ಪುಲ್ವಾಮ ದಾಳಿಗೆ ಒಂದು ವರ್ಷ: ಕೇಂದ್ರಕ್ಕೆ ರಾಹುಲ್ 3 ಪ್ರಶ್ನೆ

ಸೇನಾ ವಾಹನಕ್ಕೆ ಬಾಂಬ್ ಇರಿಸಿದ್ದ ಕಾರ್ ಡಿಕ್ಕಿ ಹೊಡೆಸಿದ್ದ ಉಗ್ರ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಪುಲ್ವಾಮದಲ್ಲಿ ಉಗ್ರರು ದಾಳಿ ನಡೆಸಿ 40 ಯೋಧರನ್ನು ಬಲಿಪಡೆದ ಘಟನೆಗೆ ಇಂದು ಒಂದು ವರ್ಷ. ಹುತಾತ್ಮ ಯೋಧರಿಗೆ ಪ್ರಧಾನಿ ಮೋದಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ರಸ್ತೆಯಲ್ಲಿ ಸಾಗುತ್ತಿದ್ದ ಸೇನಾ ವಾಹನಗಳ ಮೇಲೆ ಉಗ್ರಗಾಮಿಗಳು ಆತ್ಮಾಹುತಿ ದಾಳಿ ನಡೆಸಿದ್ದರು. ಉಗ್ರಗಾಮಿಯೊಬ್ಬ ಕಾರ್​ನಲ್ಲಿ ಬಾಂಬ್ ತುಂಬಿಸಿ ಒಂದು ಸೇನಾ ವಾಹನಕ್ಕೆ ಡಿಕ್ಕಿ ಹೊಡೆದಿದ್ದ. ಘಟನೆಯಲ್ಲಿ 40 ಯೋಧರು ಬಲಿಯಾಗಿದ್ದರು.

ಪುಲ್ವಾಮ ಘಟನೆ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳಿಗೆ ಪರಸ್ಪರ ವಾಗ್ದಾಳಿಗೂ ಕಾರಣವಾಗಿತ್ತು. ಈಗ ಘಟನೆ ನಡೆದು ವರ್ಷ ಕಳೆದ ಬೆನ್ನಲ್ಲೇ ಇದನ್ನ ಪ್ರಸ್ತಾಪಿಸಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಬಿಜೆಪಿಗೆ 3 ಪ್ರಶ್ನೆಗಳನ್ನ ಹಾಕಿದ್ದಾರೆ.

ಪುಲ್ವಾಮ ಉಗ್ರರ ದಾಳಿ ಘಟನೆಯಿಂದ ಯಾರಿಗೆ ಅತಿ ಹೆಚ್ಚು ಲಾಭವಾಗಿದ್ದು ಎಂದು ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಘಟನೆಯನ್ನು ತನಿಖೆಗೆ ಒಳಪಡಿಸಲಾಗಿತ್ತು. ಆ ತನಿಖೆಯ ಕಥೆ ಏನಾಯಿತು? ದಾಳಿಗೆ ಕಾರಣವಾದ ಭದ್ರತಾ ಲೋಪವಾಗಲು ಬಿಜೆಪಿ ಸರ್ಕಾರದಲ್ಲಿ ಯಾರು ಹೊಣೆ ಎಂದು ಮೂರು ಪ್ರಶ್ನೆ ಕೇಳಿದ್ದಾರೆ.