Latest

ಅಡಿಕೆ ಬೆಳೆಯ ಕೊಳೆ ರೋಗ ಪರಿಹಾರ ಕ್ರಮಕ್ಕೆ ಪ್ರತ್ಯೇಕ ಸಭೆಗೆ ಸಭಾಧ್ಯಕ್ಷರ ಸಲಹೆ

 

ಪ್ರಗತಿವಾಹಿನಿ ಸುದ್ದಿ, ಸುವರ್ಣ ವಿಧಾನ ಸೌಧ, ಬೆಳಗಾವಿ
ರಾಜ್ಯದ ಮಲೆನಾಡು ಹಾಗೂ ಕರಾವಳಿ ಪ್ರದೇಶದಲ್ಲಿ ಕೊಳೆ ರೋಗದಿಂದ ನಷ್ಟವಾಗಿರುವ ಅಡಿಕೆ ಬೆಳೆ ಪರಿಹಾರ ಕುರಿತಂತೆ ಮುಂದಿನ ವಾರ ಪ್ರತ್ಯೇಕ ಸಭೆ ನಡೆಸಲು ರಾಜ್ಯ ವಿಧಾನ ಸಭೆಯ ಸಭಾಧ್ಯಕ್ಷ ಕೆ. ಆರ್. ರಮೇಶ್‌ಕುಮಾರ್ ಸರ್ಕಾರಕ್ಕೆ ಸಲಹೆ ನೀಡಿದರು.
ಶುಕ್ರವಾರ ಪ್ರಶ್ನೋತ್ತರ ವೇಳೆ ಸದಸ್ಯ ಹರೀಶ್ ಪುಂಜಾ ಅವರ ಪ್ರಶ್ನೆಗೆ ತೋಟಗಾರಿಕಾ ಸಚಿವ ಎಂ. ಸಿ. ಮನಗೂಳಿ ಅವರು ಉತ್ತರಿಸುವ ಸಂದರ್ಭದಲ್ಲಿ ಅಡಿಕೆ ಬೆಳೆಗಾರರ ಸಂಕಷ್ಟ ಕುರಿತಂತೆ ವಿವಿಧ ಸದಸ್ಯರು ಸಭೆಯ ಗಮನಕ್ಕೆ ತಂದಾಗ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿಬೇಕು. ಚರ್ಚೆಗೆ ಅವಕಾಶ ಮಾಡಿಕೊಡಬೇಕೆಂದು ಶಾಸಕಾರದ ಸುನೀಲ್ ಕುಮಾರ್, ಕುಮಾರ್ ಬಂಗಾರಪ್ಪ ಸೇರಿದಂತೆ ಹಲವು ಸದಸ್ಯರು ಒತ್ತಾಯಿಸಿದರು.
ಸದಸ್ಯರ ಮನವಿಗೆ ಸ್ಪಂದಿಸಿದ ರಮೇಶ್ ಕುಮಾರ್ ಅವರು ಅಡಿಕೆ ಬೆಳೆಗಾರರ ಸಂಕಷ್ಟ ಕುರಿತಂತೆ ಮುಂದಿನ ವಾರ ತಮ್ಮ ಕೊಠಡಿಯಲ್ಲಿ ಪ್ರತ್ಯೇಕ ಸಭೆ ನಡೆಸಿ ಚರ್ಚಿಸಿ ಪರಿಹಾರ ಕಂಡು ಹಿಡಿಯಲು ಮುಂದಾಗೋಣ ಎಂದು ಚರ್ಚೆಗೆ ತೆರೆ ಎಳೆದರು.
ತೋಟಗಾರಿಕಾ ಸಚಿವರಾದ ಎಂ.ಸಿ. ಮನಗೋಳಿ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊಳೆ ರೋಗದಿಂದ ಅಡಿಕೆ ಬೆಳೆ ಹಾನಿ ವಿವರ ಹಾಗೂ ಸರ್ಕಾರದ ಪರಿಹಾರ ಕ್ರಮಗಳ ಕುರಿತಂತೆ ವಿವರಿಸುತ್ತಾ ೨೦೧೮-೧೯ ನೇ ಸಾಲಿನಲ್ಲಿ ಅತಿವೃಷ್ಟಿಯಿಂದ ೩೩,೫೯೫ ಹೆಕ್ಟರ್ ಪ್ರದೇಶದ ಅಡಿಕೆ ಬೆಳೆಗೆ ಕೊಳೆ ರೋಗ ವ್ಯಾಪಿಸಿದೆ. ಇದರಿಂದ ೨೫೨ ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ ಎಂದು ವಿವರಿಸಿದರು.
ಅಡಿಕೆ ಬೆಳೆ ಒಳಗೊಂಡಂತೆ ಎಲ್ಲಾ ತೋಟಗಾರಿಕೆ ಬೆಳೆಗಳಿಗೆ ಪರಿಹಾರ ಒದಗಿಸಲು ದಕ್ಷಿಣ ಕನ್ನಡ ಜಿಲ್ಲೆಗೆ ೬೦.೪೭ ಕೋಟಿ ರೂ. ಹಾಗೂ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಪರಿಹಾರ ಒದಗಿಸಲು ೧೭೫.೨೭ ಕೋಟಿ ರೂ. ಅನುದಾನ ಒದಗಿಸಲು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ಪ್ರಸ್ತಾವನೆಯಂತೆ ಹಣ ಬಿಡುಗಡೆಯಾಗಿದೆ ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದರು.
ಕೊಳೆ ರೋಗದ ನಿಯಂತ್ರಣಕ್ಕಾಗಿ ರೈತರಿಗೆ ಪ್ರಾತ್ಯಕ್ಷಿಕೆಯ ವಿವರಗಳನ್ನು ಮಾಧ್ಯಮಗಳ ಮೂಲಕ ಪ್ರಚಾರ ಹಾಗೂ ಕರ ಪತ್ರಗಳ ಮೂಲಕ ಮಾಹಿತಿ ನೀಡಲಾಗುತ್ತಿದೆ. ರೋಗ ನಿಯಂತ್ರಣಕ್ಕೆ ಮೈಲುತುತ್ತು (ಕಾಪರ್ ಸಲ್ಫೇಟ್) ಹಾಗೂ ಇತರ ಸಸ್ಯ ಸಂರಕ್ಷಣಾ ಔಷಧಿಗಳನ್ನು ಖರೀದಿಸಲು ರಾಷ್ಟ್ರೀಯ ತೋಟಗಾರಿಕಾ ಮಿಷನ್ ಅಭಿಯಾನದಡಿ ಪ್ರತಿ ಹೆಕ್ಟರ್‌ಗೆ ೧೨೦೦ ರೂ. ಸಹಾಯಧನ ನೀಡಲಾಗುತ್ತಿದೆ. ಗರಿಷ್ಠ ನಾಲ್ಕು ಎಕರೆವರೆಗೆ ಪ್ರತಿ ರೈತರಿಗೆ ಸಹಾಯಧನ ಒದಗಿಸಲಾಗುತ್ತಿದೆ ತೋಟಗಾರಿಕೆ ಬೆಳೆಗಳ ರೋಗ ಮತ್ತು ಕೀಟ ನಿಯಂತ್ರಣ ಯೋಜನೆ ಅಡಿ ಪ್ರತಿ ಹೆಕ್ಟರ್‌ಗೆ ೭೫೦೦ ರೂ. ಸಾಮಾನ್ಯ ರೈತರಿಗೆ ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ೯೦೦೦ ರೂ. ವರೆಗೆ ಸಹಾಯಧನ ಒದಗಿಸಲಾಗುತ್ತಿದೆ.
ತಾಲೂಕು ಪಂಚಾಯತ್ ಯೋಜನೆ ಅಡಿ ಒಂದು ಹೆಕ್ಟರ್‌ಗೆ ೨೦೦೦ ರೂ ನಂತೆ ಸಹಾಯಧನ ಹಾಗೂ ಶೇಕಡಾ ೩೩ ಕ್ಕಿಂತಲೂ ಹೆಚ್ಚು ಫಸಲು ಹಾನಿಯಾದಲ್ಲಿ ಪ್ರಕೃತಿ ವಿಕೋಪ ಪರಿಹಾರದ ಅಡಿ ಪ್ರತಿ ಹೆಕ್ಟರ್‌ಗೆ ೧೮,೦೦೦ ರೂ. ಗಳನ್ನು ಗರಿಷ್ಠ ಎರಡು ಎಕರೆವರೆಗೆ ನೀಡಲಾಗುತ್ತಿದೆ. ಹವಾಮಾನ ವೈಪರೀತ್ಯದಿಂದ ಅಡಿಕೆ ಬೆಳೆಗಾರರಿಗೆ ಆಗುವ ನಷ್ಟವನ್ನು ಭರಿಸಲು ಬೆಳೆ ವಿಮೆ ಯೋಜನೆ ಅಳವಡಿಸಲಾಗಿದೆ ಎಂದು ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button