Latest

ಕಸ್ತೂರಿ ರಂಗನ್ ವರದಿ ಸಂಪುಟ ಉಪಸಮಿತಿಯಿಂದ ತಿರಸ್ಕಾರ

 

    ಪ್ರಗತಿವಾಹಿನಿ ಸುದ್ದಿ, ಸುವರ್ಣ ವಿಧಾನ ಸೌಧ, ಬೆಳಗಾವಿ
ಪಶ್ಚಿಮ ಘಟ್ಟಗಳ ರಕ್ಷಣೆಗೆ ಕಸ್ತೂರಿ ರಂಗನ್ ಸಮಿತಿಯ ವರದಿಯನ್ನು ಸ್ಥಳೀಯರು ವಿರೋಧಿಸುತ್ತಿದ್ದಾರೆ. ವರದಿ ಅನುಷ್ಠಾನದಿಂದ ಕೈಗಾರಿಕೆ ಮತ್ತು ಇತರ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಉಂಟಾಗುವುದರಿಂದ ಈಗಾಗಲೇ ಸಚಿವ ಸಂಪುಟ ಉಪಸಮಿತಿಯು ಈ ವರದಿಯ ಶಿಫಾರಸ್ಸುಗಳನ್ನು ತಿರಸ್ಕರಿಸಿದೆ. ಸಂಪುಟ ಸಭೆಯಲ್ಲಿ ಚರ್ಚಿಸಿ ಸರ್ಕಾರ ಮುಂದಿನ ನಿರ್ಧಾರ ಕೈಗೊಳ್ಳಲಿದೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಆರ್. ಶಂಕರ್ ಅವರು ರಾಜ್ಯ ವಿಧಾನ ಪರಿಷತ್‌ನಲ್ಲಿ ತಿಳಿಸಿದರು.

ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಐವನ್ ಡಿ’ಸೋಜಾ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಸ್ತೂರಿ ರಂಗನ್ ಸಮಿತಿಯ ವರದಿಗಳ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರವು ದಿನಾಂಕ ೦೩-೧೦-೨೦೧೮ ರಂದು ನಾಲ್ಕನೇ ಕರಡು ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆಗೆ ಸಾರ್ವಜನಿಕರಿಂದ ಸಲಹೆ ಹಾಗೂ ಆಕ್ಷೇಪಣೆಗಳನ್ನು ಸಲ್ಲಿಸಲು ದಿನಾಂಕ ೦೩-೦೧-೨೦೧೯ರವರೆಗೆ ಕಾಲಾವಕಾಶ ವಿಸ್ತರಿಸಲಾಗಿದೆ.

ಕರಡು ಅಧಿಸೂಚನೆಯ ಪ್ರದೇಶಗಳಲ್ಲಿನ ನಿವಾಸಿಗಳ ಸ್ಥಳಾಂತರಕ್ಕೆ ಅವಕಾಶ ಕಲ್ಪಿಸಿಲ್ಲ ಆದ್ದರಿಂದ ಜನರು ನಿರಾಶ್ರಿತರಾಗುವ ಪ್ರಶ್ನೆ ಉದ್ಭವಿಸುವುದಿಲ್ಲ. ಕೆಲವು ನಿಯಮಗಳ ಕಾರಣದಿಂದಾಗಿ ಕೈಗಾರಿಕೆಗಳು, ಕಲ್ಲು ಗಣಿಗಾರಿಕೆ, ಮರಳು ಗಣಿಗಾರಿಕೆ, ಜಲವಿದ್ಯುತ್ ಮತ್ತಿತರ ಅಭಿವೃದ್ಧಿ ಕಾಮಗಾರಿಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ. ಕೇಂದ್ರವು ಪದೆ-ಪದೆ ಅಧಿಸೂಚನೆಯನ್ನು ಕಳಿಸುತ್ತಿದೆ ರಾಜ್ಯ ಇದನ್ನು ಒಪ್ಪುವುದಿಲ್ಲ ಎಂದು ಸಚಿವ ಆರ್.ಶಂಕರ್ ಅವರು ವಿವರಿಸಿದರು.
ಸದಸ್ಯ ಸಿ.ಎಂ.ಇಬ್ರಾಹಿಂ ಅವರು ಮಾತನಾಡಿ ಈಗಾಗಲೇ ಕಸ್ತೂರಿ ರಂಗನ್ ಸಮಿತಿ ವರದಿಯನ್ನು ಕೇರಳ ರಾಜ್ಯ ತಿರಸ್ಕರಿಸಿದೆ. ರಾಜ್ಯ ಸರ್ಕಾರವೂ ಇದನ್ನು ತಿರಸ್ಕರಿಸಬೇಕು. ೧೯೩೦ರ ದಶಕದಲ್ಲಿ ನಿರ್ಮಾಣವಾಗಿರುವ ಕೊಡಗು ಮತ್ತು ಕೇರಳ ನಡುವೆ ಸಂಪರ್ಕ ಕಲ್ಪಿಸುವ ಸೇತುವೆ ಶಿಥಿಲವಾಗಿದೆ ಅದನ್ನು ಪುನರ್ ನಿರ್ಮಿಸಬೇಕು ಎಂದರು.

ಮಾನವ ಪ್ರಾಣಿ ಸಂಘರ್ಷ ಪರಿಹಾರಕ್ಕೆ ಪ್ರಯತ್ನ

ಬರುವ ಡಿಸೆಂಬರ್ ೨೬ ರಂದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಗೆ ಭೇಟಿ ನೀಡಿ ಅಲ್ಲಿ ನಡೆಯುತ್ತಿರುವ ಕಾಡಾನೆಗಳ ದಾಳಿ, ಮಾನವ ಪ್ರಾಣ ಹಾನಿ ಕುರಿತು ಸ್ಥಳೀಯರೊಂದಿಗೆ ಖುದ್ದಾಗಿ ಚರ್ಚಿಸಿ ಸಲಹೆ ಪಡೆಯಲಾಗುವುದು. ಸಮಸ್ಯೆ ಪರಿಹಾರಕ್ಕೆ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಕೊಡಗು ಜಿಲ್ಲೆಗೂ ಕೂಡ ಭೇಟಿ ನೀಡಲಾಗುವುದು. ಮುಖ್ಯಮಂತ್ರಿಯವರು ಈ ಕಾರ್ಯಕ್ಕೆ ಸಾಕಷ್ಟು ಹಣ ಒದಗಿಸಲು ಸಿದ್ಧವಿದ್ದಾರೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಆರ್. ಶಂಕರ್ ಅವರು ರಾಜ್ಯ ವಿಧಾನ ಪರಿಷತ್‌ನಲ್ಲಿ ತಿಳಿಸಿದರು.

ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಎಂ.ಕೆ. ಪ್ರಾಣೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮೂಡಿಗೆರೆ ತಾಲೂಕಿನಲ್ಲಿ ರೈತರ ಜಮೀನಿನಲ್ಲಿ ಒಂಟಿ ಸಲಗವೊಂದು ದಾಳಿ ನಡೆಸಿದೆ. ಈ ಆನೆಯನ್ನು ಕಾಡಿಗೆ ಹಿಮ್ಮೆಟ್ಟಿಸುವ ಕಾರ್ಯಾಚರಣೆಗೆ ಸಕ್ರಬೈಲು ಆನೆ ಬಿಡಾರದಿಂದ ಎರಡು ಸಾಕಾನೆಗಳನ್ನು ನಿಯೋಜಿಸಲಾಗಿದೆ. ಕಾರ್ಯಾಚರಣೆ ಪ್ರಗತಿಯಲ್ಲಿದೆ. ಕಾಡಾನೆಗಳ ದಾಳಿ ತಡೆಗಟ್ಟಲು ೨೦೧೭-೧೮ನೇ ಸಾಲಿನಲ್ಲಿ ೨೧.೬ ಕಿ.ಮೀ ಆನೆ ನಿರೋಧಕ ಕಂದಕ, ೧೫ ಕಿ.ಮೀ ಸೌರವಿದ್ಯುತ್ ತಂತಿ ಬೇಲಿ (ಸೋಲಾರ್ ಫೆನ್ಸಿಂಗ್) ನಿರ್ಮಾಣ ಮತ್ತು ನಿರ್ವಹಣೆ ಕಾರ್ಯಕೈಗೊಳ್ಳಲಾಗಿದೆ. ಚಿಕ್ಕಮಗಳೂರು, ಕೊಪ್ಪ ಹಾಗೂ ಭದ್ರಾಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಆನೆ ಹಿಮ್ಮೆಟ್ಟಿಸುವ ೧೯ ಕ್ಯಾಂಪ್‌ಗಳಿವೆ. ವನ್ಯ ಪ್ರಾಣಿಗಳ ದಾಳಿಯಿಂದ ೨೦೧೬-೧೭ರಲ್ಲಿ ಒಬ್ಬರು ಹಾಗೂ ೨೦೧೮-೧೯ನೇ ಸಾಲಿನಲ್ಲಿ ಒಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಇವರ ಕುಟುಂಬಕ್ಕೆ ತಲಾ ೫ ಲಕ್ಷ ರೂಪಾಯಿ ದಯಾತ್ಮಕ ಧನ ಪಾವತಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಸಚಿವರ ಉತ್ತರದಿಂದ ಸಮಾಧಾನಗೊಳ್ಳದ ಸದಸ್ಯರಾದ ಎಂ.ಕೆ.ಪ್ರಾಣೇಶ್ ಹಾಗೂ ಸುನೀಲ್ ಸುಬ್ರಮಣಿ ಸದನದ ಬಾವಿಗೆ ಇಳಿದು ಧರಣಿ ನಡೆಸಲು ಮುಂದಾದರು. ಆಗ ಮಧ್ಯಪ್ರವೇಶಿಸಿದ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಅವರು ಸಚಿವರು ಉತ್ತರ ಪೂರ್ಣಗೊಳಿಸಲು ಮೊದಲು ಅವಕಾಶ ನೀಡಿ ಎಂದು ಸೂಚಿಸಿದರು. ಸಭಾಪತಿಯವರ ಸೂಚನೆ ಮೇರೆಗೆ ಸದಸ್ಯರು ತಮ್ಮ ಸ್ಥಾನಗಳಿಗೆ ಮರಳಿದರು.
ಈ ಸಂದರ್ಭದಲ್ಲಿ ಸದನದಲ್ಲಿ ಹಾಜರಿದ್ದ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಕೆ.ಜೆ.ಜಾರ್ಜ್ ಅವರು ಮಾತನಾಡಿ, ಮಾನವ ಪ್ರಾಣಿ ಸಂಘರ್ಷದ ಸಮಸ್ಯೆ ನಿನ್ನೆ ಮೊನ್ನೆಯದಲ್ಲ. ಇದರ ಪರಿಹಾರಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿವೆ. ಅರಣ್ಯದಲ್ಲಿ ವನ್ಯ ಪ್ರಾಣಿಗಳಿಗೆ ಸಾಕಾಗುವಷ್ಟು ಆಹಾರ, ನೀರು ಲಭ್ಯವಾಗದಿರುವುದು ಮುಖ್ಯ ಕಾರಣವಾಗಿದೆ. ಪ್ರಾಣಿಗಳು ಒಂದು ಬಾರಿ ಸಮೀಪದ ಕಾಫಿ ಅಥವಾ ಇತರೆ ತೋಟಗಳಿಗೆ ನುಗ್ಗಿದರೆ ಪ್ರತಿಬಾರಿ ಅಲ್ಲಿಗೆ ಬರಲು ರೂಢಿಸಿಕೊಳ್ಳುತ್ತವೆ. ಸರ್ಕಾರ, ಸಚಿವರು ನೀತಿಗಳನ್ನು ರೂಪಿಸಬಹುದು ಸ್ಥಳೀಯ ಅಧಿಕಾರಿಗಳು ಅವುಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸಿದರೆ ಮಾತ್ರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ವನ್ಯ ಜೀವಿ ರಕ್ಷಣೆಗಾಗಿ ಹೋರಾಡುವ ಸಂಘ-ಸಂಸ್ಥೆಗಳು ಮಾನವ ಜೀವ ರಕ್ಷಣೆಗೆ ಸರ್ಕಾರದೊಂದಿಗೆ ಸಹಕರಿಸಬೇಕು ಎಂದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button