Latest

ಕಾಲ್ಪನಿಕ ವೇತನ ಸಮಸ್ಯೆ ಪರಿಹಾರಕ್ಕೆ ಆಯವ್ಯಯದಲ್ಲಿ ರೂ.359.87 ಕೋಟಿ ಅನುದಾನ ಒದಗಿಸಿ

ಅಧಿಕಾರಿಗಳೇ ಹೇಳಿದ್ದು ವೇದ ವಾಕ್ಯವಾದರೆ ಸದನ ಸಮಿತಿಗಳ ಬಗ್ಗೆ ಜನರಲ್ಲಿ ಅಪನಂಬಿಕೆ ಹುಟ್ಟುತ್ತದೆ -ಹೊರಟ್ಟಿ

 

   ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ

ಖಾಸಗಿ ಅನುದಾನಿತ ಶೈಕ್ಷಣಿಕ ಸಂಸ್ಥೆಗಳ ಸಿಬ್ಬಂದಿ ಕಾಲ್ಪನಿಕ ವೇತನ ಸಂಬಂಧ ಉಂಟಾಗಿರುವ ಸಮಸ್ಯೆ ಪರಿಹರಿಸುವಂತೆ ವಿಧಾನಪರಿಷತ್ ಸದಸ್ಯ, ಮಾಜಿ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಮುಖ್ಯಮಂತ್ರಿಗೆ ಪತ್ರ ಬರೆದಿದ್ದು, ಆಯವ್ಯಯದಲ್ಲಿ ರೂ.359.87 ಕೋಟಿ ಅನುದಾನ ಒದಗಿಸುವಂತೆ ಆಗ್ರಹಿಸಿದ್ದಾರೆ.

ಅವರು ಬರೆದಿರುವ ಪತ್ರದ ಪೂರ್ಣ ಪಾಠ ಹೀಗಿದೆ:

ಖಾಸಗಿ ಅನುದಾನಿತ ಶೈಕ್ಷಣಿಕ ಸಂಸ್ಥೆಗಳ ಸಿಬ್ಬಂದಿ (ವೇತನ, ನಿವೃತ್ತಿ ವೇತನ ಮತ್ತು ಇತರೆ ಸೌಲಭ್ಯಗಳ ನಿಯಂತ್ರಣ) ವಿಧೇಯಕ 2014ನ್ನು ಬೆಳಗಾವಿ ವಿಧಾನ ಪರಿಷತ್ತಿನಲ್ಲಿ ಅನುಮೋದನೆಗಾಗಿ ಮಂಡಿಸಿದಾಗ, ಆಗಿನ ಉನ್ನತ ಶಿಕ್ಷಣ ಸಚಿವರಾಗಿದ್ದ ಆರ್.ವಿ. ದೇಶಪಾಂಡೆ ಕಾಲ್ಪನಿಕ ವೇತನ ಸಮಸ್ಯೆ ಪರಿಹಾರಕ್ಕೆ ಸರ್ಕಾರವು 285 ರಿಂದ 300 ಕೋಟಿ ಅನುದಾನ ನೀಡಲು ಸಿದ್ಧವಿದ್ದು, ವಿಧೇಯಕಕ್ಕೆ ಒಪ್ಪಿಗೆ ನೀಡಲು ಕೋರಿದ್ದರಿಂದ ಈ ಷರತ್ತನ್ನು ಹಾಕಿ ವಿಧೇಯಕಕ್ಕೆ ಸದನವು ಒಪ್ಪಿಗೆ ನೀಡಿತ್ತು.

ಈ ಕುರಿತು ಅಧ್ಯಯನ ನಡೆಸಿ ವಿಧಾನ ಪರಿಷತ್ತಿನ ವಿಶೇಷ ಸದನ ಸಮಿತಿಯನ್ನು ನನ್ನ ಅಧ್ಯಕ್ಷತೆಯಲ್ಲಿ ರಚಿಸಲಾಗಿತ್ತು. ಸಮಿತಿ ಸುಮಾರು 6 ತಿಂಗಳ ಅಧ್ಯಯನ ಹಾಗೂ ಅಧಿಕಾರಿಗಳೊಂದಿಗೆ ಸತತ ಚರ್ಚೆ ನಡೆಸಿ ಮಾರ್ಚ್ 17, 2015ರಂದು ರೂ. 351.80 ಕೋಟಿ ಅನುದಾನ ಬೇಕಾಗಬಹುದೆಂದು ತಿಳಿಸಿ, ಅದನ್ನು ಆಗಿನ ಉನ್ನತ ಶಿಕ್ಷಣ ಸಚಿವರಾಗಿದ್ದ ಆರ್.ವಿ. ದೇಶಪಾಂಡೆಯವರಿಗೆ ವರದಿಯನ್ನು ವಿಶೇಷ ಸದನ ಸಮಿತಿಯು ನೀಡಿತ್ತು. ಈ ವರದಿಯನ್ನು ತಯಾರಿಸಲು ಉನ್ನತ ಶಿಕ್ಷಣ, ಶಿಕ್ಷಣ ಇಲಾಖೆ ಹಾಗೂ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಯ ಅಧಿಕಾರಿಗಳು ನೀಡಿದ ನಿಖರ ಮಾಹಿತಿಗಳೇ ಆಧಾರವಾಗಿದ್ದವು. ನಂತರ ಇದೇ ಅಧಿಕಾರಿಗಳು ಹಿಂದಿನ ಬಾಕಿಯನ್ನು ಸೇರಿಸಿ ಸುಮಾರು 5 ಸಾವಿರ ಕೋಟಿ ಹಣ ಬೇಕಾಗಬಹುದೆಂದು ವ್ಯತಿರಿಕ್ತವಾದ ಅಭಿಪ್ರಾಯವನ್ನು ಸರ್ಕಾರಕ್ಕೆ ಹಾಗೂ ಸಚಿವರಿಗೆ ನೀಡಲಾಯಿತು.
ನಂತರ ಉನ್ನತ ಶಿಕ್ಷಣ ಸಚಿವರಾಗಿದ್ದ ಬಸವರಾಜ ರಾಯರೆಡ್ಡಿಯವರು ಅಧಿಕಾರಿಗಳ ಅಭಿಪ್ರಾಯದಂತೆ ರೂ.5 ಸಾವಿರ ಕೋಟಿ ಹಣ ಬೇಕಾಗಬಹುದೆಂದು ಬೆಳಿಸಿದ್ದನ್ನು ಪುನರ್‌ಪರಿಶೀಲಿಸಲು ವಿಶೇಷ ಸದನ ಸಮಿತಿಗೆ ತಿಳಿಸಿದ್ದರಿಂದ ಮತ್ತೆ ಉನ್ನತ ಶಿಕ್ಷಣ ಹಾಗೂ ಪ್ರಾಥಮಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಂಬಂಧಿಸಿದ ಶಿಕ್ಷಕರ ಸಂಘಟನೆಗಳೊಂದಿಗೆ ಒಟ್ಟಾರೆ 6 ಸಭೆಗಳನ್ನು ನಡೆಸಿ ಅಂತಿಮವಾಗಿ ರೂ. 359.87 ಕೋಟಿ ಅನುದಾನ ಬೇಕಾಗುವುದೆಂದು ಫೆ.6, 2018ರಂದು ಪೂರಕ ವರದಿಯನ್ನು ವಿಧಾನ ಪರಿಷತ್ತಿನ ಸಭಾಪತಿಗಳಾಗಿದ್ದ ಡಿ. ಹೆಚ್. ಶಂಕರಮೂರ್ತಿಯವರಿಗೆ ನೀಡಲಾಯಿತು. ಈ ವರದಿಗೂ ಮೂಲ ಅಂಕಿ-ಸಂಖ್ಯೆ ಹಾಗೂ ಮಾಹಿತಿಗಳನ್ನು ಒದಗಿಸಿದ ಅಧಿಕಾರಿಗಳು ಮತ್ತೆ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡುತ್ತಿರುವುದು ವಿಪರ್ಯಾಸ. ಸದನ ಸಮಿತಿಗೆ ಒಂದು ಮಾಹಿತಿ ಹಾಗೂ ಸರ್ಕಾರಕ್ಕೆ ಒಂದು ಮಾಹಿತಿ ನೀಡಲಾಗುತ್ತಿದೆ.
ಇಲಾಖೆಯವರು ಕಾಲ್ಪನಿಕ ವೇತನ ನಿಗದಿಯೊಂದಿಗೆ ಬಾಕಿ ವೇತನದ ಖರ್ಚನ್ನು ಲೆಕ್ಕಹಾಕಿ ವಾರ್ಷಿಕ ವೆಚ್ಚ ರೂ.5081 ಕೋಟಿಗಳೆಂದು ಸರ್ಕಾರಕ್ಕೆ ವರದಿ ನೀಡುತ್ತಿದ್ದಾರೆ. ಆದರೆ ವಿಶೇಷ ಸದನ ಸಮಿತಿಯಲ್ಲಿ ಎಲ್ಲ ಶಿಕ್ಷಕರ ಸಂಘನೆಗಳು ಬಾಕಿ ವೇತನವನ್ನು ಪಡೆಯುವುದಿಲ್ಲವೆಂದು ತಿಳಿಸಿದ್ದಾರೆ. ಇದರಿಂದಾಗಿ ಕಾಲ್ಪನಿಕ ವೇತನ ನಿಗದಿಪಡಿಸಿದಲ್ಲಿ ವಾರ್ಷಿಕವಾಗಿ ರೂ.359.87 ಕೋಟಿ ಅನುದಾನ ಸಾಕಾಗುತ್ತದೆ ಎಂಬುದನ್ನು ನಾನು ಸೇರಿದಂತೆ ಎಲ್ಲ ವಿಧಾನ ಪರಿಷತ್ ಸದಸ್ಯರು ಹಾಗೂ ಶಿಕ್ಷಕರ ಸಂಘಟನೆಗಳ ಪದಾಧಿಕಾರಿಗಳು ಬೆಳಗಾವಿಯಲ್ಲಿ ನಡೆದ ವಿಧಾನ ಮಂಡಳದ ಅಧಿವೇಶನದಲ್ಲಿ ತಮಗೆ ಮನವರಿಕೆ ಮಾಡಿಕೊಟ್ಟಾಗ ತಾವು ಒಪ್ಪಿಗೆ ಕೊಟ್ಟಿರುವಿರಿ. ಆದರೆ ಈಗ ಅಧಿಕಾರಿಗಳು ನೀಡುವ ವ್ಯತಿರಿಕ್ತ ಮಾಹಿತಿಯಿಂದಾಗಿ ಅನುದಾನವನ್ನು ಮುಂದಿನ ಬಜೆಟ್‌ನಲ್ಲಿ ಒದಗಿಸುವಲ್ಲಿ ಮೀನಾ-ಮೇಷ ಎಣಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ನಾನು ಸಭಾಪತಿಯಾಗಿದ್ದಾಗ ತಮ್ಮೊಡನೆ ವರದಿ ಕುರಿತು ಇಲಾಖೆಗಳ ಜೊತೆ ಸಭೆ ನಡೆಸಿದ್ದೇನೆ. ನಾನು ಕೊಟ್ಟಂತಹ ವರದಿ ಸಿದ್ದಪಡಿಸಲು ಸುಮಾರು 9 ರಿಂದ 10 ತಿಂಗಳ ಕಷ್ಟಪಟ್ಟಿದ್ದೇನೆ. 7 ಬಾರಿ ವಿಧಾನಪರಿಷತ್ತ ಸದಸ್ಯನಾಗಿ, ಶಿಕ್ಷಣ ಮಂತ್ರಿಯಾಗಿದ್ದ ನಾನು 2 ಸಲ ವರದಿ ಕೊಟ್ಟರೂ ಸರಕಾರ ಈ ಬಗ್ಗೆ ಗಮನ ಹರಿಸದಿರುವದು ಬೇಸರದ ವಿಷಯ. ಈ ಸಮಿತಿಯಲ್ಲಿ 13 ಶಾಸಕರು ಅನೇಕ ಸಲ ಸಭೆ ಮಾಡಿ ಚರ್ಚಿಸಿ ವರದಿ ತಯಾರಿಸಿದ್ದೇವೆ. ಅಧಿಕಾರಿಗಳೇ ಹೇಳಿದ್ದು ವೇದ ವಾಕ್ಯವಾದರೆ ಸದನ ಸಮಿತಿಗಳ ಬಗ್ಗೆ ಜನರಲ್ಲಿ ಅಪನಂಬಿಕೆ ಹುಟ್ಟುತ್ತದೆ. ಈ ವರದಿಯಲ್ಲಿ ನನ್ನದು ವ್ಯಯಕ್ತಿಕ ಹಿತಾಸಕ್ತಿಯಿಲ್ಲವೆಂಬುದನ್ನು ನಾನು ಸ್ಪಷ್ಟಪಡಿಸುತ್ತೇನೆ.

ಆದ್ದರಿಂದ ಆ.4 1991ರಿಂದ ಪ್ರಾರಂಭವಾಗಿರುವ ಈ ಸಮಸ್ಯೆ ನಿಮ್ಮ ಅವಧಿಯಲ್ಲಿ ಅಂತ್ಯವಾಗಲೇಬೇಕೆಂಬುದು ಎಲ್ಲಾ ಶಿಕ್ಷಕ ವರ್ಗದವರ ಒತ್ತಾಸೆಯಾಗಿದೆ. ಹಲವಾರು ಅನುತ್ಪಾದಕ ವೆಚ್ಚಗಳಿಗೆ ಸರ್ಕಾರದ ಹಣ ಪೋಲಾಗುತ್ತಿರುವುದು ನಿಮಗೂ ತಿಳಿದಿದೆ.

ಹಾಗಾಗಿ ಈ ಸಾಲಿನ ಆಯವ್ಯಯದಲ್ಲಿ ರೂ.360 ಕೋಟಿ ಅನುದಾನವನ್ನು ಒದಗಿಸುವುದರೊಂದಿಗೆ ವಿಶೇಷ ಸದನ ಸಮಿತಿಯ ಫೆ.6, 2018ರಂದು ನೀಡಿದ ವರದಿಯ ಶಿಫಾರಸ್ಸುಗಳನ್ನು ಯಥಾವತ್ತಾಗಿ ಜಾರಿಗೊಳಿಸಲು ಕೋರುತ್ತೇನೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button