ಪ್ರಗತಿವಾಹಿನಿ ಸುದ್ದಿ, ಅಟ್ಟಾರಿ-ವಾಘಾ
ಅಂತೂ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕಿಸ್ತಾನ ಭಾರತಕ್ಕೆ ಹಸ್ತಾಂತರಿಸಿದೆ.
ರಾತ್ರಿ 9.20ರ ಹೊತ್ತಿಗೆ ಪಾಕಿಸ್ತಾನ ಯೋಧರು ಅಭಿನಂದನ್ ಅವರನ್ನು ಭಾರತದ ಗಡಿ ದಾಟಿಸಿದರು. ಮಧ್ಯಾಹ್ನ 4 ಗಂಟೆಯ ಹೊತ್ತಿಗೇ ಹಸ್ತಾಂತರಿಸಬೇಕಿದ್ದ ಪಾಕಿಸ್ತಾನ ಉದ್ದೇಶಪೂರ್ವಕವಾಗಿಯೇ ವಿಳಂಬ ಮಾಡಿ ರಾತ್ರಿಯವರೆಗೂ ಸತಾಯಿಸಿದೆ.
ಈ ಮಧ್ಯೆ ಹಸ್ತಾಂತರಿಸುವ ಮುನ್ನ ಪಾಕಿಸ್ತಾನದ ಪರವಾಗಿ ಹೇಳಿಕೆಗಳನ್ನು ಮಾಡಿಸಿ ಅದರ ವೀಡಿಯೋಗಳನ್ನು ಮಾಡಿಕೊಂಡಿದೆ. ತನಗೆ ಬೇಕಾದಂತೆ ಎಲ್ಲ ರೀತಿಯ ಹೇಳಿಕೆಗಳನ್ನು ಪಡೆದು ದಾಖಲಿಸಿಕೊಂಡಿರುವ ಪಾಕಿಸ್ತಾನ, ತಾನು ನೀಡಿರುವ ಹಿಂಸೆಗಳನ್ನು ಬಹಿರಂಗಪಡಿಸದಂತೆ ತಾಖೀತು ಮಾಡಿದೆ ಎನ್ನಲಾಗಿದೆ.
ಇದೇ ವೇಳೆ ಅಭಿನಂದನ್ ಅವರನ್ನು ಪಾಕಿಸ್ತಾನದಿಂದ ವಾಹನದಲ್ಲಿ ಕರೆತರುವ ವೇಳೆ ಅವರ ಕಣ್ಣಿಗೆ ಬಟ್ಟೆ ಕಟ್ಟಿ, ಕ್ರೂರ ರೀತಿಯಲ್ಲಿ ಕರೆತರಲಾಗುತ್ತಿದೆ ಎನ್ನುವ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಈ ಎಲ್ಲವುಗಳ ವಿವರ ಇನ್ನಷ್ಟೆ ಗೊತ್ತಾಗಬೇಕಿದೆ. ಅಂತೂ ಅಭಿನಂದನ್ ಭಾರತದ ಅಧಿಕಾರಿಗಳ ವಶಕ್ಕೆ ಬಂದಂತಾಗಿದೆ.