ಮೂರನೇ ಬಾರಿಗೆ ದೆಹಲಿಯಲ್ಲಿ ಆಮ್ ಆದ್ಮಿ ಸರ್ಕಾರ

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕೇಜ್ರಿವಾಲ್ ಗೆ ಭರ್ಜರಿ ಗೆಲುವು

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶ ಬಹುತೇಕ ಪ್ರಕಟವಾಗಿದ್ದು, ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಮೂರನೇ ಬಾರಿಗೆ ರಾಷ್ಟ್ರ ರಾಜಧಾನಿ ಗದ್ದುಗೆಗೇರಿದೆ.

ದೆಹಲಿ ವಿಧಾನಸಭೆಯ 70 ಕ್ಷೇತ್ರಗಳಿಗೆ ಫೆ. 8ರಂದು ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮೂರನೆ ಭಾರಿಗೆ ಗೆಲುವು ಸಾಧಿಸಿದ್ದಾರೆ. ಸಧ್ಯದ ಮಾಹಿತಿ ಪ್ರಕಾರ ಆಮ್ ಆದ್ಮಿ ಪಕ್ಷ 61 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಬಿಜೆಪಿ 9 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಇನ್ನು ಕಾಂಗ್ರೆಸ್ ಶೂನ್ಯ ಸಂಪಾದನೆ ಮಾಡಿದೆ.

ಉಪಮುಖ್ಯಮಂತ್ರಿ ಮನೀಷ್​ ಸಿಸೋಡಿಯಾ ಪಟ್ಪರ್​ ಗಂಜ್​ನಲ್ಲಿ ಕೊನೆಗಳಿಗೆಯಲ್ಲಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ನಾಯಕ ರವೀಂದ್ರ ಸಿಂಗ್​ ನೇಗಿ ಹಾಗೂ ಮನೀಷ್​ ನಡುವೆ ಭಾರೀ ಸ್ಪರ್ಧೆ ಏರ್ಪಟ್ಟಿತ್ತು.

ಕಳೆದ ಚುನಾವಣೆಯಲ್ಲಿ 70 ಕ್ಷೇತ್ರಗಳ ಪೈಕಿ ಆಮ್ ಆದ್ಮಿ 67 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿತ್ತು. ಆದರೆ, ಈ ಬಾರಿ ಚುನಾವಣೆ ಆಪ್ ಕನಿಷ್ಟ 44 ಸ್ಥಾನಗಳಲ್ಲಿ ಗೆಲುವು ದಾಖಲಿಸಿ ಮತ್ತೊಮ್ಮೆ ಬಹುಮತ ಸರ್ಕಾರ ರಚಿಸಲಿದೆ ಎಂದೇ ಮತಗಟ್ಟೆ ಸಮೀಕ್ಷೆಗಳು ಊಹಿಸಿದ್ದವು. ಆದರೆ, ಸಮೀಕ್ಷೆಗಳ ಊಹೆಗೂ ಮೀರಿ ಆಪ್ ಅಧಿಕ ಸ್ಥಾನಗಳನ್ನು ಗೆದ್ದಿದ್ದು, ಅಧಿಕೃತ ಘೋಷಣೆ ಮಾತ್ರ ಬಾಕಿಯಿದೆ.