Latest

ಅಂಬೇಡ್ಕರ್ ಜಯಂತಿ; ಭವ್ಯ ಮೆರವಣಿಗೆ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಶೋಷಿತ ಹಾಗೂ ದುರ್ಬಲ ವರ್ಗದ ಜನರಿಗೆ ಮಾನವ ಹಕ್ಕುಗಳನ್ನು ಒದಗಿಸಿಕೊಟ್ಟ ಶ್ರೇಯಸ್ಸು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಬೂದೆಪ್ಪ ಹೆಚ್.ಬಿ. ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಯುಕ್ತಾಶ್ರಯದಲ್ಲಿ ಭಾನುವಾರ ನಗರದ ಅಂಬೇಡ್ಕರ್ ಉದ್ಯಾನವನದಲ್ಲಿ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್ ಅಂಬೇಡ್ಕರ್ ಅವರ ೧೨೮ ನೇ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಅಂಬೇಡ್ಕರ್ ಅವರು ಸಾಮಾಜಿಕ ಸಮಾನತೆಗಾಗಿ ಹೋರಾಡಿದ ಮಹಾನ್ ನಾಯಕ, ನೊಂದವರ ದೀನದಲಿತರ ಬದುಕು ಬೆಳಗಿಸಿದ ಸೂರ್ಯ, ಶ್ರೇಷ್ಠ ಅರ್ಥಶಾಸ್ತ್ರಜ್ಞ, ಸಮಾಜ ಸುಧಾರಕ, ವಿಶ್ವರತ್ನ ಮಹಾ ಮಾನವತಾವಾದಿ ಹಾಗೂ ಸಂವಿಧಾನ ಶಿಲ್ಪಿ ಎಂದು ಬಣ್ಣಿಸಿದರು.
ಈ ಸಂದರ್ಭದಲ್ಲಿ ವಿಶೇಷ ಉಪನ್ಯಾಸ ನೀಡಿದ ಡಾ. ವಾಯ್.ಬಿ.ಯಾಕೊಳ್ಳಿ ಅವರು, ಮೌಡ್ಯತೆಯನ್ನು ತೊಲಗಿಸಲು ಶಿಕ್ಷಣವು ಪ್ರಬಲ ಅಸ್ತ್ರವಾಗಬೇಕೆಂದು ಪ್ರತಿಪಾದಿಸಿದ ಡಾ.ಬಿ ಆರ್ ಅಂಬೇಡ್ಕರ್ ಅವರು ಶಿಕ್ಷಣಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿದ್ದರು ಎಂದು ತಿಳಿಸಿದರು.
ಮನುಷ್ಯ ಚಿರಂಜೀವಿಯಾಗಲಾರ. ಆದರೆ ಆತನ ಚಿಂತನೆಗಳು ಶಾಶ್ವತವಾಗಿ ಉಳಿಯುತ್ತವೆ ಎಂದು ಅಭಿಪ್ರಾಯಪಟ್ಟ ಅವರು, ಗಿಡಕ್ಕೆ ನೀರು ಎಷ್ಟು ಮುಖ್ಯವೋ ಅದೇ ರೀತಿಯಾಗಿ ಒಂದು ಚಿಂತನೆಯು ಸಮಾಜದಲ್ಲಿ ಪ್ರಸರಣವಾಗುವುದು ಅಷ್ಟೇ ಮುಖ್ಯ ಎಂದರು.


ಡಾ. ಬಿ.ಆರ್ ಅಂಬೇಡ್ಕರ್ ಅವರ ಜೀವನ, ಧ್ಯೇಯಗಳು, ಚಿಂತನೆಗಳು ನಮಗೆ ಅದಮ್ಯ ಚೇತನ. ಇದನ್ನು ಇಂದಿನ ಯುವಪೀಳಿಗೆ ಅರಿತುಕೊಂಡು ಅಂಬೇಡ್ಕರ್ ಅವರ ಆದರ್ಶ ಪಥದಲ್ಲಿ ನಡೆಯಬೇಕು ಎಂದು ಡಾ.ಯಾಕೊಳ್ಳಿ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ೨೦೧೭-೧೮ ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಬೆಳಗಾವಿ ಹಾಗೂ ಶೈಕ್ಷಣಿಕ ಜಿಲ್ಲೆ ಚಿಕ್ಕೋಡಿಯ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ರಾಮನಗೌಡ ಕನ್ನೊಳ್ಳಿ ಅವರು ಸ್ವಾಗತಿಸಿದರು.
ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳಾದ ಸದಾಶಿವ ಬಡಿಗೇರ ಅವರು ವಂದಿಸಿದರು. ಸುದರ್ಶನ ಉಪ್ಪಾರ ಅವರು ನಿರೂಪಿಸಿದರು.
ಜಿಲ್ಲಾ ಅಂಬೇಡ್ಕರ್ ಅಭಿವೃದ್ಧಿ ನಿಗಮ ದ ವ್ಯವಸ್ಥಾಪಕರಾದ ಬಸವರಾಜ ಚನ್ನಣ್ಣವರ, ಎಸಿಪಿ ಎನ್. ವಿ ಬರಮನಿ, ಮಹಿಳಾ ಮತ್ತು ಮಕ್ಕಳ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ನಿರಗಟ್ಟಿ,  ಗುತ್ತಿಗೆದಾರರಾದ ಮಲ್ಲಿಕಾರ್ಜುನ ರಾಶಿಂಗೆ, ಮಹಾದೇವ ತಳವಾರ ಉಪಸ್ಥಿತರಿದ್ದರು.

ಭಾವಚಿತ್ರ ಪೂಜೆ ಕಾರ್ಯಕ್ರಮ:
ನಗರದ ಡಾ. ಬಿ.ಆರ್ ಅಂಬೇಡ್ಕರ್ ಉದ್ಯಾನವನದಲ್ಲಿ ಮುಂಜಾನೆ ೯:೩೦ ಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಯ ಪೂಜಾ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಸಂಸದ ಸುರೇಶ ಅಂಗಡಿ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕ ಅನಿಲ ಬೆನಕೆ, ಜಿಲ್ಲಾಧಿಕಾರಿ ಆರ್. ವಿಶಾಲ್, ಐಜಿಪಿ ರಾಘವೇಂದ್ರ ಸುಹಾಸ, ಪೊಲೀಸ್ ಆಯುಕ್ತರಾದ ಬಿ.ಎಸ್.ಲೋಕೇಶ್ ಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಸುಧೀರಕುಮಾರ್ ರೆಡ್ಡಿ, ಅಪರ ಜಿಲ್ಲಾಧಿಕಾರಿ ಡಾ.ಎಚ್.ಬಿ.ಬೂದೆಪ್ಪ, ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ. ರಾಜೇಂದ್ರ ಕೆ.ವಿ, ಪಾಲಿಕೆ ಆಯುಕ್ತ ಇಬ್ರಾಹಿಂ ಮೈಗೂರ, ಮಾಜಿ ಶಾಸಕ ಫಿರೋಜ್ ಸೇಠ್, ದಲಿತ ಮುಖಂಡರಾದ ಮಲ್ಲೇಶ ಚೌಗುಲೆ, ಮಲ್ಲಿಕಾರ್ಜುನ ರಾಶಿಂಗೆ, ಮಲ್ಲೇಶ ಕುರಂಗಿ ಹಾಗೂ ಸಮಾಜದ ಪ್ರಮುಖ ಗಣ್ಯವ್ಯಕ್ತಿಗಳು ಸೇರಿದ್ದರು.

ಭಾವಚಿತ್ರದ ಮೆರವಣಿಗೆ :
ನಗರದ ಸಂಬಾಜಿ ವೃತ್ತದಲ್ಲಿ ಮಧ್ಯಾಹ್ನ ೧೨:೩೦ಕ್ಕೆ ಡಾ. ಬಿ.ಆರ್ ಅಂಬೆಡ್ಕರ್ ಅವರ ಭಾವಚಿತ್ರಕ್ಕೆ ಜ್ಯೋತಿ ಬೆಳಗುವ ಮೂಲಕ ಪೂಜೆ ಸಲ್ಲಿಸಿ ಭಾವಚಿತ್ರದ ಭವ್ಯ ಮೆರವಣಿಗೆಗೆ ಜಿಲ್ಲಾಧಿಕಾರಿಗಳಾದ ಡಾ. ವಿಶಾಲ್ ಆರ್ ಅವರು ಚಾಲನೆ ನೀಡಿದರು.
ಪಾಲಿಕೆ ಆಯುಕ್ತರಾದ ಇಬ್ರಾಹಿಂ ಮೈಗೂರ, ಆರಕ್ಷಕ ಮಹನಿರೀಕ್ಷಕರಾದ ರಾಘವೇಂದ್ರ ಸುಹಾಸ, ಬೆಳಗಾವಿ ನಗರ ಪೊಲೀಸ್ ಆಯುಕ್ತರಾದ ಬಿ.ಎಸ್ ಲೋಕೇಶ ಕುಮಾರ್, ದಲಿತ ಸಮಾಜದ ಮುಖಂಡರಾದ ಮಲ್ಲೇಶ ಚೌಗಲೆ, ಮಲ್ಲೇಶ ಕುರಂಗಿ, ಚಲವಾದಿ ಮಹಾಸಭಾ ಜಿಲ್ಲಾಧ್ಯಕ್ಷರಾದ ದುರಗೇಶ ಮೆತ್ರೆ, ಗಣಪಾಲ ಅಗಸಿಮನಿ ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಎಲ್ಲ ಅಧಿಕಾರಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button