Latest

ಏ.17 ರಂದು ಭಗವಾನ ಮಹಾವೀರ ಜನ್ಮ ಕಲ್ಯಾಣಕ ಮಹೋತ್ಸವ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಪ್ರತಿ ವರ್ಷದಂತೆ ಈ ವರ್ಷವೂ ಸಹ ಜಿಲ್ಲಾಡಳಿತದ ಸಹಯೋಗದೊಂದಿಗೆ ಶ್ರೀ ಭಗವಾನ ಮಹಾವೀರ ಜನ್ಮ ಕಲ್ಯಾಣಕ ಮಹಾ ಮಹೋತ್ಸವವನ್ನು ಏ.೧೭ ರಂದು ಸಂಭ್ರಮದಿಂದ ಆಚರಿಸಲಾಗುವುದು ಎಂದು ಮಹೋತ್ಸವ ಸಮಿತಿ ಗೌರವ ಕಾರ್ಯದರ್ಶಿ ರಾಜೇಂದ್ರ ಜೈನ್ ಹೇಳಿದರು. 
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ೨೧ ವರ್ಷಗಳಿಂದ ಬೆಳಗಾವಿಯಲ್ಲಿ ದಿಗಂಬರ ಮತ್ತು ಶ್ವೇತಾಂಬರ ಸಮಾಜ ವತಿಯಿಂದ ಒಟ್ಟಾಗಿ ಈ ಮಹೋತ್ಸವ ಆಚರಿಸುತ್ತ ಬರಲಾಗಿದೆ. ಈ ಬಾರಿ ಜನ್ಮ ಕಲ್ಯಾಣಕ ಮಹೋತ್ಸವ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ. ಏ.೭ ರಂದು ಚಿಕ್ಕ ಬಸದಿಯಲ್ಲಿ ಆರೋಗ್ಯ ತಪಾಸಣೆ ಶಿಬಿರ, ೧೨ ರಂದು ಗೋಮಟೇಶ ವಿದ್ಯಾಪೀಠದಲ್ಲಿ ಮತ್ತು ೧೩ ರಂದು ಭರತೇಶ ಹೋಮಿಯೋಪಥಿಕ್ ಮಹಾವಿದ್ಯಾಲಯದಲ್ಲಿ ರಕ್ತದಾನ ಶಿಬಿರ, ೧೩ ರಂದು ಸಂಜೆ ಮಹಾವೀರ ಭವನದಲ್ಲಿ ಉತ್ಸಾಹ ಸಖಿ ವತಿಯಿಂದ ರಂಗೋಲಿ, ರೆಸಿಪಿ, ಯುನಿಕ್ ಬ್ಲೌಸ್, ದಿಯಾ ಡೆಕೋರೇಟ್, ಮತ್ತು ೧೪ ರಂದು ಮೆಹಂದಿ, ಕೇಕ್ ಡೆಕೊರೇಟ್, ಹೇರ್ ಸ್ಟೈಲ್, ಇತ್ಯಾದಿ ಸ್ಪರ್ಧೆಗಳು ನಡೆಯಲಿವೆ ಎಂದು ತಿಳಿಸಿದರು. 
ಏ.೧೫ ರಂದು ಬೆಳಗ್ಗೆ ೧೧ ಗಂಟೆಗೆ ಪುರುಷ ಮತ್ತು ಮಹಿಳೆಯರಿಗಾಗಿ ಭಾಷಣ ಸ್ಫರ್ಧೆ, ಸಂಜೆ ೬ ಗಂಟೆಗೆ ಪ್ರತಿಭಾ ಪುರಸ್ಕಾರ ಮತ್ತು ಣಮೋಕಾರ ಮಂತ್ರ ಮಹಿಮೆಯ ಯಕ್ಷಗಾನ ಮತ್ತು ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು, ೧೬ ರಂದು ಜೈನ ಧರ್ಮಕ್ಕೆ ಸಂಬಂಧಿಸಿದ ಪೋಶಾಖ ಸ್ಪರ್ಧೆ, ಕಿರು ನಾಟಕ, ಸಾಮೂಹಿಕ ಭಜನೆ ಮತ್ತು ನೃತ್ಯ ಸ್ಪರ್ಧೆಗಳು, ೧೭ ರಂದು ಬೆಳಗ್ಗೆ ಶೋಭಾ ಯಾತ್ರೆ ನಡೆಯಲಿದೆ. ಸಮಾದೇವಿ ಗಲ್ಲಿಯ ಮಾರುತಿ ಮಂದಿರದಿಂದ ಆರಂಭವಾಗುವ ಶೋಭಾ ಯಾತ್ರೆ ರಾಮದೇವ ಗಲ್ಲಿ, ಕಿರ್ಲೋಸ್ಕರ ರಸ್ತೆ, ರಾಮಲಿಂಗಖಿಂಡ ಗಲ್ಲಿ, ಟಳಿಕಚೌಕ, ಶೇರಿ ಗಲ್ಲಿ, ಶನಿ ಮಂದಿರ, ಎಸ್‌ಪಿಎಂ ರಸ್ತೆ, ಕೋರೆ ಗಲ್ಲಿ, ಶಹಾಪುರ, ಗೋವಾವೇಸ ಮುಖಾಂತರ ಮಹಾವೀರ ಭವನ ಬಳಿ ಮುಕ್ತಾಯವಾಗಲಿದೆ ಎಂದು ರಾಜೇಂದ್ರ ಮಾಹಿತಿ ನೀಡಿದರು.
ಶೋಭಾ ಯಾತ್ರೆಯಲ್ಲಿ ಭಾಗವಹಿಸುವ ರೂಪಕ ವಾಹನಗಳಿಗೆ ಡಾಲ್ಬಿ ಬಳಸದಂತೆ ಕಟ್ಟು ನಿಟ್ಟಾಗಿ ಸೂಚಿಸಲಾಗಿದೆ. ಮೆರವಣಿಗೆ ನಂತರ ಮಹಾಪ್ರಸಾದ ವಿತರಿಸಲಾಗುವುದು. ಅಲ್ಲದೆ ಅಂದು ಹಿಂಡಲಗಾ ಕಾರಾಗೃಹ, ಜಿಲ್ಲಾ ಆಸ್ಪತ್ರೆ, ಚಿಕ್ಕುಂಬಿಮಠ ಅನಾಥಾಶ್ರಮ ಮುಂತಾದೆಡೆಗಳಲ್ಲಿ ಆಹಾರ ದಾನ ಮಾಡಲಾಗುವುದೆಂದು ತಿಳಿಸಿದರು. 
ಸಮಿತಿಯ ಕಾರ್ಯಾಧ್ಯಕ್ಷ ರಾಜೀವ ದೊಡ್ಡಣ್ಣವರ, ಪದಾಧಿಕಾರಿಗಳಾದ ಶ್ರೀಪಾಲ ಖೇಮಲಾಪೂರೆ, ಹೀರಾಚಂದ ಕಲಮನಿ, ಕುಂತಿನಾಥ ಕಲಮನಿ, ಸುನಿಲ ಹನಮಣ್ಣವರ, ಕೀರ್ತಿಕುಮಾರ ಕಾಗವಾಡ, ರಾಜೇಶ ಕಲಮನಿ ಮೊದಲಾದವರು ಉಪಸ್ಥಿತರಿದ್ದರು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button