Latest

ಕಾಟಾಚಾರಕ್ಕೆನ್ನುವಂತೆ ನಡೆದ ಬೆಳಗಾವಿ ಅಧಿವೇಶನ ನೀರಸ ಅಂತ್ಯ

  ಬೆಳಗಾವಿ ಅಧಿವೇಶನ ಕಲಾಪ ತೃಪ್ತಿಕರ: ಕೆ.ಆರ್. ರಮೇಶ್ ಕುಮಾರ

 ಪ್ರಗತಿವಾಹಿನಿ ಸುದ್ದಿ, ಸುವರ್ಣ ವಿಧಾನ ಸೌಧ, ಬೆಳಗಾವಿ
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ 15ನೇ ವಿಧಾನಸಭೆಯ 2ನೇ ಅಧಿವೇಶನ ತೃಪ್ತಿಕರವಾಗಿ ಮುಕ್ತಾಯಗೊಂಡಿದೆ ಎಂದು ವಿಧಾನಸಭಾಧ್ಯಕ್ಷ ಕೆ.ಆರ್. ರಮೇಶ್‌ಕುಮಾರ್ ತಿಳಿಸಿದ್ದಾರೆ.
ಹತ್ತು ದಿನಗಳ ಕಲಾಪ ಮುಕ್ತಾಯಗೊಂಡ ನಂತರ ಸುವರ್ಣ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಡಿಸೆಂಬರ್ 10 ರಿಂದ 21ರ ವರೆಗೆ 40 ಗಂಟೆ 45 ನಿಮಿಷಗಳ ಕಾಲ ಅಧಿವೇಶನದಲ್ಲಿ ಕಲಾಪಗಳು ನಡೆದಿದ್ದು, ವಿಧಾನಸಭೆಯ ಕಾರ್ಯಕಲಾಪಗಳು ಸಮಾಧಾನ ಮತ್ತು ತೃಪ್ತಿ ತಂದಿದೆ ಎಂದು ತಿಳಿಸಿದರು.

ವಿಧಾನಸಭೆಯ ವಿವಿಧ ಸಮಿತಿಗಳ ವರದಿಗಳನ್ನು ಸದನದಲ್ಲಿ ಮಂಡಿಸಲಾಗಿದೆ ಹಾಗೂ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡಾವಳಿಯ ವಿವಿಧ ನಿಯಮಾವಳಿಗಳಂತೆ ಚರ್ಚೆಗಳನ್ನು ನಡೆಸಲಾಗಿದೆ. ಒಟ್ಟು 3060 ಪ್ರಶ್ನೆಗಳನ್ನು ಸ್ವೀಕರಿಸಲಾಗಿದ್ದು, ಸದನದಲ್ಲಿ ಉತ್ತರಿಸುವ 146ಕ್ಕೆ ಹಾಗೂ ಲಿಖಿತ ಮೂಲಕ ಉತ್ತರಿಸುವ 2217 ಪ್ರಶ್ನೆಗಳ ಪೈಕಿ 1978 ಪ್ರಶ್ನೆಗಳಿಗೆ ಉತ್ತರಗಳನ್ನು ಸ್ವೀಕರಿಸಲಾಗಿದೆ ಎಂದರು.

ಒಟ್ಟು 12 ವಿಧೇಯಕಗಳನ್ನು ಮಂಡಿಸಲಾಗಿದ್ದು, 8 ವಿಧೇಯಕಗಳನ್ನು ಅಂಗೀಕರಿಸಲಾಗಿದೆ. ಕರ್ನಾಟಕ ವಿಧಾನಸಭೆಯಿಂದ ಅಂಗೀಕಾರವಾದ ರೂಪದಲ್ಲಿ ಮತ್ತು ಕರ್ನಾಟಕ ವಿಧಾನ ಪರಿಷತ್ತಿನಿಂದ ತಿದ್ದುಪಡಿಯೊಂದಿಗೆ ಅಂಗೀಕಾರವಾದ ರೂಪದಲ್ಲಿರುವ 2018ನೇ ಸಾಲಿನ ತಾಂತ್ರಿಕ ವಿಶ್ವವಿದ್ಯಾಲಯ, ಬೆಂಗಳೂರು (ತಿದ್ದುಪಡಿ) ವಿಧೇಯಕವನ್ನು ಪುನರ್‌ಪರ್ಯಾಲೋಚಿಸಿ ಅಂಗೀಕರಿಸಲಾಗಿದೆ. ರಾಜೀವ್‌ಗಾಂಧೀ ಆರೋಗ್ಯ ವಿಶ್ವವಿದ್ಯಾಲಯದ ಸೆನೆಟ್‌ಗೆ 3 ಜನ ಸದಸ್ಯರನ್ನು ನಾಮನಿರ್ದೇಶನ ಮಾಡಲು ವಿಧಾನಸಭೆ ಸಭಾಧ್ಯಕ್ಷರಿಗೆ ಅಧಿಕಾರ ನೀಡಿರುತ್ತದೆ ಎಂದು ಅವರು ವಿವರಿಸಿದರು.

ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತು, ಮರಳು ಸಮಸ್ಯೆ ಕುರಿತು, ನೀರಾವರಿ ವಿಷಯಗಳ ಕುರಿತು ಹಾಗೂ ಬೆಂಗಳೂರಿನ ಬಿ.ಎಂ. ಕಾವಲು ಪ್ರದೇಶದ ಸರ್ಕಾರಿ ಭೂಮಿ ಪರಭಾರೆ ವಿಷಯಗಳ ಕುರಿತು ಮಹತ್ವದ ಚರ್ಚೆಯ ಅಗತ್ಯವಿತ್ತು. ಅದನ್ನು ಹೊರತುಪಡಿಸಿ ಒಟ್ಟಾರೆ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆದ ಅಧಿವೇಶನದ ಕಾರ್ಯಕಲಾಪಗಳು ಸಮಾಧಾನ ತಂದಿವೆ ಎಂದು ಸಭಾಧ್ಯಕ್ಷರು ತಿಳಿಸಿದರು.

ಪರಿಷತ್ ನಲ್ಲಿ 9 ವಿಧೇಯಕಗಳ ಅಂಗೀಕಾರ -ಕೆ.ಪ್ರತಾಪ ಚಂದ್ರಶೆಟ್ಟಿ

ವಿಧಾನ ಪರಿಷತ್ತಿನ 136 ನೇ ಅಧಿವೇಶನ ಹತ್ತು ದಿನಗಳ ಕಾಲ ನಡೆಯಿತು. ವಿಧಾನ ಸಭೆಯಿಂದ ಅಂಗೀಕೃತವಾದ ರೂಪದಲ್ಲಿರುವ ಒಂಬತ್ತು ವಿಧೇಯಕಗಳಿಗೆ ಮೇಲ್ಮನೆ ಅಂಗೀಕಾರ ನೀಡಿತು. ಶೂನ್ಯ ವೇಳೆಯಲ್ಲಿ 47 ಸೂಚನೆಗಳನ್ನು ಸ್ವೀಕರಿಸಿ, 22 ಸೂಚನೆಗಳಿಗೆ ಉತ್ತರಿಸಲಾಯಿತು ಎಂದು ತಿಳಿಸಿದ ಸಭಾಪತಿ ಕೆ.ಪ್ರತಾಪ ಚಂದ್ರಶೆಟ್ಟಿ ಅವರು ಸದನವನ್ನು ಅನಿರ್ದಿಷ್ಟಾವಧಿಯವರೆಗೆ ಮುಂದೂಡಲಾಗಿದೆ ಎಂದು ಪ್ರಕಟಿಸಿದರು.
ಮೇಲ್ಮನೆಯಲ್ಲಿ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಕಲಾಪ ಆರಂಭವಾಗುತ್ತಿದ್ದಂತೆ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ಚರ್ಚೆಗೆ ಅವಕಾಶ ನೀಡಬೇಕೆಂದು ಪ್ರತಿಪಕ್ಷದ ಸದಸ್ಯರು ಧರಣಿ ಮುಂದುವರೆಸಿದರು. ಸದನವನ್ನು ಮಧ್ಯಾಹ್ನ 12 ಗಂಟೆಗೆ ಸಭಾಪತಿಗಳು ಮುಂದೂಡಿದರು. ಬಳಿಕ ಮಧ್ಯಾಹ್ನ 12 ಗಂಟೆಗೆ ಸದನ ಮರುಸಮಾವೇಶಗೊಂಡಾಗ ಪ್ರತಿಪಕ್ಷಗಳ ಪ್ರತಿಭಟನೆಯ ಮಧ್ಯೆಯೇ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಸಭಾನಾಯಕಿ ಡಾ|| ಜಯಮಾಲಾ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಭೈರೇಗೌಡ ಅವರು ವಿಧಾನ ಸಭೆಯಿಂದ ಅಂಗೀಕೃತವಾದ ರೂಪದಲ್ಲಿರುವ ಎರಡು ವಿಧೇಯಕಗಳನ್ನು ಮಂಡಿಸಿ, ರಾಜ್ಯ ವಿಧಾನ ಪರಿಷತ್ತಿನಿಂದ ಅಂಗೀಕಾರ ಪಡೆದರು.
ಪ್ರಸ್ತುತ ಅಧಿವೇಶನದಲ್ಲಿ 1347 ಪ್ರಶ್ನೆಗಳನ್ನು ಸ್ವೀಕರಿಸಲಾಗಿತ್ತು. 150 ಪ್ರಶ್ನೆಗಳು ಚುಕ್ಕೆ ಗುರುತಿನ ಪ್ರಶ್ನೆಗಳಾಗಿದ್ದವು. 123 ಪ್ರಶ್ನೆಗಳಿಗೆ ಸದನದಲ್ಲಿ ಉತ್ತರಿಸಲಾಯಿತು. 27 ಪ್ರಶ್ನೆಗಳಿಗೆ ಉತ್ತರಗಳನ್ನು ಮಂಡಿಸಲಾಯಿತು. ಒಟ್ಟು 1197 ಚುಕ್ಕೆ ಗುರುತಿಲ್ಲದ ಪ್ರಶ್ನೆಗಳ ಪೈಕಿ 889 ಪ್ರಶ್ನೆಗಳಿಗೆ ಸದನದಲ್ಲಿ ಉತ್ತರವನ್ನು ಮಂಡಿಸಲಾಯಿತು.
ನಿಯಮ 58ರ ಅಡಿ ಅರ್ಧ ಗಂಟೆ ಕಾಲಾವಧಿ ಚರ್ಚೆಯಡಿ ಮೂರು ಸೂಚನೆಗಳನ್ನು ಸ್ವೀಕರಿಸಲಾಯಿತು. ನಿಯಮ 72ರ ಅಡಿಯಲ್ಲಿ 224 ಸೂಚನೆಗಳನ್ನು ಸ್ವೀಕರಿಸಿ, ಆ ಪೈಕಿ ಎಂಟು ಸೂಚನೆಗಳಿಗೆ ಸದನದಲ್ಲಿ ಚರ್ಚಿಸಿ ಉತ್ತರಿಸಲಾಯಿತು. ಉಳಿದ 216 ಸೂಚನೆಗಳ ಪೈಕಿ 41 ಸೂಚೆನಗಳಿಗೆ ಉತ್ತರಗಳನ್ನು ಸದನದಲ್ಲಿ ಮಂಡಿಸಲಾಯಿತು. ನಿಯಮ 330ರ ಅಡಿಯಲ್ಲಿ 105 ಸೂಚನೆಗಳನ್ನು ಸ್ವೀಕರಿಸಿ, ಆ ಪೈಕಿ ಏಳು ಸೂಚನೆಗಳನ್ನು ಸದನದಲ್ಲಿ ಚರ್ಚಿಸಿ ಉತ್ತರಿಸಲಾಯಿತು. ಉಳಿದ 98 ಸೂಚನೆಗಳ ಪೈಕಿ 19 ಸೂಚನೆಗಳಿಗೆ ಸದನದಲ್ಲಿ ಉತ್ತರಗಳನ್ನು ಮಂಡಿಸಲಾಯಿತು.
ನಿಯಮ 59ರ ಅಡಿಯಲ್ಲಿ ಮೂರು ಸೂಚನೆಗಳನ್ನು ಸ್ವೀಕರಿಸಿ, ಆ ಪೈಕಿ ಎರಡು ಸೂಚನೆಗಳನ್ನು ನಿಯಮ 68ಕ್ಕೆ ಪರಿರ್ವತಿಸಿ ಸರ್ಕಾರದಿಂದ ಉತ್ತರಿಸಲಾಯಿತು. ನಿಯಮ 68ರ ಅಡಿಯಲ್ಲಿ ಎರಡು ಸೂಚನೆಗಳನ್ನು ಸ್ವೀಕರಿಸಲಾಗಿರುತ್ತದೆ ಎಂದು ಸಭಾಪತಿ ಕೆ.ಪ್ರತಾಪ ಚಂದ್ರಶೆಟ್ಟಿ ಅವರು ವಿಧಾನ ಪರಿಷತ್ತಿನ ಪ್ರಸ್ತುತ ಅಧಿವೇಶನದ ಉಪವೇಶನದ ಸಾರಾಂಶದಲ್ಲಿ ದಾಖಲಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button