ಪ್ರಗತಿವಾಹಿನಿ ಸುದ್ದಿ, ಧಾರವಾಡ
ಧಾರವಾಡದಲ್ಲಿ ಆಯೋಜಿಸಲಾಗಿರುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬೆಳಗ್ಗೆ 11 ಗಂಟೆಗೆ ಉದ್ಘಾಟಿಸಬೇಕಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಧ್ಯಾಹ್ನ 2.30 ಆದರೂ ಬಾರದೆ ಇರುವುದರಿಂದ ಕಾರ್ಯಕ್ರಮ ಆಯೋಜಕರು ಹೈರಾಣಾಗಿದ್ದಾರೆ.
ಬೆಳಗ್ಗೆ ಕನ್ನಡ ಧ್ವಜಾರೋಹಣ, ಸಮ್ಮೇಳನಾಧ್ಯಕ್ಷರ ಮೆರವಣಿಗೆ ಮುಗಿದ ನಂತರ ಸಾಹಿತ್ಯ ಸಮ್ಮೇಳನವನ್ನು ಮುಖ್ಯಮಂತ್ರಿಗಳು ಉದ್ಘಾಟಿಸಬೇಕಿತ್ತು. ಆದರೆ ಮಾರ್ಗಮಧ್ಯೆ ತುಮಕೂರಿಗೆ ತೆರಳಿ ಸಿದ್ದಗಂಗಾ ಶ್ರೀಗಳ ಆರೋಗ್ಯ ವಿಚಾರಿಸಿದ ಕುಮಾರಸ್ವಾಮಿ, ನಿಗದಿತ ಸಮಯಕ್ಕಿಂತ ಮೂವರೆ ಗಂಟೆ ಕಳೆದರೂ ಸಾಹಿತ್ಯ ಸಮ್ಮೇಳನ ಸ್ಥಳಕ್ಕೆ ಆಗಮಿಸಲಿಲ್ಲ.
ಮೆರವಣಿಗೆ ನಂತರ ಸಮ್ಮೇಳನದ ಸರ್ವಾಧ್ಯಕ್ಷರಾಗಿರುವ ಡಾ.ಚಂದ್ರಶೇಖರ ಕಂಬಾರ ಅವರನ್ನು ಪೊಲೀಸ್ ವಾಹನವೊಂದರಲ್ಲಿ ಕೂಡ್ರಿಸಿಕೊಂಡು ವಿಶ್ರಾಂತಿಗೆ ಕರೆದೊಯ್ಯಲಾಗಿದೆ. ಮುಖ್ಯಮಂತ್ರಿ ಬರುವ ಹೊತ್ತಿಗೆ ಅವರನ್ನು ಕರೆದುಕೊಂಡು ಬರಬಹುದು.
ಸಧ್ಯಕ್ಕೆ ಸಾಹಿತ್ಯ ಸಮ್ಮೇಳನದ ಮುಖ್ಯ ವೇದಿಕೆಯನ್ನು ಖಾಲಿ ಬಿಡಲಾಗಿದ್ದು, ಕನ್ನಡದ ಹಾಡುಗಳು ಮೊಳಗುತ್ತಿವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ