ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಇತ್ತೀಚಿಗೆ ಕಂಡು ಬರುತ್ತಿರುವ ಅನೇಕ ಕಾಯಿಲೆಗಳಿಗೆ ನಮ್ಮ ರೋಗ ನಿರೋಧಕ ಶಕ್ತಿ ಕಡಿಮೆಯಾಗಿರುವುದೇ ಪ್ರಮುಖ ಕಾರಣ. ನಮ್ಮ ಬದಲಾದ ಆಹಾರ ಕ್ರಮ, ವ್ಯಾಯಾಮರಹಿತ ಜೀವನ, ಮಾನಸಿಕ ಒತ್ತಡ ಇವೆಲ್ಲ ಮನುಷ್ಯನ ರೋಗ ನಿರೋಧಕ ಶಕ್ತಿ ಕಡಿಮೆಗೊಳಿಸುತ್ತಿವೆ. ಆಹಾರ ಕ್ರಮ ಸರಿಯಾಗಿದ್ದು ಮನಸ್ಸಿನಲ್ಲಿನಲ್ಲಿ ನೆಮ್ಮದಿ ಇದ್ದರೆ ಅನಾರೋಗ್ಯ ನಮ್ಮ ಬಳಿ ಸುಳಿಯದು. ಬದುಕನ್ನು ಒಂದು ಕಲೆಯಾಗಿ ರೂಪಿಸಿಕೊಂಡು ಆಹಾರ, ವ್ಯಾಯಾಮ ಮತ್ತು ಮಾನಸಿಕ ಒತ್ತಡವನ್ನು ನಿಭಾಯಿಸಿಕೊಳ್ಳವುದರ ಮೂಲಕ ಆರೋಗ್ಯಯುತ ಜೀವನ ನಡೆಸಬೇಕು ಎಂದು ಜೆ.ಎನ್. ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಎನ್. ಎಸ್. ಮಹಾಂತಶೆಟ್ಟಿ ಸಲಹೆ ನೀಡಿದರು.
ಅವರು ಇಂದು ನಗರದ ಡಾ. ಸ. ಜ. ನಾಗಲೋಟಿಮಠ ವಿಜ್ಞಾನ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜಾನ ಇಲಾಖೆ, ಕರಾವಿಪ ಬೆಳಗಾವಿ ಜಿಲ್ಲಾ ಸಮಿತಿ ಹಾಗೂ ಡಾ. ಸ. ಜ. ನಾಗಲೋಟಿಮಠ ವಿಜ್ಞಾನ ಕೇಂದ್ರ ಇವರುಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಆರೋಗ್ಯದಿಂದ ಜನಾರೋಗ್ಯದೆಡೆಗೆ ರಾಜ್ಯಮಟ್ಟದ ಜಾಗೃತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಲೇಕ್ ವಿವ್ ಆಸ್ಪತ್ರೆ ನಿರ್ದೇಶಕ ಹಾಗೂ ರಾಜಲಕ್ಷ್ಮಿ ಚಿಲ್ಡ್ರನ್ ಪೌಂಡೇಶನ್‌ನ ಕಾರ್ಯದರ್ಶಿ ಡಾ. ಶಶಿಕಾಂತ ಕುಲಗೋಡ ಮಾತನಾಡಿ ಹಿತವಾದ, ಮಿತವಾದ ಹಾಗೂ ಆಯಾ ಋತುಮಾನಕ್ಕೆ ತಕ್ಕದಾದ ಸೊಪ್ಪು, ತರಕಾರಿ ಹಾಗೂ ಹಣ್ಣುಗಳನ್ನು ಒಳಗೊಂಡ ಆಹಾರ ಕ್ರಮ ಅಳವಡಿಸಿಕೊಂಡರೆ ಉತ್ತಮ ಆರೋಗ್ಯವನ್ನು ಹೊಂದಲು ಸಹಕಾರಿಯಾಗುತ್ತದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಅಧ್ಯಕ್ಷ ಎಸ್. ವ್ಹಿ. ಸಂಕನೂರ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪ್ರಸ್ತುತ ಆರೋಗ್ಯ ಕ್ಷೇತ್ರಕ್ಕೆ ಅತಿ ಕಡಿಮೆ ಹಣವನ್ನು ವಿನಿಯೋಗಿಸುತ್ತಿದ್ದು ಜಿ.ಡಿ.ಪಿ.ಯ ಶೇ. ೫ ರಷ್ಟು ಹಣವನ್ನು ಆರೋಗ್ಯ ಕ್ಷೇತ್ರಕ್ಕೆ ಮೀಸಲಿಡಬೇಕು ಎಂದರು.
ಸಮಾರಂಭದಲ್ಲಿ ರಾಯಚೂರು ನವೋದಯ ವೈದ್ಯಕೀಯ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಡಾ. ಪಿ. ವ್ಹಿ. ಪಾಟೀಲ, ಬೇಸ್ ಕಾರ್ಯದರ್ಶಿ ರಾಜನಂದಾ ಘಾರ್ಗಿ, ಕರಾವಿಪ ಆರೋಗ್ಯ ಸಮಿತಿ ರಾಜ್ಯ ಸಂಯೋಜಕ ಕೌಶಿಕ್ ಪಿ.ಎಸ್. ಉಪಸ್ಥಿತರಿದ್ದರು.
ಬಿ.ಎಂ. ಕಂಕಣವಾಡಿ ಆಯುರ್ವೇದಿಕ್ ವೈದ್ಯಕೀಯ ಮಹಾವಿದ್ಯಾಲಯ ಉಪನ್ಯಾಸಕ ಡಾ. ಅರುಣ ಚೌಗಲೆ ಥೈರೈಡ್ ಮುಂಜಾಗುರಕತೆ, ನಿರ್ವಹನೆ ಮತ್ತು ನಿರ್ಮೂನೆ ವಿಷಯದ ಕುರಿತು, ಜೆ.ಎನ್. ವೈಧೈಕೀಯ ಮಹಾವಿದ್ಯಾಲಯದ ಉಪನ್ಯಾಸಕ ಡಾ. ಅವಿನಾಶ ಕವಿ ಜೀವನ ಶೈಲಿ ಮತ್ತು ರೋಗಗಳು ಎಂಬ ವಿಷಯದ ಕುರಿತು ಹಾಗೂ ಮಹಿಳಾ ಕಲ್ಯಾಣ ಸಂಸ್ಥೆಯ ಸಂಯೋಜಕಿ ಡಾ. ಕೀರ್ತಿ ಚೌಗಲೆ ಅವರು ಆರೋಗ್ಯವೇ ಐಶ್ವರ್ಯ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ