GIT add 2024-1
Laxmi Tai add
Beereshwara 33

ರಮೇಶ ಜಾರಕಿಹೊಳಿ ವಿರುದ್ಧ ಎಚ್ಡಿಕೆ ವಾಗ್ದಾಳಿ: ಸೋಮವಾರ ದೇವೇಗೌಡ ಆಗಮನ

ಸೋಮವಾರ ಗೋಕಾಕ ಮತಕ್ಷೇತ್ರದಲ್ಲಿ ದೇವೇಗೌಡ ಪ್ರವಾಸ

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ, ಗೋಕಾಕ:  ರೈತರ ಮತ್ತು ಸಾರ್ವಜನಿಕರ ಹಣ ಲೂಟಿ ಮಾಡಿ ಸಾಹುಕಾರರಾಗಿರುವ ಗೋಕಾಕದ ಸಾಹುಕಾರನನ್ನು ಶಾಶ್ವತವಾಗಿ ಅನರ್ಹಗೊಳಿಸುವ ಮೂಲಕ ಗೋಕಾಕ ಕ್ಷೇತ್ರವನ್ನು ಸಾಹುಕಾರರ ಭಯದಿಂದ ಮುಕ್ತಗೊಳಿಸಬೇಕು ಎಂದು ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ರಮೇಶ ಜಾರಕಿಹೊಳಿ ವಿರುದ್ಧ ಹರಿಹಾಯ್ದಿದ್ದಾರೆ.
ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ಅವರ ಪರ ಭಾನುವಾರ ಮತಕ್ಷೇತ್ರದ ಹಿರೇನಂದಿ, ಚಿಕ್ಕನಂದಿ, ಮಮದಾಪೂರ, ಉಪ್ಪಾರಹಟ್ಟಿ, ಮಾಲದಿನ್ನಿ, ಕೊಳವಿ, ಹೂಲಿಕಟ್ಟಿ, ಮಕ್ಕಳಗೇರಿ, ಬೆನಚನಮರಡಿ, ಖನಗಾಂವ, ಅಕ್ಕತಂಗೇರಹಾಳ ಮುಂತಾದ ಗ್ರಾಮಗಳಲ್ಲಿ ದಿನವಿಡಿ ಮತಯಾಚಿಸಿ ಮಾತನಾಡಿದರು.

ರೈತರ ಕಬ್ಬಿನ ಬಾಕಿ ಹಣವನ್ನು ಪಾವತಿಸದೆ ಯಾವ ಮುಖ ಇಟ್ಟುಕೊಂಡು ನಿಮ್ಮ ಮುಂದೆ ಬರುತ್ತಿದ್ದಾರೆ ಎಂಬುದೆ ಅಚ್ಚರಿ. ಈಗ ನಡೆಯುತ್ತಿರುವುದು ಕೇವಲ ಉಪಚುನಾವಣೆಯಲ್ಲ. ಇದೊಂದು ಧರ್ಮ ಯುದ್ಧ.ಈ ಚುನಾವಣೆಯಲ್ಲಿ ಧರ್ಮ ಗೆಲ್ಲಬೇಕು. ಜನರನ್ನು ಭಯಭೀತರನ್ನಾಗಿ ದಬ್ಬಾಳಿಕೆ ನಡೆಸುತ್ತಿರುವ ಸಾಹುಕಾರರ ಸೋಲಾಗಬೇಕು ಎಂದರು.

ಅನರ್ಹರಾಗಿ ಈಗ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ರಮೇಶ ಜಾರಕಿಹೊಳಿಯವರು ನನ್ನ ಸರಕಾರದಲ್ಲಿ ಸಚಿವರಾಗಿದ್ದಾಗ ಗೋಕಾಕ ಕ್ಷೇತ್ರದ ಅಭಿವೃದ್ದಿಗೆ ಕೋಟಿ ಕೋಟಿ ಅನುದಾನ ನೀಡಿದ್ದೇನೆ. ಅನುದಾನ ಬಳಸಿಕೊಂಡು ಕ್ಷೇತ್ರವನ್ನು ಅಭಿವೃದ್ದಿ ಪಡಿಸದೆ ಅರ್ಹತೆ ಇಲ್ಲದ ಆ ಮನುಷ್ಯನಿಗೆ ಮತ ನೀಡಬೇಡಿ ಎಂದು ಮನವಿ ಮಾಡಿದರು.

ರೈತರ ಏಳಿಗೆಗಾಗಿ, ಮತಕ್ಷೇತ್ರದ ಸಮಗ್ರ ಅಭಿವೃದ್ದಿಗಾಗಿ, ಭಯಮುಕ್ತ ಬದುಕಿಗಾಗಿ ಸರಳ ಮತ್ತು ಸಜ್ಜನ ರಾಜಕಾರಣಿ ಅಶೋಕ ಪೂಜಾರಿ ಅವರಿಗೆ ಮತ ನೀಡಬೇಕು ಎಂದು ಕೋರಿದರು.
ನಾನು ಮುಖ್ಯಮಂತ್ರಿಯಾಗಿದ್ದಾಗ ಮಾಡಿರುವ ಸಾಲ ಮನ್ನಾದಿಂದ ಗೋಕಾಕ ಮತಕ್ಷೇತ್ರದ ೩೬ ಸಾವಿರ ರೈತ ಕುಟುಂಬಗಳಿಗೆ ಲಾಭ ದೊರೆತಿದೆ ಎಂದು ತಿಳಿಸಿದ ಅವರು, ಮತಕ್ಷೇತ್ರದ ಯಾವ ಯಾವ ಗ್ರಾಮಕ್ಕೆ ಎಷ್ಟೆಷ್ಟು ಸಾಲ ಮನ್ನಾ ಆಗಿದೆ ಎಂಬುದನ್ನು ವಿವರಿಸಿದರು. ಸಾಲ ಮನ್ನಾದ ಬಗ್ಗೆ ರೈತರ ಪ್ರಶ್ನೆಗಳಿಗೆ ಉತ್ತರಿಸಿದರು.

Emergency Service

ಕೇವಲ ಸಾಲ ಮನ್ನಾ ಅಷ್ಟೆ ಅಲ್ಲ. ವೃದ್ಯಾಪ್ಯ ವೇತನವನ್ನು ಮಾಸಿಕ ೬೦೦ ರಿಂದ ೧೨೦೦ ಕ್ಕೆ ಹೆಚ್ಚಿಸಿದ್ದೇನೆ. ಗರ್ಭೀಣಿಯರ ಆರೈಕೆಗಾಗಿ ೧೨೦೦೦ ರೂ. ನೀಡುವ ಯೋಜನೆಯನ್ನು ಜಾರಿಗೆ ತಂದಿದ್ದೇನೆ. ಬೀದಿ ಬದಿಯ ಬಡ ವ್ಯಾಪಾರಿಗಳನ್ನು ಖಾಸಗಿ ಲೇವಾದೇವಿಯವರ ಮೀಟರ್ ಬಡ್ಡಿಯಿಂದ ಮುಕ್ತಗೊಳಿಸಲು ಬೀದಿ ಬದಿಯ ವ್ಯಾಪಾರಿಗಳಿಗೆ ಸುಲಭದಲ್ಲಿ ಸಾಲ ದೊರೆಯುವ ಯೋಜನೆಯನ್ನು ಜಾರಿಗೆ ತಂದಿದ್ದೇನೆ.

ರೈತ ಪರವಾದ ನನ್ನ ಧ್ವನಿಯನ್ನು ಇನ್ನಷ್ಟು ಗಟ್ಟಿಯಾಗಿಸಲು, ಈ ನಾಡಿನ ಬಡವರ ಸೇವೆ ಮಾಡಲು ಜೆಡಿಎಸ್ ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮೂಲಕ ಇನ್ನಷ್ಟು ಶಕ್ತಿ ನೀಡಬೇಕು ಎಂದು ಮನವಿ ಮಾಡಿದರು.
ಪಕ್ಷದ ಅಭ್ಯರ್ಥಿ ಅಶೋಕ ಪೂಜಾರಿ ಅವರು ಜೋಳಿಗೆ ಹಿಡಿದು ಜನರ ಮತಯಾಚಿಸಿದರು.
ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ, ಮಾಜಿ ಶಾಸಕ ಎನ್.ಎಚ್. ಕೋನರೆಡ್ಡಿ, ಸಯ್ಯದ ಮನ್ಸೂರ, ಭೀಮಪ್ಪ ಗಡಾದ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ನಾಳೆ ದೇವೇಗೌಡ ಮತಯಾಚನೆ

ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಪಕ್ಷದ ಅಭ್ಯರ್ಥಿ ಪರ ಮತ ಯಾಚಿಸಲು  ಸೋಮವಾರ ಗೋಕಾಕ ಮತಕ್ಷೇತ್ರದಲ್ಲಿ ಪ್ರವಾಸ ನಡೆಸಲಿದ್ದಾರೆ.
ಬೆಳಿಗ್ಗೆ ೧೦.೩೦ ಕ್ಕೆ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸುವ ಅವರು ರಸ್ತೆ ಮೂಲಕ ಗೋಕಾಕಿಗೆ ಆಗಮಿಸಲಿದ್ದಾರೆ.  ವಿವಿಧ ಸಮುದಾಯಗಳ ಮುಖಂಡರ ಜೊತೆ ಚರ್ಚೆ ನಡೆಸಲಿದ್ದಾರೆ.
ಚರ್ಚೆಯ ನಂತರ ರಸ್ತೆ ಮಾರ್ಗವಾಗಿ ಮತಕ್ಷೇತ್ರದ ಖನಗಾಂವ ಗ್ರಾಮಕ್ಕೆ ಆಗಮಿಸಿ, ಅಲ್ಲಿ ಮತದಾರರನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ತಿಳಿಸಿದ್ದಾರೆ.

Bottom Add3
Bottom Ad 2