Latest

ಕುಟುಂಬದ ಆರೋಗ್ಯದ ಬಗ್ಗೆ ಪೊಲೀಸರು ಗಮನಹರಿಸಿ ; ಐಜಿ  ರಾಘವೇಂದ್ರ ಸುಹಾಸ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಪೊಲೀಸ್ ಇಲಾಖೆ ಸಿಬ್ಬಂದಿಯು ಹಗಲು ರಾತ್ರಿಯನ್ನು ಲೆಕ್ಕಿಸದೇ ತಮ್ಮ ಕುಟುಂಬ ಮತ್ತು ಆರೋಗ್ಯದ ಬಗ್ಗೆ ಚಿಂತೆ ಮಾಡದೆ ನಿಷ್ಠೆಯಿಂದ ಕಾರ್ಯನಿರ್ವಹಿಸುವ ಮೂಲಕ ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುತ್ತಿದ್ದಾರೆ ಎಂದು ಬೆಳಗಾವಿ ಉತ್ತರ ವಲಯದ ಆರಕ್ಷಕ ಮಹಾನಿರೀಕ್ಷಕ ಎಚ್.ಜಿ. ರಾಘವೇಂದ್ರ ಸುಹಾಸ ಹೇಳಿದರು.
ಬೆಳಗಾವಿ ಪೊಲೀಸ್ ಕಮಿಷನರೇಟ್ ಹಾಗೂ ಜಿಲ್ಲಾ ಪೊಲೀಸ್ ವತಿಯಿಂದ ಮಂಗಳವಾರ ನಡೆದ ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
೧೯೬೫ ರಿಂದ ಪ್ರತಿ ವರ್ಷ ಏಪ್ರಿಲ್ ೨ ರಂದು ಪೊಲೀಸ್ ಧ್ವಜ ದಿನಾಚರಣೆಯನ್ನು ಇಲಾಖೆ ವತಿಯಿಂದ ಎಲ್ಲ ಪೊಲೀಸ್ ಘಟಕದ ಕೇಂದ್ರ ಸ್ಥಾನಗಳಲ್ಲಿ ಆಚರಿಸುತ್ತ ಬರಲಾಗುತ್ತಿದೆ. ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿದವರಿಗೆ ಹಾಗೂ ಅವರ ಕುಟುಂಬದವರಿಗೆ ಗೌರವ ನೀಡುವ ಉದ್ದೇಶದಿಂದ ಈ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು.
ಪೊಲೀಸ್ ಇಲಾಖೆಯ ಸಿಬ್ಬಂದಿಗೆ ಅನುಕೂಲವಾಗುವ ದೃಷ್ಟಿಯಿಂದ ಪೊಲೀಸ್ ಭವನವನ್ನು ನಿರ್ಮಾಣ ಮಾಡಲಾಗುವುದು. ಮಕ್ಕಳ ಪಾಲನೆ ಪೋಷಣೆ ಅವರ ಆರೋಗ್ಯ ಹಾಗೂ ವಿದ್ಯಾಭ್ಯಾಸದ ಕಡೆಗೆ ಗಮನ ವಹಿಸಿ ಎಂದು ಇಲಾಖೆ ಸಿಬ್ಬಂದಿಗೆ ಕಿವಿಮಾತು ಹೇಳಿದರು.
ಬೆಳಗಾವಿ ವಿಭಾಗದ ಆಂತರಿಕ ಭದ್ರತೆ ನಿವೃತ್ತ ಎಸ್.ಪಿ ದಯಾನಂದ ಎಸ್. ಪವಾರ ಮಾತನಾಡಿ, ಕರ್ತವ್ಯದ ಜೊತೆಗೆ ಸದೃಢವಾದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತಿ ಮುಖ್ಯ ಎಂದರು.
ನಿವೃತ್ತ ಪಿಎಸ್‌ಐ ಡಿ.ಎಂ. ಮುಲ್ಲಾ ಮಾತನಾಡಿ, ಇಲಾಖೆಯಲ್ಲಿ ಎಲ್ಲರೂ ಶಿಸ್ತು ಬದ್ಧವಾಗಿ ಕಾರ್ಯನಿರ್ವಹಿಸಿ ಪೊಲೀಸ್ ಇಲಾಖೆಗೆ ಗೌರವ ತರುವ ಕೆಲಸ ಮಾಡಬೇಕಾದದ್ದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದರು.
ನಿವೃತ್ತ ಪೊಲೀಸ್ ಅಧಿಕಾರಿಗಳಿಗೆ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ಸಿ.ಎ.ಆರ್. ಬೆಳಗಾವಿ ನಗರ, ಡಿ.ಎ.ಆರ್ ಬೆಳಗಾವಿ ಜಿಲ್ಲೆ, ಬೆಳಗಾವಿ ಜಿಲ್ಲಾ ನಾಗರಿಕ ತುಕಡಿ, ಬೆಳಗಾವಿ ನಗರ ಮಹಿಳಾ ತುಕಡಿ, ಕೆಎಸ್‌ಆರ್‌ಪಿ ಮಹಿಳಾ ತುಕಡಿಗಳ ಗುಂಪಿನ ನಾಯಕರ ನೇತೃತ್ವದಲ್ಲಿ ಪಥಸಂಚಲನ ನಡೆಯಿತು. ಇದೇ ವೇಳೆ  ಪೊಲೀಸ್ ಧ್ವಜಗಳ ಬಿಡುಗಡೆ ಮತ್ತು ವಿತರಣೆ ಕಾರ್ಯಕ್ರಮ ನಡೆಯಿತು.
ಬೆಳಗಾವಿ ನಗರ ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ ಕುಮಾರ ಪುಷ್ಪ ಗುಚ್ಛ ನೀಡಿ ಅತಿಥಿಗಳನ್ನು ಸ್ವಾಗತಿಸಿದರು. ಪೊಲೀಸ್ ವರಿಷ್ಠಾಧಿಕಾರಿ ಸಿ.ಎಚ್. ಸುಧೀರ ಕುಮಾರ ರೆಡ್ಡಿ ವಂದಿಸಿದರು. ಕಾನೂನು ಮತ್ತು ಸುವ್ಯವಸ್ಥೆ ಉಪಪೊಲೀಸ್ ಆಯುಕ್ತ ಸೀಮಾ ಲಾಟ್ಕರ್, ನಗರದ ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತ ಯಶೋಧಾ ವಂಟಗೋಡಿ, ಬೆಳಗಾವಿಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮ ಲಕ್ಷ್ಮಣ ಅರಸಿದ್ದಿ, ಮಾರ್ಕೆಟ್ ಠಾಣೆಯ ಎಸಿಪಿ ಎಸ್.ವಿ. ಭರಮನಿ ಹಾಗೂ ಕೆ.ಎಸ್.ಆರ್.ಪಿ, ಡಿ.ಆರ್ ನ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button