Latest

ಅನಾಥವಾಗಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ -ಸಂಕನೂರು

 

 

       ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಕಳೆದ ಮೂರು ತಿಂಗಳಿಂದ ಪದವಿಪೂರ್ವ ಶಿಕ್ಷಣ ಇಲಾಖೆಗೆ ಪೂರ್ಣಾವಧಿ ನಿರ್ದೇಶಕರು ಇಲ್ಲ. 6 ಜಂಟಿ ನಿರ್ದೇಶಕರ, 22 ಉಪ ನಿರ್ದೇಶಕರ ಹುದ್ದೆಗಳೂ ಸಹ ಖಾಲಿ ಇದ್ದು, ಇಲಾಖೆಯಲ್ಲಿ ಅಧಿಕಾರಿಗಳಿಲ್ಲದೇ ಅನಾಥವಾಗಿ ಆಡಳಿತ ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಂಡಿದೆ ಎಂದು ಆರೋಪಿಸಿರುವ ವಿಧಾನಪರಿಷತ್ ಸದಸ್ಯ ಎಸ್.ವ್ಹಿ. ಸಂಕನೂರ,  ಇದರಿಂದ ಸಾವಿರಾರು ಉಪನ್ಯಾಸಕರು, ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯವರು ಹಾಗೂ ವಿದ್ಯಾರ್ಥಿಗಳು ತೊಂದರೆ ಎದುರಿಸುವಂತಾಗಿದೆ. ಆದ್ದರಿಂದ ಕೂಡಲೇ ಪೂರ್ಣಾವಧಿ ನಿರ್ದೇಶಕರನ್ನು ನೇಮಿಸಿ ಇಲಾಖೆಗೆ ಪುನರ್ ಜೀವ ನೀಡಬೇಕು ಎಂದು ಆಗ್ರಹಿಸಿದ್ದಾರೆ.

 

ಈ ಕುರಿತು ಹೇಳಿಕೆ ನೀಡಿರುವ ಅವರು, ಇತ್ತೀಚಿನ ವರ್ಷಗಳಲ್ಲಿ ಪದವಿಪೂರ್ವ ಕಾಲೇಜುಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿರುವುದು ಸಧ್ಯ ರಾಜ್ಯದಲ್ಲಿ1231 ಸರ್ಕಾರಿ ಕಾಲೇಜುಗಳು, 971 ಅನುದಾನಿತ ಕಾಲೇಜುಗಳು ಹಾಗೂ 3194 ಅನುದಾನ ರಹಿತ ಒಟ್ಟು 5396 ಕಾಲೇಜುಗಳಿವೆ. ಪದವಿಪೂರ್ವ ಹಂತದಲ್ಲಿ ಪಿ.ಯು.ಸಿ ಪ್ರಥಮ ವರ್ಷದಲ್ಲಿ 6,49,059, ದ್ವಿತೀಯ ವರ್ಷದಲ್ಲಿ 5,34,467, ಒಟ್ಟು 11,83,526 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದು, ಇವರ ಭವಿಷ್ಯವನ್ನು ನಿರ್ಮಿಸುವಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಮಹತ್ತರ ಪಾತ್ರ ವಹಿಸಬೇಕಾಗಿದೆ.

ಜಿಲ್ಲಾ ಮಟ್ಟದ ಪದವಿಪೂರ್ವ ಶಿಕ್ಷಣ ಇಲಾಖೆ ಆಡಳಿತ ನಿರ್ವಹಿಸಲು ಒಟ್ಟು 36 ಉಪ ನಿರ್ದೇಶಕರ ಹುದ್ದೆಗಳಿದ್ದು, ಇದರಲ್ಲಿ ಕೇವಲ 14 ಉಪ ನಿರ್ದೇಶಕರು ಪೂರ್ಣಾವಧಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಉಳಿದ 22 ಉಪ ನಿರ್ದೇಶಕರ ಹುದ್ದೆಗಳಿಗೆ ಪ್ರಾಚಾರ್ಯರೇ ಕಾರ್ಯನಿರ್ವಾಹಕ ಉಪನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಪದವಿ ಪೂರ್ವ ಶಿಕ್ಷಣ ವ್ಯವಸ್ಥೆಯನ್ನು ನಿಯಂತ್ರಿಸುವುದು ಒಂದು ಸವಾಲಾಗಿ ಪರಿಣಮಿಸಿದೆ.

ಪದವಿಪೂರ್ವ ಶಿಕ್ಷಣದ ಆಡಳಿತ ಸಂಪೂರ್ಣ ಕುಸಿದು ಹೋಗುವ ಪೂರ್ವದಲ್ಲಿ ಮತ್ತು ಬರುವ ಮಾರ್ಚ್ 2019ರ ಪರೀಕ್ಷೆಗಳು ಸುವ್ಯವಸ್ಥಿತ ರೀತಿಯಲ್ಲಿ ನಡೆಯುವ ಹಿನ್ನೆಲೆಯಲ್ಲಿ ಪೂರ್ಣಾವಧಿ ನಿರ್ದೇಶಕರ ನೇಮಕ ಹಾಗೂ 6 ಜಂಟಿ ನಿರ್ದೇಶಕರ, 22 ಉಪ ನಿರ್ದೇಶಕರ ನೇಮಕಾತಿಗೆ ಮುಖ್ಯಮಂತ್ರಿಗಳು ಕ್ರಮ ಜರುಗಿಸಬೇಕು ಎಂದು ಸಂಕನೂರ ಒತ್ತಾಯಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button