Advertisement -Home Add

ಆನ್ ಲೈನ್ ಶಿಕ್ಷಣ: ಮಕ್ಕಳಿಗಾಗಿ ಟಿವಿ ಖರೀದಿಗೆ ಮಾಂಗಲ್ಯ ಅಡವಿಟ್ಟ ತಾಯಿ

ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಕ್ಕಳ ಪಾಠ

ಪ್ರಗತಿವಾಹಿನಿ ಸುದ್ದಿ; ಗದಗ: ಕೊರೊನಾ ಭೀತಿಯಿಂದ ಶಾಲೆಗಳು ಆರಂಭವಾಗುತ್ತಿಲ್ಲ. ಆನ್‍ಲೈನ್ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಹಲವಾರು ಬಡ ಕುಟುಂಬಗಳು ಮಕ್ಕಳ ಆನ್ ಲೈನ್ ಶಿಕ್ಷಣಕ್ಕಾಗಿ ಪರಾಡುತ್ತಿದ್ದಾರೆ. ಇಲ್ಲೊಬ್ಬ ತಾಯಿ ತನ್ನ ಚಿನ್ನದ ತಾಳಿಯನ್ನು ಅಡವಿಟ್ಟು ಮಕ್ಕಳ ಆನ್ ಲೈನ್ ಶಿಕ್ಷಣಕ್ಕಾಗಿ ಟಿವಿ ಖರೀದಿ ಮಾಡಿರುವ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ರಡ್ಡೆರ ನಾಗನೂರ ಗ್ರಾಮದಲ್ಲಿ ನಡೆದಿದೆ.

ಇಲ್ಲಿನ ಕಸ್ತೂರಿ ಎಂಬುವವರು ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದು, ಮಕ್ಕಳಿಬ್ಬರು ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ ಇದೀಗ ಕೊರೊನಾದಿಂದಾಗಿ ಶಾಲೆಗಳು ಆರಂಭವಾಗುತ್ತಿಲ್ಲ. ಆದರೆ ಚಂದನ ವಾಹಿನಿಯಲ್ಲಿ ಆನ್ ಲೈನ್ ಶಿಕ್ಷಣ ಆರಂಭವಾಗಿದ್ದು, ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ಪಾಠವನ್ನು ಕೇಳಲು ಶಿಕ್ಷಕರು ಪ್ರತಿದಿನ ಕರೆಮಾಡಿ ಟಿವಿ ನೋಡಿ ಎಂದು ಹೇಳುತ್ತಿದ್ದರು. ಜೊತೆಗೆ ಅದರಲ್ಲಿ ಬರುವ ಪಾಠಗಳ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದ್ದರು. ಆದರೆ ಮನೆಯಲ್ಲಿ ಟಿವಿ ಇಲ್ಲದ ಕಾರಣ ಟಿವಿ ನೋಡಲು ಆಗುತ್ತಿರಲಿಲ್ಲ. ಇದರಿಂದ ಕಸ್ತೂರಿ ಅವರು ಟಿವಿ ಖರೀದಿ ಮಾಡಿದ್ದಾರೆ.

ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಬಯಸಿದ್ದೆ. ಆದರೆ ಟಿವಿಯಲ್ಲಿ ಪಾಠ ಬರುತ್ತಿದ್ದ ಕಾರಣ ಮಕ್ಕಳು ಬೇರೆ ಮನೆಗೆ ಹೋಗಿ ಟಿವಿ ನೋಡುತ್ತಿದ್ದರು. ಆದರೆ ಅವರು ಬೇರೆ ಬೇರೆ ಕಾರ್ಯಕ್ರಮಗಳನ್ನು ನೋಡುತ್ತಿದ್ದರು. ಹೀಗಾಗಿ ಮಕ್ಕಳು ಶಿಕ್ಷಣ ವಂಚಿತರಾಗಬಾರದೆಂದು ಟಿವಿ ಖರೀದಿ ಮಾಡುವ ನಿರ್ಧಾರ ಮಾಡಿದೆ. ಆದರೆ ಗ್ರಾಮದಲ್ಲಿ ಯಾರ ಬಳಿಯೂ ಸಾಲ ಲಭಿಸಿರಲಿಲ್ಲ. ಆದ್ದರಿಂದ ನನ್ನ ಬಳಿ ಇದ್ದ ಮಾಂಗಲ್ಯವನ್ನು ಅಡವಿಟ್ಟು ಟಿವಿ ತಂದಿದ್ದೇನೆ ಎಂದು ಕಸ್ತೂರಿ ತಿಳಿಸಿದ್ದಾರೆ.