ಪ್ರಾಕ್ಸಿಸ್-2019; ರಾಷ್ಟ್ರಮಟ್ಟದ ತಾಂತ್ರಿಕ ಸಮ್ಮೇಳನ ಉದ್ಘಾಟನೆ
ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ:
ಸ್ಥಳೀಯ ಕೆಎಲ್‌ಇ ಅಭಿಯಾಂತ್ರಿಕ ಹಾಗೂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ’ಪ್ರಾಕ್ಸಿಸ್-೨೦೧೯’ ತಾಂತ್ರಿಕ ಸಮ್ಮೇಳನಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ಸಮಾರಂಭದ ಮುಖ್ಯ ಅತಿಥಿ ಬೆಂಗಳೂರಿನ ಪಜಾಕಾ ಕನ್ಸಲ್ಟನ್ಸಿ ಸರ್ವಿಸಸ್‌ನ ಸಿಇಒ ಶಾಮಸುಂದರ ಎಚ್.ಎಸ್. ಮಾತನಾಡಿ, ಹಣವೆಂದರೆ ನಮ್ಮ ಸಮಯ, ಪರಿಶ್ರಮ, ಜ್ಞಾನ, ಕೌಶಲಗಳೇ ಆಗಿವೆ. ಉದ್ಯಮಕ್ಕೆ ಬೇಕಾಗಿರುವುದು ಸಾಮಾನ್ಯ ಜ್ಞಾನ ಮತ್ತು ಪ್ರಾಯೋಗಿಕತೆ ಎಂದರು.
ಇಂದು ಅವಕಾಶಗಳಿಗೆ ಕೊರತೆ ಇಲ್ಲವಾದರೂ ವಿಷಯದ ಬಗ್ಗೆ ಆಳವಾದ ಜ್ಞಾನ ಅಗತ್ಯ. ನೋಕಿಯಾ ಮತ್ತು ಎಚ್‌ಎಂಟಿ ಕಂಪನಿಗಳು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳದ ಕಾರಣ ಹಿನ್ನಡೆ ಅನುಭವಿಸಿವೆ. ಬದಲಾವಣೆ ನಿರಂತರ ಪ್ರಕ್ರಿಯೆ ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯ ಎಂದರು.
ಇಸ್ರೊ ಮಾಜಿ ಸಂಚಾಲಕ ವಿಷ್ಣು ಮಿಸಾಳೆ ಮಾತನಾಡಿ, ವಿದ್ಯಾರ್ಥಿಗಳು ಹೊಸ ಆವಿಷ್ಕಾರಗಳತ್ತ ಗಮನ ಹರಿಸಿ ಉದ್ಯಮದ ಬೇಡಿಕೆಗನುಗುಣವಾಗಿ ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಬಿ.ಕೆ. ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಂ.ಟಿ. ಕುರಣಿ ಮಾತನಾಡಿ, ಈ ಮಹಾವಿದ್ಯಾಲಯ ಕೋರೆಯವರ ಕನಸಿನ ಕೂಸು. ಗಡಿಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ತಾಂತ್ರಿಕ ಶಿಕ್ಷಣ ನೀಡುವುದು ಕೋರೆಯವರ ಕನಸಾಗಿತ್ತು. ಈ ನಿಟ್ಟಿನಲ್ಲಿ ಅವರು ಚಿಕ್ಕೋಡಿಯಲ್ಲಿ ಕೆ.ಎಲ್.ಇ ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸಿ, ವಿದ್ಯಾರ್ಥಿಗಳಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ಕಾಲೇಜಿನ ಪ್ರಾಚಾರ್ಯ ಡಾ. ಪ್ರಸಾದ ರಾಂಪೂರೆ ಮಾತನಾಡಿ, ವಿದ್ಯಾರ್ಥಿಗಳಲ್ಲಿ ತಾಂತ್ರಿಕ ಜ್ಞಾನದ ಜೊತೆಗೆ ಪ್ರಾಯೋಗಿಕ ಕೌಶಲಗಳನ್ನು ಹೆಚ್ಚಿಸಲು ಈ ತಾಂತ್ರಿಕ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ನುಡಿದರು.
ಸಮಾರಂಭದಲ್ಲಿ ಪ್ರಾಕ್ಸಿಸ್ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು. ಕಾವ್ಯಾ ಹಾಗೂ ತಂಡದವರು ಪ್ರಾರ್ಥಿಸಿದರು. ಅರ್ಪಿತಾ ಅಥರ್ಗ ಮತ್ತು ಸಿಫಾ ಪಟ್ಟೇಕರ ಪರಿಚಯಿಸಿದರು. ಪ್ರೊ. ವಿಜಯ ಹಾಲಪ್ಪನವರ ವಂದಿಸಿದರು. ಶಿಲ್ಪಾ ವಾರದ ಮತ್ತು ಸಹನಾ ತುಪ್ಪದ ನಿರೂಪಿಸಿದರು.