Latest

ಅಬಕಾರಿ ಆದಾಯ ಹೆಚ್ಚಳಕ್ಕೆ ಕ್ರಮ : ಹೆಚ್.ಡಿ. ಕುಮಾರಸ್ವಾಮಿ

 

  ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಆರೋಗ್ಯಕ್ಕೆ ಸುರಕ್ಷಿತವಲ್ಲದ ಮದ್ಯ ಸೇವಿಸಿ ಸಾರ್ವಜನಿಕರ ಆರೋಗ್ಯಕ್ಕೆ ಹಾನಿಯಾಗಬಾರದು ಎಂಬ ಸದುದ್ದೇಶದೊಂದಿಗೆ ೧೨ ವರ್ಷಗಳ ಅವರು ಹಿಂದೆ ತಾವೇ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಾರಾಯಿ ಮಾರಾಟವನ್ನು ತಾವು ನಿಷೇಧಿಸಿದ್ದಾಗಿ ತಿಳಿಸಿದ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ರಾಜ್ಯದಲ್ಲಿ ಅಬಕಾರಿ ಆದಾಯವನ್ನು ವೃದ್ಧಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಮೇಲ್ಮನೆಯಲ್ಲಿ ಗುರುವಾರ ಹೇಳಿದರು.
ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯೆ ತೇಜಸ್ವಿನಿ ಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಯವರು ೨೦೧೮-೧೯ ನೇ ಸಾಲಿನಲ್ಲಿ ರಾಜ್ಯದಲ್ಲಿ ಒಟ್ಟು ೧೦,೫೬೬ ವಿವಿಧ ರೀತಿಯ ಮದ್ಯ ಮಾರಾಟ ಸನ್ನದುಗಳು ಕಾರ್ಯನಿರ್ವಹಿಸುತ್ತಿವೆ. ಅನಧಿಕೃತವಾಗಿ ಯಾವ ಅಂಗಡಿಗಳಿಗೂ ಅವಕಾಶ ನೀಡಿಲ್ಲ. ಸದಸ್ಯರಿಗೆ ಅಂತಹ ಮಾಹಿತಿಗಳಿದ್ದರೆ ತಿಳಿಸಿ, ಸರ್ಕಾರ ಕ್ರಮಕೈಗೊಳ್ಳಲಿದೆ. ಕೆಲವು ಚಿಲ್ಲರೆ ವ್ಯಾಪಾರಿಗಳು ಎಂ.ಎಸ್.ಐ.ಎಲ್ ಮಳಿಗೆಗಳಲ್ಲಿ ಸಿಗುವ ಉತ್ತಮ ಗುಣಮಟ್ಟದ ಮದ್ಯ ಖರೀದಿಸಿ ಮಾರಾಟ ಮಾಡುತ್ತಿದ್ದಾರೆ. ಆದರೆ ಸಕೆಂಡ್ಸ್ ಮಟ್ಟದ ಮದ್ಯ ಮಾರಾಟಕ್ಕೆ ಆಸ್ಪದ ನೀಡಿಲ್ಲ ಎಂದರು.
ಕರ್ನಾಟಕ ಅಬಕಾರಿ ೧೯೬೭ರ ನಿಯಮ (೫) ಉಲ್ಲಂಘಿಸಿ ಜನ ವಸತಿ ಶಾಲೆ, ಆಸ್ಪತ್ರೆಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಮಾರಾಟ ಅಂಗಡಿ ಹಾಗೂ ಬಾರ್ ತೆರೆಯಲು ಅವಕಾಶ ನೀಡಿಲ್ಲ. ಮದ್ಯಪಾನ ದುಷ್ಪರಿಣಾಮಗಳ ಕುರಿತು ಕ್ಷೇತ್ರ ಸಿಬ್ಬಂದಿಯಿಂದ ಗ್ರಾಮಾಂತರ ಹಾಗೂ ನಗರ ಪ್ರದೇಶಗಳಲ್ಲಿ ಜನಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಶೈಕ್ಷಣಿಕ ಸಂಸ್ಥೆಗಳ, ವೃತ್ತಿಪರ ಕಾಲೇಜುಗಳಲ್ಲಿ ಮಾದಕ ವಸ್ತುಗಳು ಹಾಗೂ ಮದ್ಯಪಾನದಿಂದ ಆಗುವ ಅನಾಹುತಗಳ ಕುರಿತು ಕಮ್ಮಟಗಳನ್ನು ಏರ್ಪಡಿಸಲಾಗುತ್ತಿದೆ. ಗ್ರಾಮ ಸಭೆಗಳಲ್ಲಿ ಈ ಕುರಿತು ಚರ್ಚಿಸಲಾಗುತ್ತಿದೆ. ಜಿಲ್ಲಾ ಹಾಗೂ ತಾಲೂಕು ಮಟ್ಟದ ಕಾನೂನು ಅರಿವು ಕಾರ್ಯಕ್ರಮಗಳಲ್ಲಿ ತಿಳುವಳಿಕೆ ನೀಡಲಾಗುತ್ತಿದೆ. ಸರ್ಕಾರದಿಂದ ಪೂರೈಕೆ ಆಗುವ ಮದ್ಯದ ಬಾಟಲಿಗಳ ಮೇಲೆ ಮದ್ಯಪಾನ ದುಷ್ಪರಿಣಾಮದ ಕುರಿತು ಶೀರ್ಷಿಕೆಗಳನ್ನು ಮುದ್ರಿಸಲಾಗುತ್ತಿದೆ. ಅಲ್ಲದೆ, ೧೮ ವರ್ಷದೊಳಗಿನ ಅಪ್ರಾಪ್ತ ಮಕ್ಕಳಿಗೆ ಮದ್ಯವನ್ನು ಸರಬರಾಜು ಮಾಡಬಾರದು ಎಂಬ ಬಗ್ಗೆ ಸನ್ನದುದಾರರು ಮತ್ತು ಅವರು ನೌಕರರಿಗೆ ಮನವಿಕೆ ಮಾಡುವ ಕಾರ್ಯ ನಿರಂತರವಾಗಿ ಸಾಗಿದೆ ಎಂದು ಮುಖ್ಯಮಂತ್ರಿ ವಿವರಿಸಿದರು.

ಬೇಸಿಗೆಗೆ ವಿದ್ಯುತ್ ಕೊರತೆಯಾಗುವುದಿಲ್ಲ:
ರಾಜ್ಯದಲ್ಲಿ ಪ್ರಸ್ತುತ ಪ್ರತಿದಿನ ಸರಾಸರಿ ವಿದ್ಯುತ್ ಬಳಕೆ ಪ್ರಮಾಣ ೨೦೮ ಮಿಲಿಯನ್ ಯೂನಿಟ್‌ಗಳಾಗಿದೆ. ಮುಂಬರುವ ಬೇಸಿಗೆ ಹಾಗೂ ಪರೀಕ್ಷಾ ಸಮಯದಲ್ಲಿ ೨೩೮ ಮಿಲಿಯನ್ ಯೂನಿಟ್‌ಗೆ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ. ಕೇಂದ್ರ ಘಟಕಗಳಿಂದ ಮತ್ತು ರಾಜ್ಯದ ಆಂತರಿಕ ಮೂಲದ ವಿದ್ಯುತ್ ಘಟಕಗಳಿಂದ ಘೋಷಣೆಯಾದಂತೆ ವಿದ್ಯುತ್ ಲಭ್ಯವಾದರೆ ಯಾವುದೇ ಕೊರತೆ ಇಲ್ಲದಂತೆ ನಿರಂತರವಾಗಿ ವಿದ್ಯುತ್ ಸರಬರಾಜು ಮಾಡಲು ಯಾವ ತೊಂದರೆಗಳೂ ಇಲ್ಲ ಎಂದು ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ವಿಧಾನಪರಿಷತ್ತಿನಲ್ಲಿ ಇಂದು ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button