೋಟಿ ರೂ, ತುಮಕೂರು -ಚಿತ್ರದುರ್ಗ -ದಾವಣಗೇರೆ 128 ಕೋಟಿ ರೂ., ಗದಗ -ವಾಡಿ 156 ಕೋಟಿ ರೂ., ಶಿವಮೊಗ್ಗ -ಶಿಕಾರಿಪುರ -ರಾಣೆಬೆನ್ನೂರು 10 ಕೋಟಿ ರೂ. ಕಾಯ್ದಿರಿಸಲಾಗಿದೆ.

ಹೊಸಪೇಟೆ -ಹುಬ್ಬಳ್ಳಿ -ಲೋಂಡಾ -ತಿನೈಘಾಟ್ -ವಾಸ್ಕೋಡಗಾಮಾ ಮಾರ್ಗ ಡಬ್ಲಿಂಗ್ ಗೆ 225 ಕೋಟಿ ರೂ., ಹೊಟಗಿ -ಕೂಡ್ಗಿ -ಗದಗ 200 ಕೋಟಿ ರೂ., ಯಲಹಂಕ -ಪೆನುಕೊಂಡಾ 155 ಕೋಟಿ ರೂ., ಹುಬ್ಬಳ್ಳಿ -ಚಿಕ್ಕಜಾಜೂರು 171 ಕೋಟಿ ರೂ. ಅರಸಿಕೆರೆ -ತುಮಕೂರು 202 ಕೋಟಿ ರೂ., ಯಶವಂತಪುರ -ಚನ್ನಸಂದ್ರ 5 ಕೋಟಿ ರೂ., ಪೆನುಕೊಂಡಾ -ಧರ್ಮಾವರಂ 20 ಕೋಟಿ ರೂ., ಬೈಯಪ್ಪನಳ್ಳಿ -ಹೊಸೂರು 5 ಕೋಟಿ ರೂ. ಗಳನ್ನು ಡಬ್ಲಿಂಗ್ ಕಾಮಗಾರಿಗೆ ಕಾಯ್ದಿರಿಸಲಾಗಿದೆ.

ಈ ಬಾರಿ ಬಜೆಟ್ ನಲ್ಲಿ ನೈಋತ್ಯ ರೈಲ್ವೆ ವಲಯ ಮೊಟ್ಟ ಮೊದಲ ಬಾರಿಗೆ ಇಷ್ಟು ದೊಡ್ಡ ಮೊತ್ತದ ಅನುದಾನ ಪಡೆದುಕೊಂಡಿದೆ.  2709 ಕೋಟಿ ರೂ. ಕೇಂದ್ರದ ಅನುದಾನ ಹಾಗೂ  786 ಕೋಟಿ ರೂ. ರಾಜ್ಯದ ಅನುದಾನ ಸೇರಿ ಒಟ್ಟೂ  3495 ರೂ. ಸಿಕ್ಕಿದೆ. ಸಚಿವ ಸುರೇಶ ಅಂಗಡಿಯವರ ವಿಶೇಷ ಪ್ರಯತನದಿಂದಾಗಿ ಇದು ಸಾಧ್ಯವಾಗಿದೆ.