ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ಇಂದಿನ ತಾಂತ್ರಿಕ ಯುಗದಲ್ಲಿ ಓದುವುದು ಕಡಿಮೆಯಾಗುತ್ತಿದೆ. ಓದುವುದರಿಂದ ಜ್ಞಾನಿಗಳ, ವಿಚಾರವಾದಿಗಳ ಒಳ್ಳೆಯ ವಿಚಾರಗಳು ನಮಗೆ ಸಿಗುತ್ತವೆ. ಶಾಲೆಯ ಓದಿಗಿಂತ ಜೀವನದ ಓದುವಿಕೆ ಹೆಚ್ಚು ಕಲಿಸುತ್ತದೆ. ಓದುವುದರಿಂದ ಆತ್ಮವಿಶ್ವಾಸ ಬೆಳೆಯುತ್ತದೆ ಹಿರಿಯ ಪತ್ರಕರ್ತ ಕಿರಣ ಠಾಕೂರ ಹೇಳಿದರು.
ನಗರದ ಶಹಾಪುರದ ಸರಸ್ವತಿ ವಾಚನಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವರು ಶ್ರೀಮತಿ ಮಾಯಿ ಠಾಕೂರ ಸಭಾಗೃಹ ನವೀಕರಣ, ಮೊದಲ ಮಹಡಿಯಲ್ಲಿ ನೂತನವಾಗಿ ಕಟ್ಟಿದ ಡಾ. ಶಕುಂತಲಾ ಗಿಜರೆ ಸಭಾಗೃಹಗಳ ಉದ್ಘಾಟನಾ ಹಾಗೂ ಬೆಳಗಾವಿ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಹಲವಾರು ದಶಕಗಳಿಂದ ಓದುವ ಹವ್ಯಾಸ ಬೆಳೆಸುವ ಕಾರ್ಯ ಮಾಡುತ್ತಿರುವ ಸರಸ್ವತಿ ವಾಚನಾಲಯದ ಕೆಲಸ ಪ್ರಶಂಸನಾರ್ಹ ಎಂದರು.
ಕಿರಣ ಠಾಕೂರ ಅವರಿಗೆ ಇದೇ ಸಂದರ್ಭದಲ್ಲಿ ಬೆಳಗಾವಿ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಉದ್ಯಮಿ ಮಲ್ಲಿಕಾರ್ಜುನ ಜಗಜಂಪಿ ಮಾತನಾಡಿ, ನಾನು ಕಷ್ಟದ ಜೀವನದಿಂದ ಮೇಲೆ ಬಂದವನು. ನನ್ನ ಜೀವನದ ಪ್ರಾರಂಭದಲ್ಲಿ ಮನೆ ಮನೆಗೆ ಪತ್ರಿಕೆ ಹಂಚುವ ಕೆಲಸ ಮಾಡಿದ್ದೇನೆ. ಧರ್ಮಯೋಗ, ಭಕ್ತಿಯೋಗ, ಧ್ಯಾನಯೋಗ ಹಾಗೂ ಜ್ಞಾನಯೋಗಗಳಲ್ಲಿ ಜ್ಞಾನಯೋಗ ಮಹತ್ತರವಾದದ್ದು. ಅಂಥ ಮಹತ್ತರ ಕಾರ್ಯವನ್ನು ಹಲವಾರು ದಶಕಗಳಿಂದ ಸರಸ್ವತಿ ವಾಚನಾಲಯ ಮಾಡುತ್ತ ಬಂದಿರುವ ಕಾರ್ಯ ಅಪರೂಪವಾದುದು ಎಂದು ಹೇಳಿದರು.
ಸ್ತ್ರೀರೋಗ ತಜ್ಞ ಡಾ. ದತ್ತಪ್ರಸಾದ ಗಿಜರೆ ಮಾತನಾಡಿ, ಸರಸ್ವತಿಯನ್ನು ಒಲಿಸಿಕೊಂಡರೆ ಲಕ್ಷ್ಮಿ ತಾನಾಗಿಯೇ ಒಲಿದು ಬರುತ್ತಾಳೆ. ನಾವು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ನಾವು ಚಿಕ್ಕವರಿದ್ದಾಗ ಓದುವುದನ್ನು ಬಿಟ್ಟು ಬೇರಾವ ಮನರಂಜನೆ ಇರಲಿಲ್ಲ. ಇಂದು ಬೆಳೆಯುತ್ತಿರುವ ತಾಂತ್ರಿಕತೆಯಿಂದ ಓದು ಕೊನೆಯ ಸ್ಥಾನ ಪಡೆದಿರುವುದು ಖೇದದ ಸಂಗತಿ ಎಂದರು.
ಮಲ್ಲಿಕಾರ್ಜುನ ಜಗಜಂಪಿ, ಜಗದೀಶ ಕುಮಟೆ, ಪಿ.ಜಿ. ಕುಲಕರ್ಣಿ, ಶ್ರೀಮತಿ ಸವಿತಾ, ಮಿಲಿಂದ ಗಾಡಗೀಳ, ಮಹೇಶ ನಾಯಿಕ, ಸುಧಾ ಬಾತಖಾಂಡೆ, ಸರಳಾ ಹೇರೆಕರ, ವಿಲಾಸ ಅಧ್ಯಾಪಕ, ಅಮಿತ ಜೈನ ಮುಂತಾದವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಪಿ.ಎಸ್. ಕುಲಕರ್ಣಿ ಜ್ಞಾನದೀಪ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು.
ಡಾ. ದತ್ತಪ್ರಸಾದ ಗಿಜರೆ, ಸುಹಾಸ ಸಾಂಗ್ಲಿಕರ, ಪಿ.ಜಿ. ಕುಲಕರ್ಣಿ, ಮಿಲಿಂದ ಗಾಡಗೀಳ, ಕಿರಣ ಠಾಕೂರ, ಮಲ್ಲಿಕಾರ್ಜುನ ಜಗಜಂಪಿ, ಪ್ರದೀಪ ಕುಲಕರ್ಣಿ, ಸ್ವರೂಪಾ ಇಮಾಮದಾರ ವೇದಿಕೆಯಲ್ಲಿದ್ದರು.
ಪಿ.ಜಿ. ಕುಲಕರ್ಣಿ ಸ್ವಾಗತಿಸಿದರು. ಆನಂದರಾವ ಕುಲಕರ್ಣಿ ವಂದಿಸಿದರು. ಸಿ.ಎ. ಪುಷ್ಕರ, ಮೀರಾ ಅಜಗಾಂವಕರ, ಪ್ರಿಯಾ ಕವಟೆಕರ ನಿರೂಪಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ