ಸಾಲ ಮನ್ನಾ ಯೋಜನೆಗೆ ಪ್ರತ್ಯೇಕ ಅನುದಾನ: ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಕೊರತೆ ಇಲ್ಲ
ಪ್ರಗತಿವಾಹಿನಿ ಸುದ್ದಿ, ಸುವರ್ಣ ವಿಧಾನ ಸೌಧ, ಬೆಳಗಾವಿ
ಸಹಕಾರ ಸಂಘಗಳಲ್ಲಿ ರೈತರ ಕೃಷಿ ಸಾಲ ಮನ್ನಾ ಯೋಜನೆಗೆ ಪ್ರತ್ಯೇಕ ಅನುದಾನ ಇದೆ. ಈ ಯೋಜನೆಯ ಹಿನ್ನೆಲೆಯಲ್ಲಿ ನೀರಾವರಿ ಅಥವಾ ಇತರೆ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನದ ಕೊರತೆ ಇಲ್ಲ ಎಂದು ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.
ಮೇಲ್ಮನೆಯಲ್ಲಿ ಕಲಾಪ ಪ್ರಾರಂಭವಾಗುತ್ತಿದ್ದಂತೆಯೇ ಪ್ರತಿಪಕ್ಷದ ಸದಸ್ಯರು ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳು ಹಾಗೂ ಪ್ರಾದೇಶಿಕ ಅಸಮತೋಲನ ನಿವಾರಣೆ ಕುರಿತು ಚರ್ಚಿಸಲು ಅವಕಾಶ ನೀಡಬೇಕು. ಪ್ರಶ್ನೋತ್ತರ ಕಲಾಪವನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಧರಣಿ ಪ್ರಾರಂಭಿಸಿದರು. ಆಗ ಸದನದಲ್ಲಿ ಉಪಸ್ಥಿತರಿದ್ದ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಪ್ರತಿಕ್ರಿಯಿಸಿ ಮಾತನಾಡುತ್ತಿದ್ದರು.
ಸಾಲಮನ್ನಾ ಯೋಜನೆಯ ಹಿನ್ನೆಲೆಯಲ್ಲಿ ಸರ್ಕಾರ ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳಿಗೆ ಅನುದಾನ ಸ್ಥಗಿತಗೊಳಿಸಿದೆ ಎಂದು ಕೆಲವು ಮಾಧ್ಯಮಗಳಲ್ಲಿ ಸುದ್ದಿಗಳು ಬಿತ್ತರಗೊಂಡಿವೆ. ಆದರೆ, ಇದು ಸತ್ಯಕ್ಕೆ ದೂರವಾಗಿದೆ. ಸಾಲಮನ್ನಾ ಯೋಜನೆಯ ಅನುಷ್ಠಾನದಿಂದ ಇತರೆ ಯಾವುದೇ ಅಭಿವೃದ್ಧಿ ಕಾರ್ಯಗಳೂ ಕುಂಠಿತವಾಗುವುದಿಲ್ಲ. ಉತ್ತರ ಕರ್ನಾಟಕದ ಅಭಿವೃದ್ಧಿ ವಿಷಯದಲ್ಲಿ ಸರ್ಕಾರವು ಪ್ರತಿಪಕ್ಷಗಳಿಗಿಂತಲೂ ಹೆಚ್ಚು ಉತ್ಸುಕವಾಗಿದೆ. ರಾಜ್ಯ ವಿಧಾನ ಮಂಡಲದ ಉಭಯ ಸದನಗಳಲ್ಲಿ ಬರಪರಿಸ್ಥಿತಿ ನಿರ್ವಹಣೆ ಕುರಿತು ವಿಸ್ತೃತ ಚರ್ಚೆಯಾಗಿದೆ. ಕಂದಾಯ ಸಚಿವರು ಎರಡೂ ಸದನಗಳಲ್ಲಿ ಈಗಾಗಲೇ ಸುದೀರ್ಘ ಉತ್ತರ ನೀಡಿದ್ದಾರೆ ಎಂದರು.
ಈ ಹಿಂದೆ 2006 ರಲ್ಲಿ ಅಂದಿನ ಮಹಾರಾಷ್ಟ್ರ ಸರ್ಕಾರವು ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಲು ಒತ್ತಾಯಿಸಿ, ಪ್ರಧಾನಮಂತ್ರಿಯವರ ಬಳಿಗೆ ನಿಯೋಗವನ್ನು ಕರೆದೊಯ್ದು ಮನವಿ ಸಲ್ಲಿಸಿತ್ತು. ಕೆಲವು ಸಂಘಟನೆಗಳು ಕೂಡಾ ಈ ವಿಷಯದಲ್ಲಿ ಪದೇ ಪದೇ ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿದ್ದವು. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬುದನ್ನು ಸರ್ವರಿಗೂ ಸ್ಪಷ್ಟಪಡಿಸುವ ಉದ್ದೇಶದಿಂದ ಕೆಎಲ್ಇ ಸಂಸ್ಥೆಯ ಸಹಕಾರದೊಂದಿಗೆ ಬೆಳಗಾವಿಯಲ್ಲಿ ಪ್ರಪ್ರಥಮ ಬಾರಿಗೆ ರಾಜ್ಯ ವಿಧಾನ ಮಂಡಲದ ಅಧಿವೇಶನ ನಡೆಸಲಾಯಿತು. ನಂತರ ಈ ಭಾಗದಲ್ಲಿ ಪ್ರತಿವರ್ಷ ಚಳಿಗಾಲದ ಅಧಿವೇಶನ ನಡೆಯಲಿ ಎಂಬ ಆಶಯದೊಂದಿಗೆ ಸುವರ್ಣ ವಿಧಾನ ಸೌಧ ನಿರ್ಮಿಸಲಾಯಿತು. ಅಖಂಡ ಕರ್ನಾಟಕ ಸಮಗ್ರವಾಗಿ ಅಭಿವೃದ್ಧಿಯಾಗಬೇಕು ಎಂಬುದೇ ಇದರ ಹಿಂದಿನ ಉದ್ದೇಶವಾಗಿತ್ತು ಎಂದರು.
2002-03ನೇ ಸಾಲಿನಲ್ಲಿ ಡಾ ಡಿ. ಎಂ. ನಂಜುಂಡಪ್ಪ ನೇತೃತ್ವದ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ವರದಿ ಸರ್ಕಾರಕ್ಕೆ ಸಲ್ಲಿಕೆಯಾಯಿತು. ತದ ನಂತರ, 2006 ರಿಂದ ವರದಿಯ ಶಿಫಾರಸ್ಸುಗಳನ್ನು ಜಾರಿಗೊಳಿಸಲಾಗುತ್ತಿದೆ. ಉತ್ತರ ಕರ್ನಾಟಕದ ಅಭಿವೃದ್ಧಿ ಹಾಗೂ ಈ ಭಾಗದ ನೀರಾವರಿ ವಿಷಯಗಳ ಬಗ್ಗೆ ಚರ್ಚಿಸಲು ಸರ್ಕಾರ ಸಿದ್ಧವಿದೆ. ಆದರೆ, ಮೊದಲು ಪ್ರಶ್ನೋತ್ತರ ಕಲಾಪ ನಡೆಸಲು ಸಭಾಪತಿಗಳು ಆದೇಶಿಸಿದ್ದಾರೆ. ಸಭಾಪತಿಯವರ ಆದೇಶದ ನಂತರವೂ ಒತ್ತಡ ಹಾಕುವುದು ಸಂಪ್ರದಾಯ ಎನಿಸುವುದಿಲ್ಲ. ಪ್ರಶ್ನೋತ್ತರ ಕಲಾಪದ ನಂತರ ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತು ಚರ್ಚೆ ಮುಂದುವರೆಸೋಣ. ಪ್ರತಿಪಕ್ಷದ ನಾಯಕರು ಕಲಾಪ ಮುಂದುವರೆಸಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಪ್ರಶ್ನೋತ್ತರ ಕಲಾಪ ಆರಂಭವಾಗುತ್ತಿದ್ದಂತೆಯೇ ಪ್ರತಿಪಕ್ಷದ ಸದಸ್ಯರು ಪುನಃ ಧರಣಿ ಪ್ರಾರಂಭಿಸಿದ್ದರಿಂದ ಎರಡು ಬಾರಿ ಸದನದ ಕಲಾಪವನ್ನು ಮುಂದೂಡಲಾಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ