Latest

ಅಸಡ್ಡೆಯಿಂದ ಕ್ಯಾನ್ಸರ್‌ಗೆ ತುತ್ತಾಗಬೇಡಿ

ಕೆಎಲ್‌ಇ ಚಾರಿಟೆಬಲ್ ಆಸ್ಪತ್ರೆಯಲ್ಲಿ ವಿಶ್ವ ಕ್ಯಾನ್ಸರ್ ದಿನಾಚರಣೆಯಲ್ಲಿ ಡಾ. ಎಸ್.ಸಿ. ಧಾರವಾಡ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ 
ಕಾಯಿಲೆಗಳ ಬಗ್ಗೆ ಅಗತ್ಯ ಜಾಗೃತಿ ಹೊಂದುವುದರಿಂದ ನಾವು ರೋಗಗಳಿಂದ ದೂರವಿರಲು ಸಾಧ್ಯವಾಗುತ್ತದೆ ಹಾಗೂ ನಮ್ಮ ಸುತ್ತಮುತ್ತಲಿನ ಜನರಿಗೂ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸಲು ಸಹಕಾರಿಯಾಗುತ್ತದೆ. ಆದ್ದರಿಂದ ಕ್ಯಾನ್ಸರ್‌ನಂತಹ ಮಾರಕರೋಗಗಳಿಗೆ ಹೆದರದೆ ಅದರ ಬಗ್ಗೆ ತಿಳಿದುಕೊಂಡು ಉತ್ತಮ ಜೀವನ ಸಾಗಿಸಿ ಎಂದು ಕೆಎಲ್‌ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆ ನಿರ್ದೇಶಕ ಡಾ. ಎಸ್.ಸಿ. ಧಾರವಾಡ ತಿಳಿಸಿದರು.
ನಗರದ ಯಳ್ಳೂರು ರಸ್ತೆಯ ಕೆಎಲ್‌ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯಲ್ಲಿ ವಿಶ್ವ ಕ್ಯಾನ್ಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವದ ಒಟ್ಟು ಜನಸಂಖ್ಯೆಯಲ್ಲಿ ಶೇ.೧೦ರಷ್ಟು ಜನ ಕ್ಯಾನ್ಸರ್ ಪೀಡಿತರಾಗಿದ್ದಾರೆ. ಆದರೆ ಅಕ್ಷರಸ್ಥರಾದ ಇಂದಿನ ಜನರಲ್ಲಿ ಇದರ ಬಗ್ಗೆ ಅಗತ್ಯ ಜಾಗೃತಿ, ಕಾಳಜಿ ಮತ್ತು ಜ್ಞಾನವನ್ನು ಮೂಡಿಸುವುದು ಅಗತ್ಯವಾಗಿದೆ. ಶೇ.೫೦ ರಿಂದ ೭೦ ರಷ್ಟು ಜನ ಕ್ಯಾನ್ಸರ್ ಬಗ್ಗೆ ಅಸಡ್ಡೆ ತೋರುವದರಿಂದ ಅದಕ್ಕೆ ತುತ್ತಾಗುತ್ತಿದ್ದಾರೆ ಎಂಬುದು ಆತಂಕಕಾರಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. 
ಮುಖ್ಯ ಅತಿಥಿ ಯುಎಸ್‌ಎಂ-ಕೆಎಲ್‌ಇ ನಿರ್ದೇಶಕ ಡಾ. ಎಚ್.ಬಿ. ರಾಜಶೇಖರ ಮಾತನಾಡಿ, ವೈದ್ಯಕೀಯ ವೃತ್ತಿಯಲ್ಲಿರುವ ನಾವು ಕ್ಯಾನ್ಸರ್ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಕ್ಯಾನ್ಸರ ಪೀಡಿತರು ವೈದ್ಯರಲ್ಲಿಗೆ ಬಂದಾಗ ಮಾನವೀಯತೆಯಿಂದ ಸ್ವಾಗತಿಸಿ, ಸಾಂತ್ವನ ಹೇಳಿ ಅವರ ಶುಶ್ರೂಷೆ ಮಾಡಿ ಆರೋಗ್ಯಯುತ ಜೀವನ ನಡೆಸುವುದರ ಬಗ್ಗೆ ತಿಳಿಹೇಳಬೇಕು ಎಂದರು.
ಇನ್ನೋರ್ವ ಅತಿಥಿ ಕೆಎಲ್‌ಇ ಹೋಮಿಯೋಪತಿ ಕಾಲೇಜು ಪ್ರಾಂಶುಪಾಲ ಡಾ. ಎಂ.ಎ. ಉಡಚನಕರ ಮಾತನಾಡಿ, ನಮ್ಮ ದಿನನಿತ್ಯದ ಚಟುವಟಿಕೆಗಳು, ಊಟ, ವ್ಯಾಯಾಮ, ವಿಹಾರ, ಚಟಗಳು, ಆಚಾರ ವಿಚಾರಗಳು ನಮ್ಮ ಆರೋಗ್ಯದ ಮೇಲೆ ನೇರ ಪರಿಣಾಮವನ್ನು ಹೊಂದಿವೆ. ಆದ್ದರಿಂದ ನಮ್ಮ ಜೀವನದಲ್ಲಿ ಒಳ್ಳೆಯದನ್ನು ಸ್ವೀಕರಿಸಿ ಕೆಟ್ಟದ್ದನ್ನು ಖಡಾಖಂಡಿತವಾಗಿ ತಿರಸ್ಕರಿಸಬೇಕು ಎಂದು ನುಡಿದರು.
ಸಂಪನ್ಮೂಲ ವ್ಯಕ್ತಿ ಕೆಎಲ್‌ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಸ್ತ್ರೀರೋಗ ಹಾಗೂ ಪ್ರಸೂತಿ ವಿಭಾಗದ ಮುಖ್ಯಸ್ಥೆ ಡಾ. ರಾಜೇಶ್ವರಿ ಕಡಕೋಳ ಸ್ಕ್ರೀನಿಂಗ ಟೆಸ್ಟ ಫಾರ್ ಬ್ರೆಸ್ಟ ಆಂಡ್ ಓವರಿಯನ್ ಕ್ಯಾನ್ಸರ್ ಕುರಿತು ಮಾಹಿತಿ ನೀಡಿದರು. ಹಿರಿಯ ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞ ಡಾ. ಸತೀಶ ಧಾಮನಕರ ಸ್ಕ್ರೀನಿಂಗ್ ಟೆಸ್ಟ ಫಾರ್ ಸರ್ವಿಕ್ಸ್ ಆಂಡ್ ಎಂಡೋಮೆಟ್ರಿಯಂ ಕುರಿತು ಮಾತನಾಡಿದರು. 
ಸಂತೋಷ ಇತಾಪೆ ನಿರೂಪಿಸಿದರು. ಡಾ. ಗೀತಾಂಜಲಿ ತೋಟಗಿ ಸ್ವಾಗತಿಸಿದರು. ಡಾ. ಕೆ.ಎನ್. ಹೋಳಿಕಟ್ಟಿ  ವಂದಿಸಿದರು. 
ವಡಗಾವಿಯ ನಗರಸೇವಕ ಮನೋಹರ ಹಲಗೇಕರ, ಕೆಎಲ್‌ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಹಿರಿಯ ಶಸ್ತ್ರಚಿಕಿತ್ಸಜ್ಞ ಡಾ. ಅಶೋಕ ಪಾಂಗಿ, ನರ್ಸಿಂಗ ಕಾಲೇಜಿನ ಪ್ರಾಂಶುಪಾಲ ವಿಕ್ರಾಂತ ನೇಸರಿ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು, ವಡಗಾವಿ, ಅನಗೋಳ, ಮುತಗಾ ಗ್ರಾಮಗಳ ಆಶಾ ಕಾರ್ಯಕರ್ತೆಯರು, ಮಹಿಳಾ ಮಂಡಳ ಸದಸ್ಯರು ಭಾಗವಹಿಸಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button