ಪ್ರಗತಿವಾಹಿನಿ ಸುದ್ದಿ, ಸುವರ್ಣವಿಧಾನಸೌಧ, ಬೆಳಗಾವಿ
ಮುಂದಿನ ಎರಡು ತಿಂಗಳೊಳಗಾಗಿ ರಾಜ್ಯದ ಪಶು ಸಂಗೋಪನಾ ಮತ್ತು ಪಶು ವೈದ್ಯ ಇಲಾಖೆಯಲ್ಲಿ ಖಾಲಿ ಇರುವ 466 ಪಶು ವೈದ್ಯರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಪಶು ಸಂಗೋಪನಾ ಹಾಗೂ ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ ಅವರು ಸದನಕ್ಕೆ ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ವಿ. ಸುನೀಲ್ ಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು ನೇರ ನೇಮಕಾತಿ ಮೂಲಕ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅನುಮತಿ ಕೋರಿ ಈಗಾಗಲೇ ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂದಿನ ಎರಡು ತಿಂಗಳ ಒಳಗಾಗಿ ನೇರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿ ಪಶು ವೈದ್ಯರ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಇಲಾಖೆಯಲ್ಲಿ ಖಾಲಿ ಇರುವ ಸಹಾಯಕ ನಿರ್ದೇಶಕರ ಹುದ್ದೆಗಳನ್ನು ಬಡ್ತಿ ಮೂಲಕ ನೇಮಕ ಮಾಡಿಕೊಳ್ಳಬೇಕಾಗಿದೆ. ಪಶು ವೈದ್ಯಾಧಿಕಾರಿಗಳಿಂದ ಸಹಾಯಕ ನಿರ್ದೇಶಕರ ಹುದ್ದೆಗೆ ಬಡ್ತಿ ನೀಡುವ ಪ್ರಕ್ರಿಯೆಗೆ ಬಿ. ಕೆ. ಪವಿತ್ರ ಅವರು ಸುಪ್ರೀಂ ಕೋರ್ಟನಲ್ಲಿ ಸಲ್ಲಿಸಿರುವ ಬಡ್ತಿ ಮೀಸಲಾತಿ ಪ್ರಕರಣದ ಹಿನ್ನೆಲೆಯಲ್ಲಿ ಪಶು ವೈದ್ಯಾಧಿಕಾರಿಗಳಿಗೆ ಬಡ್ತಿ ನೀಡಲು ಸಾಧ್ಯವಾಗಿಲ್ಲ ಎಂದು ವಿವರಿಸಿದರು.
ಅಲ್ಲದೆ, ಮುಂಬಡ್ತಿ ಮೂಲಕ 171 ಜಾನುವಾರು ಅಭಿವೃದ್ಧಿ ಅಧಿಕಾರಿಗಳು, 212 ಜಾನುವಾರು ಅಧಿಕಾರಿಗಳು, 530 ಹಿರಿಯ ವೈದ್ಯಕೀಯ ಪಶುವೈದ್ಯಕೀಯ ಅಧಿಕಾರಿಗಳು, 514 ಪಶುವೈದ್ಯಕೀಯ ಪರೀಕ್ಷಕರು, 106 ಪಶುವೈದ್ಯಕೀಯ ಸಹಾಯಕರ ಹುದ್ದೆಗಳು ಹಾಗೂ ಲಿಪಿಕ ವೃಂದದ 77 ಹುದ್ದೆಗಳನ್ನು ಹಾಗೂ 30 ವಾಹನ ಚಾಲಕರ ಹುದೆಗಳನ್ನು ಭರ್ತಿ ಮಾಡಿಕೊಳ್ಳಲು ಯೋಜಿಸಲಾಗಿದೆ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಖಾಲಿ ಇರುವ ಡಿ ದರ್ಜೆ ಹುದ್ದೆಗಳ ನೇಮಕಾತಿಗೆ ವಿಶೇಷ ನೇಮಕಾತಿ ನಿಯಮಾವಳಿ ರಚಿಸಲು ಕ್ರಮವಹಿಸಲಾಗಿದೆ. ಪ್ರಸ್ತುತ ಹೊರ ಗುತ್ತಿಗೆ ಆಧಾರದ ಮೇಲೆ 1500 ಹುದ್ದೆಗಳ ಸೇವೆ ಪಡೆಯಲಾಗಿದೆ. ಅಂತೆಯೇ, 756 ಡಿ ಗ್ರೂಪ್ ಹುದ್ದೆಗಳನ್ನು ಹೆಚ್ಚುವರಿಯಾಗಿ ಹೊರ ಗುತ್ತಿಗೆ ಸೇವೆ ಪಡೆಯಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸಚಿವರು ವಿವರಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ