ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಅವಕಾಶ ಎಂಬುದು ಯಾವತ್ತೂ ಯಾರಿಗೂ ಕಾಯುತ್ತಾ ಕುಳಿತುಕೊಳ್ಳುವುದಿಲ್ಲ. ಆದ್ದರಿಂದ ಮಹಿಳೆಯರು ತಮಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡು ಸಮಾಜದಲ್ಲಿ ಸದೃಢವಾಗಿ, ಸ್ವಾವಲಂಬಿಯಾಗಿ ತಮ್ಮ ಛಾಪನ್ನು ಮೂಡಿಸಿ ಯಶಸ್ವಿಯಾಗಲು ಪ್ರಯತ್ನಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷೆ ಮಂಗಳಾ ಮೆಟಗುಡ್ ಹೇಳಿದರು.
ಇಲ್ಲಿನ ಕನ್ನಡ ಭವನದಲ್ಲಿ ಆಯುಷ್ಮಾನ್ ಸಂಸ್ಥೆ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ, ಗೌರವ ಸ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಇಂದಿನ ದಿನದಲ್ಲಿ ಹೆಣ್ಣು ಗಂಡೆಂಬ ಲಿಂಗಬೇಧವಿಲ್ಲದೆ ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆ ತನ್ನ ಸಾಧನೆಯನ್ನು ಮಾಡಿ ತೋರಿಸಿದ್ದಾಳೆ. ಹಾಗಾಗಿ ತಾಯಂದಿರು ತಮ್ಮ ಮಗಳನ್ನು ಉನ್ನತ ವಿದ್ಯಾಭ್ಯಾಸ ನೀಡಿ ಉತ್ತಮ ಪ್ರಜೆಯಾಗಿ ಬೆಳೆಸಿ ಕಳುಹಿಸುವ ಗುರುತರವಾದ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು. ಕೇವಲ ಶಿಕ್ಷಣಕ್ಕೆ ಮಾತ್ರವೇ ಆದ್ಯತೆ ನೀಡದೆ ನಮ್ಮ ಸಂಸ್ಕಾರ, ಸಂಸ್ಕೃತಿಗಳ ಬಗ್ಗೆ ಅರಿವು ಮೂಡಿಸಿ ಪಠ್ಯೇತರ ಚಟುವಟಿಕೆಗಳಲ್ಲಿಯೂ ಆಸಕ್ತಿ ಮೂಡಿಸಬೇಕು ಎಂದು ಹೇಳಿದರು.
ಹಿಂದೆಲ್ಲಾ ಮಹಿಳೆಯರಿಗೆ ಅವಕಾಶಗಳ ಕೊರತೆ ಕಾಡುತ್ತಿತ್ತು. ಆದರೆ ಈಗ ಹಾಗಿಲ್ಲ. ಎಲ್ಲಾ ಕ್ಷೇತ್ರಗಳಲ್ಲಿಯೂ ಹೆಣ್ಣು ಮಕ್ಕಳಿಗೆ ಸಾಕಷ್ಟು ಅವಕಾಶವಿದೆ. ಅದನ್ನು ಸದ್ಬಳಕೆ ಮಾಡಿಕೊಳ್ಳುವುದಕ್ಕೆ ಯಾವುದೇ ಹಿಂಜರಿಕೆ, ಕೀಳರಿಮೆ ಪಡಬಾರದು ಎಂದು ಕಿವಿಮಾತು ಹೇಳಿದರು.
ಬೆಳಗಾವಿಯ ಬೇಲಾ ಸಂಘಟನೆಯ ಶೀಥಲ್ ಅವರು ಮಾತನಾಡಿ, ಮಹಿಳೆಯರಿಗಾಗಿಯೇ ಆಯುಷ್ಮಾನ್ ಇಂತಹ ಕಾರ್ಯಕ್ರಮ ಆಯೋಜಿಸಿದ್ದು ಹೆಮ್ಮೆಯ ವಿಚಾರ. ಪ್ರತೀ ವರ್ಷ ಏನಾದರೊಂದು ಹೊಸ ಹೊಸ ಸ್ಪರ್ಧೆಗಳ ಜತೆ ಬೆಳಗಾವಿಗರ ಮನಕ್ಕೆ ಹತ್ತಿರವಾಗುತ್ತಿರುವ ಆಯುಷ್ಮಾನ ಸಾರ್ಥಕ ಸೇವೆ ಮಾಡುತ್ತಿದೆ ಎಂದು ಹೊಗಳಿದರು.
ಆಯುಷ್ಮಾನ್ ಸಂಸ್ಥೆಯ ರೂಪಾಲಿ ಅವರು ಮಾತನಾಡಿ, ಮಹಿಳೆಯರು ಮತ್ತು ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಈ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಕಾರ್ಯಕ್ರಮಕ್ಕೆ ಸಿಕ್ಕಿರುವ ನಿಮ್ಮೆಲ್ಲರ ಸ್ಪಂದನೆ ಮತ್ತು ಪ್ರೀತಿಯಿಂದ ಮನಸಿಗೆ ಖುಷಿಯಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಸ ಯೋಜನೆಗಳನ್ನು ನಿಮ್ಮ ಮುಂದಿಡುವುದಾಗಿ ಭರವಸೆ ನೀಡಿದರು.
ಇದೇ ವೇಳೆ ಮಕ್ಕಳಿಗೆ ಮತ್ತು ಮಹಿಳೆಯರಿಗಾಗಿ ಆಯೋಜಿಸಿದ್ದ ಸ್ಕೆಚ್ ಆರ್ಟ್- ಮೆಹಂದಿ, ಬೆಂಕಿ ಇಲ್ಲದ ಅಡುಗೆ, ಸಂಗೀತ ಗಾಯನ, ರ‍್ಯಾಂಪ್ ವಾಕ್, ನೃತ್ಯ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಲಕ್ಕಿ ಡ್ರಾ ವಿಜೇತರಿಗೆ ಬಹುಮಾನ ಹಂಚಲಾಯಿತು.
(ಪ್ರಗತಿವಾಹಿನಿ ಸುದ್ದಿಗಳನ್ನು ಇತರರೊಂದಿಗೆ ಶೇರ್ ಮಾಡಿ)