ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಗೊಂದಲಗಳಿಗೆ ಗುರುವಾರ ಸ್ಪಷ್ಟರೂಪ ಸಿಗುವ ಸಾಧ್ಯತೆ ಇದೆ.
ಗುರುವಾರ ವಿಧಾನಮಡಳ ಅಧಿವೇಶನದಲ್ಲಿ ಯಾವುದೇ ಕಲಾಪ ನಡೆಯುವುದಕ್ಕೆ ಬಿಜೆಪಿ ಅವಕಾಶ ಕೊಡುವ ಸಾಧ್ಯತೆ ಕಡಿಮೆ. ಈ ಸರಕಾರಕ್ಕೆ ಬಹುಮತವಿಲ್ಲ, ಮುಂದುವರಿಯಲು ಯಾವುದೇ ನೈತಿಕತೆ ಇಲ್ಲ ಎಂದು ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ.
ಇದೇ ವೇಳೆ ಕಾಂಗ್ರೆಸ್ ತನ್ನ ಕೆಲವು ಶಾಸಕರ ವಿರುದ್ಧ ಕ್ರಮ ತೆಗೆದುಕೊಳ್ಳಬಹುದು. ಕಾಂಗ್ರೆಸ್ ನ 6 ಶಾಸಕರು ರಾಜಿನಾಮೆ ಸಲ್ಲಿಸುವ ಸಾಧ್ಯತೆಯೂ ಇದೆ.
ಹಾಗಾದಲ್ಲಿ ರಾಜ್ಯರಾಜಕೀಯ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಲಿದೆ.
ಈ ಮಧ್ಯೆ, ರಾಜ್ಯದ 10 ಕಾಂಗ್ರೆಸ್-ಜೆಡಿಎಸ್ ಶಾಸಕರು ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿ ವಿರುದ್ಧ ಹರಿಹಾಯಲು ನಿರ್ಧರಿಸಿದ್ದಾರೆ. ತನ್ಮೂಲಕ ರಾಷ್ಟ್ರಮಟ್ಟದಲ್ಲಿ ಬಿಜೆಪಿ ಬಣ್ಣ ಬಯಲು ಮಾಡಲು ಮುಂದಾಗಿದ್ದಾರೆ. ಆದರೆ, ಕರ್ನಾಟಕ ಭವನದಲ್ಲಿ ಪತ್ರಿಕಾಗೋಷ್ಠಿಗೆ ಈವರೆಗೂ ಅನುಮತಿ ನೀಡಲಾಗಿಲ್ಲ. ಇಲಾಖಾ ಪರೀಕ್ಷೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಅವಕಾಶ ನಿರಾಕರಿಸಲಾಗಿದೆ ಎನ್ನಲಾಗುತ್ತಿದೆ. ಹಾಗಾಗಿ ಪತ್ರಿಕಾಗೋಷ್ಠಿ ಅನಿಶ್ಚಿತವಾಗಿದೆ.
ಒಟ್ಟಾರೆ ರಾಜ್ಯ ರಾಜಕೀಯ ಗೊಂದಲ ಇಂದು ಮಹತ್ವದ ತಿರುವು ಪಡೆಯುವ ಸಾಧ್ಯತೆ ಇದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ