Latest

ಕಬ್ಬು ಉತ್ಪಾದನೆಯಲ್ಲಿ ಪೋಷಕಾಂಶಗಳ ನಿರ್ವಹಣೆ ಮಹತ್ವ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ಕರ್ನಾಟಕದ ಸಕ್ಕರೆ ಕಾರ್ಖಾನೆಗಳ ಕಬ್ಬು ವಿಭಾಗದ ಅಧಿಕಾರಿ/ಸಿಬ್ಬಂದಿಗೆ ಕಬ್ಬು ಉತ್ಪಾದನೆಯಲ್ಲಿ ಮಣ್ಣು ಪರೀಕ್ಷೆ ಮತ್ತು ನಿರ್ವಹಣೆ ಹಾಗೂ ರಸಾಯನಿಕ ಗೊಬ್ಬರಗಳ ಬಳಕೆ ಕುರಿತು ಮಂಗಳವಾರ ವಿಚಾರ ಸಂಕಿರಣವನ್ನು  ಹಮ್ಮಿಕೊಂಡಿತ್ತು.

ವಿಚಾರ ಸಂಕಿರಣವನ್ನು ಸಂಸ್ಥೆಯ ನಿರ್ದೇಶಕ ಡಾ. ಆರ್. ಬಿ. ಖಾಂಡಗಾವೆ  ಉದ್ಘಾಟಿಸಿದರು.  ಕಬ್ಬು ವಾರ್ಷಿಕ ಬೆಳೆಯಾದ್ದರಿಂದ ಹೆಚ್ಚು ನೀರು ಮತ್ತು ಪೋಷಕಾಂಶಗಳ ಲಭ್ಯತೆ ಬೇಕಾಗಿದ್ದು, ಇವನ್ನು ಸಮಗ್ರವಾಗಿ, ಸಮಯಕ್ಕನುಸಾರವಾಗಿ ಬೆಳೆಗೆ ಬೇಕಾಗುವ ವಿವಿಧ ಸಂಧಿಗ್ಧ ಹಂತಗಳಲ್ಲಿ ಪೂರೈಕೆ ಮಾಡಿದಲ್ಲಿ ಹೆಚ್ಚಿನ ಕಬ್ಬು ಮತ್ತು ಸಕ್ಕರೆ ಇಳುವರಿ ಪಡೆಯಲು ಸಾಧ್ಯವೆಂದು ತಿಳಿಸಿದರು.

ಕಬ್ಬಿನ ಕ್ಷೇತ್ರವಾರು ಹೆಚ್ಚಿನ ಉತ್ಪಾದನೆಗೆ ಮುಖ್ಯವಾಗಿ ಮಣ್ಣು ಫಲವತ್ತತೆ ಹಾಗೂ ಸಮತೋಲನ ಪೋಷಕಾಂಶಗಳ ಪೂರೈಕೆಯು ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು. ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ, ಬೆಳಗಾವಿಯಲ್ಲಿ ಸ್ಥಾಪಿಸಲಾದ ಮಣ್ಣು ಪರೀಕ್ಷೆ ಪ್ರಯೋಗಾಲಯದ ಲಾಭವನ್ನು ಪಡೆಯುವಂತೆ ತಿಳಿಸಿದರು.

ಎನ್. ಆರ್. ಯಕ್ಕೇಲಿ, ಮುಖ್ಯಸ್ಥರು, ಕೃಷಿ ವಿಭಾಗ, ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆ, ಬೆಳಗಾವಿ ಇವರು ಸಮಸ್ಯಾತ್ಮಕ ಮಣ್ಣುಗಳು ಮತ್ತು ನಿರ್ವಹಣೆ ಕುರಿತು, ಶ್ರೀನಿವಾಸ್ ಪಿ. ಎನ್, ಮಣ್ಣು ವಿಜ್ಞಾನಿ, ಇ.ಎಲ್.ಎಸ್. ಬೆಂಗಳೂರು ಇವರು ಮಣ್ಣು ಮಾದರಿ ಮತ್ತು ಮಣ್ಣು ಪರೀಕ್ಷೆ ಮಹತ್ವ ಕುರಿತು, ಡಾ. ಸುನೀಲಕುಮಾರ ನೂಲಿ, ಸಹಾಯಕ ಪ್ರಾಧ್ಯಾಪಕರು, ಕೃಷಿ ಸಂಶೋಧನಾ ಕೇಂದ್ರ, ಸಂಕೇಶ್ವರ, ಕೃಷಿ ವಿಶ್ವವಿದ್ಯಾಲಯ, ಧಾರವಾಡ ಇವರು ಕಬ್ಬಿನಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆ ಕುರಿತು, ಡಾ. ಪಿ. ಎಲ್. ಪಾಟೀಲ್, ಪ್ರಾಧ್ಯಾಪಕರು, ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನಶಾಸ್ತ್ರ ವಿಭಾಗ, ಕೃಷಿ ವಿಶ್ವವಿದ್ಯಾಲಯ, ಧಾರವಾಡ ಇವರು ಕಬ್ಬಿನ ಉತ್ಪಾದನೆಯಲ್ಲಿ ಮಣ್ಣಿನ ಪರೀಕ್ಷೆ ಮತ್ತು ಅದರ ನಿರ್ವಹಣೆ ಕುರಿತು ಮಾಹಿತಿ ನೀಡಿದರು.

ಈ ವಿಚಾರ ಸಂಕಿರಣದಲ್ಲಿ ಕರ್ನಾಟಕದ ಸಕ್ಕರೆ ಕಾರ್ಖಾನೆಗಳ 80 ಕ್ಕೂ ಹೆಚ್ಚು ಕಬ್ಬು ವಿಭಾಗದ ಅಧಿಕಾರಿ/ಸಿಬ್ಬಂದಿ ಭಾಗವಹಿಸಿದ್ದರು. ಭಾಗವಹಿಸಿದ ಪ್ರತಿನಿಧಿಗಳಿಗೆ ಸಂಸ್ಥೆಯಿಂದ ಪರಿಣಿತರು ಮಂಡಿಸಿದ ವಿಷಯಗಳ ಕೈಪಿಡಿಯನ್ನು ನೀಡಲಾಯಿತು.

ಆರ್.ಬಿ.ಸುತಗುಂಡಿ ಸ್ವಾಗತಿಸಿದರು. ಡಾ.ಮಂಜುನಾಥ ಚೌರಡ್ಡಿ ವಂದಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button